Advertisement

ಮಂಗಳೂರು: ಫಲಾನುಭವಿಗಳ ಸಮೇಳನದಲ್ಲಿ ಸಾವಿರಾರು ಮಂದಿಯ ಸಮ್ಮಿಲನ

12:28 PM Mar 17, 2023 | Team Udayavani |

ಮಹಾನಗರ: ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ದ.ಕ. ಜಿಲ್ಲಾ ಮಟ್ಟದ ಫಲಾನುಭವಿಗಳ ಬೃಹತ್‌ ಸಮ್ಮೇಳನ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಗುರುವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement

ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮೂಡುಬಿದಿರೆ, ಉಳ್ಳಾಲ ತಾಲೂಕಿನಿಂದ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜಿಲ್ಲಾಧಿಕಾರಿ ಡಾ| ಎಂ.ಆರ್‌. ರವಿ, ಜಿ.ಪಂ. ಸಿಇಒ ಡಾ| ಕುಮಾರ್‌ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಪ್ರಮುಖರು ಫಲಾನುಭವಿಗಳನ್ನು ಸಮ್ಮೇಳನಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಸಭಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ಪುಷ್ಕಳ್‌ ಕುಮಾರ್‌ ತೋನ್ಸೆ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.

ವಿವಿಧ ಇಲಾಖೆಗಳ ವತಿಯಿಂದ ಜನರಿಗೆ ಲಭ್ಯವಾಗುವ ಯೋಜನೆಯ ಪೈಕಿ ಆಯ್ದ ಸವಲತ್ತುಗಳನ್ನು ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಈ ಪೈಕಿ ಡಾ| ಬಾಬು ಜಗಜೀವನ್‌ರಾಂ ದ್ವಿಚಕ್ರ/ತ್ರಿಚಕ್ರ ಸರಕು ಸಾಗಾಣಿಕೆ ಯೋಜನೆಯಡಿ ವಿತರಿಸಲಾಗುವ ವಾಹನಗಳನ್ನು ಮೈದಾನದಲ್ಲಿ ಹಸ್ತಾಂತರಿಸಲಾಯಿತು.

ಭರ್ಜರಿ ಊಟ
ಆಗಮಿಸಿದ ಜನರಿಗೆ ಮಜ್ಜಿಗೆ ನೀಡಲಾಯಿತು. ಮಧ್ಯಾಹ್ನ ಸಭಾ ಕಾರ್ಯಕ್ರಮ ಆದ ಬಳಿಕ ವಿವಿಧ ಕೌಂಟರ್‌ಗಳಲ್ಲಿ ಊಟ ನೀಡಲಾಯಿತು.

ಬಸ್‌ ಸೇವೆಯಲ್ಲಿ ವ್ಯತ್ಯಯ-ಸಂಚಾರ ಬದಲಾವಣೆ
ಫಲಾನುಭವಿಗಳ ಸಮ್ಮೇಳನ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 8ರಿಂದ ಕಾರ್ಯಕ್ರಮ ಮುಗಿಯುವವರೆಗೆ ನಗರದಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿತ್ತು. ಲಾಲ್‌ಬಾಗ್‌ ಜಂಕ್ಷನ್‌ನಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತ (ಲೇಡಿಹಿಲ್‌)ವರೆಗೆ ಸಮ್ಮೇಳನಕ್ಕೆ ಆಗಮಿಸುವ ವಾಹನಗಳನ್ನು ಹೊರತುಪಡಿಸಿ ಎಲ್ಲ ತರಹದ ವಾಹನ ಸಂಚಾರ ನಿಷೇಧಿಸಲಾಗಿತ್ತು. ನಗರದ ವಿವಿಧ ಕಡೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಈ ಮಧ್ಯೆ,
ಮಂಗಳೂರು ವಿಭಾಗದಿಂದ ಕೆಎಸ್ಸಾರ್ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಮಂಗಳೂರು/ಸ್ಟೇಟ್‌ಬ್ಯಾಂಕ್‌ನಿಂದ ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು ಮಾರ್ಗದ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು.

Advertisement

ಗಮನಸೆಳೆದ “ಪ್ರದರ್ಶನ ಮಳಿಗೆ’
ಸರಕಾರದ ವಿವಿಧ ಇಲಾಖೆಗಳ ನೇತೃತ್ವದಲ್ಲಿ ಪ್ರದರ್ಶನ ಮಳಿಗೆ ಆಯೋಜಿಸಲಾಗಿತ್ತು. ಇಲಾಖೆಯಿಂದ ಜನರಿಗೆ ಸಿಗುವ ಸವಲತ್ತು ಹಾಗೂ ಅದನ್ನು ಪಡೆದುಕೊಳ್ಳುವ ಬಗ್ಗೆ ಮಳಿಗೆಯಲ್ಲಿ ಮಾಹಿತಿ ನೀಡಲಾಯಿತು. ಕೈಮಗ್ಗ ಜವಳಿ ಖಾತೆ, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆ, ಮೀನುಗಾರಿಕೆ ಇಲಾಖೆ, ಕೃಷಿ ವಸ್ತು ಮಳಿಗೆ ಸಹಿ ತ ವಿವಿಧ ಇಲಾಖೆಗಳ ಮಳಿಗೆಗಳು ಆಸಕ್ತರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಕಾದು ಕಾದು ಸುಸ್ತು!
ಬೆಳಗ್ಗೆ 10 ಗಂಟೆಗೆ ಸಮ್ಮೇಳನ ಆರಂಭವಾಗುವ ಬಗ್ಗೆ ಇಲಾಖೆಗಳಿಂದ ಫಲಾನುಭವಿಗಳಿಗೆ ಸೂಚನೆ ಬಂದಿತ್ತು. ಅದರಂತೆ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಜನರು ಆಗಮಿಸಿ 11 ಗಂಟೆಯ ಒಳಗೆ ಮೈದಾನದಲ್ಲಿ ನೆರೆದಿದ್ದರು. ಆದರೆ ಸಿಎಂ ಬೊಮ್ಮಾಯಿ ಅವರು 12.15ರ ಸುಮಾರಿಗೆ ಬಂದ ಕಾರಣದಿಂದ ಸಮಾವೇಶಕ್ಕೆ ಮೊದಲೇ ಆಗಮಿಸಿದ್ದ ಜನರು ಕಾದು ಕಾದು ಸುಸ್ತಾದರು. ಅಂತೂ, ಸಿಎಂ ಭಾಷಣ ಆರಂಭಿಸುವಾಗ ಮಧ್ಯಾಹ್ನ 1 ಗಂಟೆ ಆಗಿತ್ತು!

Advertisement

Udayavani is now on Telegram. Click here to join our channel and stay updated with the latest news.

Next