Advertisement

ಮಂಗಳೂರು: ಜೈಲಲ್ಲೇ ಮೊದಲ ಪಾಠಶಾಲೆ

08:56 AM Jul 03, 2018 | Harsha Rao |

ಮಂಗಳೂರು: ತಪ್ಪಿಧ್ದೋ, ಇಲ್ಲದೆಯೋ ಜೈಲಿನೊಳಗೆ ಬಂದಿಯಾದ ವಿಚಾರಾಣಾಧೀನ ಕೈದಿಗಳ ಎಳೆಯ ಮಕ್ಕಳಿಗೆ ಸಾಮಾನ್ಯವಾಗಿ ಹೊರ ಪ್ರಪಂಚದ ಅರಿವು ಇರದು. ನಾಲ್ಕು ಗೋಡೆ-ಕಂಬಿಗಳ ನಡುವಿನ ಆ ಕತ್ತಲ ಕೋಣೆಯೇ ಅವುಗಳಿಗೆ ಮೊದಲ ಮನೆ. ಆದರೆ, ಇಲ್ಲೀಗ ಹೊಸತನದ ಗಾಳಿ ಬೀಸತೊಡಗಿದೆ.

Advertisement

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಬಂದಿಗಳ ಮೂವರು ಮಕ್ಕಳಿಗೆ ಮಂಗಳವಾರದಿಂದ 
(ಜು. 3) ಆ, ಆ, ಇ… ಕಲಿಯುವ ಅವಕಾಶ ಸಿಕ್ಕಿದೆ.

ಜೈಲು ಸನಿಹದ ಅಂಗನವಾಡಿ ಕೇಂದ್ರವೊಂದರ ಶಿಕ್ಷಕಿಯೊಬ್ಬರು ಜೈಲಿಗೇ ಆಗಮಿಸಿ ಈ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಆ ಮೂಲಕ, ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಗಳ ಮಕ್ಕಳ ಬಾಳಲ್ಲಿ ಬೆಳಕು ತುಂಬಲು ಶ್ರಮಿಸುತ್ತಿದ್ದಾರೆ.

ಯಾವುದೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲು ಸೇರಿದವರ ಪೈಕಿ ಇಲ್ಲಿ 9 ಮಂದಿ ಮಹಿಳಾ ವಿಚಾರಣಾಧೀನ ಕೈದಿಗಳಿ ದ್ದಾರೆ. ಆ ಪೈಕಿ ಮೂವರು ತಮ್ಮ ಮಕ್ಕಳನ್ನು  ತಮ್ಮೊಂದಿಗೇ ಇಟ್ಟುಕೊಂಡಿದ್ದಾರೆ. 

ತಮ್ಮ ವಯಸ್ಸಿನ ಇತರ ಮಕ್ಕಳು ಅಂಗನವಾಡಿಗಳಲ್ಲಿ ತೊದಲು ನುಡಿಯಲ್ಲಿ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಪೋಣಿಸುತ್ತಿದ್ದರೆ, ಈ ಮಕ್ಕಳ ಪ್ರಪಂಚವೇ ಬೇರೆ. ಜೈಲಿನಲ್ಲಿ ಹೆತ್ತವರೊಂದಿಗಿರುವ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಈ ಮಕ್ಕಳಿಗೆ ಕಲಿಯುವ ಯೋಗ ಸಿಕ್ಕಿದೆ.

Advertisement

ಮಂಗಳೂರಿನಲ್ಲಿ ಮೊದಲ ಬಾರಿಗೆ
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂಗನವಾಡಿ ಶಿಕ್ಷಕರು ಜೈಲಿಗೆ ತೆರಳಿ ಪಾಠ ಹೇಳಿ ಕೊಡುತ್ತಿರುವಂಥದ್ದು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖಾಂತರ ಸನಿಹದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶುಕ್ರವಾರ ದಿಂದ ಪ್ರತಿದಿನ ಜೈಲಿಗೆ ತೆರಳಿ ಒಂದು ಗಂಟೆ ಕಾಲ ಮಕ್ಕಳಿಗೆ ಪಾಠ ಹೇಳುವರು. “ಜೈಲಿನಲ್ಲಿ ಪಾಠ ಹೇಳಿಕೊಡಲೆಂದೇ ನಮ್ಮಲ್ಲಿ ಪ್ರತ್ಯೇಕ ಸಿಬಂದಿ ಇಲ್ಲ. ಅದಕ್ಕಾಗಿ ಸನಿಹದ ಅಂಗನವಾಡಿ ಕೇಂದ್ರದ ಶಿಕ್ಷಕಿ ಯನ್ನೇ ನಿಯೋಜಿಸಲಾಗಿದೆ. ಮುಂದೆ ಜೈಲಿನಲ್ಲಿರುವ ಮಕ್ಕಳು ಶಿಕ್ಷಣ ಪಡೆಯಲಿದ್ದಾರೆ’ ಎಂದು ಉಪ ನಿರ್ದೇಶಕ ಸುಂದರ ಪೂಜಾರಿ ತಿಳಿಸಿದ್ದಾರೆ.

ಆಟಿಕೆ ನೀಡುವ ಯೋಚನೆ
ಈ ಮಧ್ಯೆಮಹಿಳಾ ಬಂಧಿಗಳಿಗೆ ಯೋಗ ತರಬೇತಿ, ಟೈಲರಿಂಗ್‌ ಮೆಶಿನ್‌ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ರೋಟರಿ ಕ್ಲಬ್‌ ಹಿಲ್‌ಸೈಡ್‌, ಡೀಡ್ಸ್‌ ಮುಂತಾದ ಸಂಸ್ಥೆಗಳು ಮುಂದೆ ಬಂದಿವೆ. 

ಅದೇ ರೀತಿ ಮಕ್ಕಳಿಗೆ ಆಟಿಕೆ ನೀಡಲು ಇಚ್ಛಿಸುವವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಪ್ರಾಧಿಕಾರದ ಸದಸ್ಯ ಮಲ್ಲನಗೌಡ ಪಾಟೀಲ ತಿಳಿಸಿದ್ದಾರೆ. 

ಜೈಲಿನಲ್ಲೇ ಶಿಕ್ಷಣ
ಇಲ್ಲಿಯವರೆಗೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಇರಲಿಲ್ಲ. ಇದೀಗ ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಮೂವರು ಮಕ್ಕಳಿಗೆ ಅಂಗನವಾಡಿ ಶಿಕ್ಷಕಿ ಮುಖಾಂತರ ಶಿಕ್ಷಣ ನೀಡಲಾಗುತ್ತಿದೆ. ಅಂಗನವಾಡಿಗೆ ಮಕ್ಕಳನ್ನು ಕಳುಹಿಸಿ ಎಂಬುದಾಗಿ ಶಿಕ್ಷಕಿಯರು ಹೇಳುತ್ತಿದ್ದರೂ, ಭದ್ರತಾ ಸಮಸ್ಯೆ ಹಿನ್ನೆಲೆಯಲ್ಲಿ ಸಾಧ್ಯವಾಗುತ್ತಿಲ್ಲ. 
-ಮಲ್ಲನಗೌಡ ಪಾಟೀಲ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next