Advertisement

ಮಂಗಳೂರು ತಾ|ಕನ್ನಡ ಸಾಹಿತ್ಯ ಸಮ್ಮೇಳನ 

10:10 AM Jan 24, 2018 | Team Udayavani |

ಸುರತ್ಕಲ್‌ : ಸಾಮರಸ್ಯದ ಬಾಳ್ವೆಗೆ ಬುನಾದಿ ಒದಗಿಸುವ ಶಕ್ತಿ ಕನ್ನಡಕ್ಕಿದೆ. ಜಾತಿ- ಮತ- ಧರ್ಮಗಳ ಹಂಗಿಲ್ಲದೆ ಸಾಹಿತ್ಯಾಸಕ್ತ ಮನಸ್ಸುಗಳನ್ನು ಒಗ್ಗೂಡಿಸುವ ಭಾಷೆ ಕನ್ನಡ ಎಂದು ಹಿರಿಯ ಸಾಹಿತಿ ಪ್ರೊ| ಎಚ್‌. ರಮೇಶ್‌ ಕೆದಿಲಾಯ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕಸಾಪ ಮಂಗಳೂರು ತಾಲೂಕು ಘಟಕದ ಆಶ್ರಯದಲ್ಲಿ ಸುರತ್ಕಲ್‌ ಗೋವಿಂದದಾಸ ಕಾಲೇಜಿನಲ್ಲಿ ಮಂಗಳವಾರ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಜಾತಿ, ಧರ್ಮಗಳು, ವಿಚಾರ ಚಿಂತನೆಗಳು ಕನ್ನಡ ಸಾಹಿತ್ಯದಲ್ಲಿ ಸೇರಿಕೊಳ್ಳುತ್ತವೆ. ಮೇಲು- ಕೀಳು, ಧನಿಕ- ಬಡವ ಎಂಬ ತಾರತಮ್ಯ ಇಲ್ಲಿಲ್ಲ ಎಂದ ಅವರು ಹೇಳಿದರು.

ಸಾಹಿತ್ಯ ರಚನೆಯಲ್ಲಿ ತೊಡಗಿ
ವಿದ್ಯಾರ್ಥಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಮತ್ತು ಭಾಷೆಯ ಮೇಲಿನ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು. ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಅಂತರಾತ್ಮದ ಶಕ್ತಿ ಬೆಳಗುತ್ತದೆ ಎಂದು ಅವರು ಆಶಿಸಿದರು.

ಕೃತಿ ಬಿಡುಗಡೆ
ಟಿ.ಎಸ್‌. ಹುಸೈನ್‌ ಕಾಪು ಬರೆದ ‘ಮೊಗ್ಗರಳಿ ಹೂವಾಗಿ’, ಸಾವಿತ್ರಿ ರಮೇಶ್‌ ಭಟ್‌ ಬರೆದ ‘ಅಂತರಾಳದ ತುಡಿತಗಳು’,
ರಮೇಶ್‌ ಭಟ್‌ ಎಸ್‌.ಜಿ. ಬರೆದ ‘ಸ್ವಾತಂತ್ರ್ಯ ಪೂರ್ವ ಕನ್ನಡ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ’ ಸಂಶೋಧನ ಕೃತಿಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಆಶಯ ಭಾಷಣ ಮಾಡಿದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಚಂದ್ರಕಲಾ ನಂದಾವರ, ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ, ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಂ. ವೆಂಕಟ್ರಾವ್‌, ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಡಾ| ಬಿ. ಮುರಳೀಧರ ರಾವ್‌, ಪ.ಪೂ. ಕಾಲೇಜು ಪ್ರಾಂಶುಪಾಲೆ ಲಕ್ಷ್ಮೀ ಬಿ., ಪರಿಷತ್‌ನ ಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ, ಗೌರವ ಖಜಾಂಚಿ ಪೂರ್ಣಿಮಾ ರಾವ್‌ ಪೇಜಾವರ, ಮೂಲ್ಕಿ ಹೋಬಳಿ ಸಂಚಾಲಕ ಎನ್‌.ಪಿ. ಶೆಟ್ಟಿ, ಸುರತ್ಕಲ್‌ ಹೋಬಳಿ ಸಂಚಾಲಕ ವಿನಯ ಆಚಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಅಗಲಿದ ಸಾಹಿತಿ ಪಾದೆಕಲ್ಲು ನರಸಿಂಹ ಭಟ್‌ ಅವರಿಗೆ ಈ ವೇಳೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಸ್ವಾಗತಿಸಿದರು. ಚೇತನ್‌ ಕದ್ರಿ ಅಧ್ಯಕ್ಷರ ಪರಿಚಯ ಮಾಡಿದರು. ಕಸಾಪ ಕಾರ್ಯದರ್ಶಿ ದೇವಕಿ ಅಚ್ಯುತ ವಂದಿಸಿದರು. ಪ್ರೊ| ರಮೇಶ್‌ ಭಟ್‌ ಎಸ್‌. ನಿರೂಪಿಸಿದರು. 

ಸಾಹಿತ್ಯಿಕವಾಗಿ ಬೆಳೆದಿದ್ದೇವೆ
ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಗೀತಾ ಸುರತ್ಕಲ್‌ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮ ಕನ್ನಡ ಸಾಹಿತ್ಯ ಲೋಕಕ್ಕಿದೆ. ಸಾಹಿತ್ಯಿಕವಾಗಿ ನಾವು ಬೆಳೆದಿದ್ದೇವೆಯಾದರೂ ಅದಿನ್ನೂ ನಮ್ಮ ಮನೆ ಮಾತು
ಆಗಿಲ್ಲ. ವಿದ್ಯಾರ್ಥಿ ಸಮುದಾಯಕ್ಕೆ ಸಾಹಿತ್ಯವನ್ನು ಸಮರ್ಪಕವಾಗಿ ತಲುಪಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next