ಮಂಗಳೂರು: ಕರಾವಳಿ ಲೇಖಕಿಯರ-ವಾಚಕಿಯರ ಸಂಘವು ಸಂಜೀವಿ ನಾರಾಯಣ ಅಡ್ಯಂತಾಯರ ಸ್ಮರಣಾರ್ಥ ನೀಡುವ 2024ನೇ ಸಾಲಿನ “ಸಂಜೀವಿನಿ’ ದತ್ತಿನಿಧಿ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಉಡುಪಿ ಜಿಲ್ಲೆಯ ಕಾರ್ಕಳ ಅಡ್ವೆಯ ಅಪ್ಪಿ ಕೊರಗ ಅವರು ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಪ್ರಶಸ್ತಿಯು 5 ಸಾ. ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಕುಟುಂಬಕ್ಕೆ ಸಂಜೀವಿನಿ ಆಗುವ ಅಮ್ಮಂದಿರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಕೊರಗ ಸಮುದಾಯದವರು ಇನ್ನೂ ಶಿಕ್ಷಣಕ್ಕೆ ತೆರೆದುಕೊಳ್ಳದ ಸಂದರ್ಭದಲ್ಲಿ ತಮ್ಮ ಐವರು ಮಕ್ಕಳ ಉನ್ನತ ವ್ಯಾಸಂಗದ ಆಸೆ ಹೊತ್ತ ಅಪ್ಪಿಯವರು ತನ್ನ ಸೀಮಿತ ಸಂಪಾದನೆಯಲ್ಲಿ ಮಕ್ಕಳಿಗೆ ಓದಲು ಅಗತ್ಯವಿರುವ ಅನುಕೂಲತೆ ಹಾಗೂ ಸೂಕ್ತ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿಕೊಡಲು ಪ್ರಯತ್ನಿಸಿ, ಸಮುದಾಯ ಹಾಗೂ ಸಮಾಜಕ್ಕೆ ಮಾದರಿಯಾದವರು. ಅವರ ಹೆಣ್ಣು ಮಕ್ಕಳು ಕೂಡ ವಿದ್ಯಾವಂತರಾಗಿರುವುದಲ್ಲದೆ, ಹಿರಿಯ ಮಗನನ್ನು ಕೊರಗ ಸಮುದಾಯದ ಮೊದಲ ಎಂಜಿನಿಯರ್ ಆಗಿಸಿದ ಹೆಗ್ಗಳಿಕೆ ಇವರದು. ಪ್ರಶಸ್ತಿ ಪ್ರದಾನ ಸಮಾ ರಂಭ ಅ.27ರಂದು ಬೆಳಗ್ಗೆ 10 ಗಂಟೆಯಿಂದ ಸಂಘದ ಉರ್ವಸ್ಟೋರ್ “ಸಾಹಿತ್ಯ ಸದನ’ ಸಭಾಂಗಣದಲ್ಲಿ ನೆರವೇರಲಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.