Advertisement

ಮಂಗಳೂರು ಸ್ಮಾರ್ಟ್‌ಸಿಟಿ; ವೆನ್ಲಾಕ್‌, ಲೇಡಿಗೋಶನ್‌ ಅಭಿವೃದ್ಧಿಗೆ ಚಾಲನೆ

08:14 AM Jun 30, 2020 | mahesh |

ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಜಿಲ್ಲಾ ವೆನ್ಲಾಕ್‌ ಹಾಗೂ ಲೇಡಿಗೋಶನ್‌ ಆಸ್ಪತ್ರೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಂಕುಸ್ಥಾಪನೆ ನೆರವೇರಿಸಿದರು.  ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾರಂಭ ನಡೆಯಿತು. ಸಚಿವರು ಮಾತನಾಡಿ, ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ವೆನ್ಲಾಕ್ ಹಾಗೂ ಲೇಡಿಗೋಶನ್‌ ಆಸ್ಪತ್ರೆಗಳು ಮಹತ್ವದ ಸೇವೆ ನೀಡುತ್ತಿವೆ. ಜನ ಸಾಮಾನ್ಯರ ಆಶಾಕಿರಣವಾಗಿರುವ ಈ ಆಸ್ಪತ್ರೆಗಳ ಅಭಿವೃದ್ಧಿಯು ಸಾರ್ವಜನಿಕರಿಗೆ ಸರಕಾರವು ನೀಡುತ್ತಿರುವ ದೊಡ್ಡ ಕೊಡುಗೆಯಾಗಿದೆ ಎಂದರು.

Advertisement

ಸ್ಮಾರ್ಟ್‌ಸಿಟಿ ಮೂಲಕ ಮಂಗಳೂರು ನಗರದಲ್ಲಿ ಸುಮಾರು ಒಂದು ಸಾವಿರ ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸ್ಮಾರ್ಟ್‌ಸಿಟಿಯಿಂದ ವೆನ್ಲಾಕ್ ಮತ್ತು ಲೇಡಿಗೋಶನ್‌ ಆಸ್ಪತ್ರೆಯ ಅಭಿವೃದ್ಧಿಗೆ ಸುಮಾರು 50 ಕೋ.ರೂ.ಗಳಿಗೂ ಅಧಿಕ ವೆಚ್ಚ ಮಾಡಲಾಗುತ್ತಿದ್ದು ಈ ಆಸ್ಪತ್ರೆಗಳು ಹಲವು ವರ್ಷಗಳಿಂದ ಎದುರಿಸುತ್ತಿದ್ದ ಮೂಲಸೌಕರ್ಯಗಳ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು ಎಂದರು. ಸಂಸದ ನಳಿನ್‌ ಕುಮಾರ್‌ ಕಟೀಲು, ಮೇಯರ್‌ ದಿವಾಕರ್‌, ಉಪಮೇಯರ್‌ ವೇದಾವತಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌, ಅಪರ ಜಿಲ್ಲಾಧಿಕಾರಿ ರೂಪಾ ಉಪಸ್ಥಿತರಿದ್ದರು.

ವೆನ್ಲಾಕ್‌ಗೆ ವೆಂಟಿಲೇಟರ್‌ಗಳ ಕೊಡುಗೆ
ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇದ್ದು, ಜಿಲ್ಲೆಯ ವಿವಿಧ ಉದ್ಯಮಗಳು ನೀಡಿರುವ ವೆಂಟಿಲೇಟರ್‌ಗಳ ಹಸ್ತಾಂತರ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಎಂಆರ್‌ಪಿಎಲ್‌ ವತಿಯಿಂದ 5, ಎಂಸಿಎಫ್‌, ಎನ್‌ಎಂಪಿಟಿ ಹಾಗೂ ಕುದುರೆಮುಖ ಅದಿರು ಸಂಸ್ಥೆ ವತಿಯಿಂದ 2 ವೆಂಟಿಲೇಟರ್‌ಗಳನ್ನು ಸಂಸ್ಥೆಯ ಪ್ರತಿನಿಧಿಗಳು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಸ್ತಾಂತರಿಸಿದರು.

ಸಂಸದ ನಳಿನ್‌ ಕುಮಾರ್‌ ಮಾತನಾಡಿ, ವೆನ್ಲಾಕ್‌ಗೆ 60 ವೆಂಟಿಲೇಟರ್‌ಗಳ ಅಗತ್ಯವಿದೆ. ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಇದಕ್ಕಾಗಿ 1 ಕೋಟಿ ರೂ. ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಶಾಸಕರ ನಿಧಿಯಿಂದ 2 ವೆಂಟಿಲೇಟರ್‌ ಹಾಗೂ ಮಂಗಳೂರು ದಕ್ಷಿಣ ಮತ್ತು ಉತ್ತರ ಶಾಸಕರು ತಮ್ಮ ಅನುದಾನದಿಂದ ತಲಾ 2 ವೆಂಟಿಲೇಟರ್‌ಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಒಟ್ಟಾರೆ 30 ವೆಂಟಿಲೇಟರ್‌ಗಳು ವೆನ್ಲಾಕ್‌ಗೆ ದೊರಕಿದಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next