Advertisement
ಗಲಭೆ ಪೂರ್ವಯೋಜಿತ ಎಂಬುದು ಸ್ಪಷ್ಟಬೆಂಗಳೂರು: ಮಂಗಳೂರು ಗಲಭೆ ಪೂರ್ವ ಯೋಜಿತ ಎಂಬುದು ಬಹಿರಂಗವಾಗಿದೆ. ಈ ಗಲಭೆ ಹಿಂದೆ ಎಸ್‌ಡಿಪಿಐ, ಪಿಎಫ್ಐ, ಯುಡಿಎಫ್, ಕಾಂಗ್ರೆಸ್‌ನ ಕೈವಾಡವಿದ್ದು, ಕಾಂಗ್ರೆಸ್ ಉತ್ತರ ನೀಡಬೇಕು. ಎಸ್‌ಡಿಪಿಐ, ಯುಡಿಎಫ್ ಸಂಘಟನೆಗಳನ್ನು ನಿಷೇಧಿಸಬೇಕು ಎಂಬುದು ನಮ್ಮ ಬೇಡಿಕೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.
Related Articles
Advertisement
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ರೈಲ್ವೆ ಆಸ್ತಿಪಾಸ್ತಿ ನಷ್ಟ ಮಾಡಿದವರಿಗೆ ಕಂಡಲ್ಲಿ ಗುಂಡಿಕ್ಕಿ ಎಂದು ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಸರ್ಕಾರ- ಇಲಾಖೆಯ ಆಸ್ತಿಪಾಸ್ತಿ ಹಾನಿ ಮಾಡಿದರೆ, ಸಾರ್ವಜನಿಕ ಸ್ವತ್ತನ್ನು ನಾಶಪಡಿಸಿದರೆ ಕ್ರಮ ಕೈಗೊಳ್ಳಿ ಎಂಬ ಅರ್ಥದಲ್ಲಿ ಅವರು ಹೇಳಿದ್ದಾರೆ. ಹಾಗೆಂದು ಅವರ ಹೇಳಿಕೆಗೆ ಸಮರ್ಥನೆ ಎಂದರ್ಥವಲ್ಲ. ಇಂತದಕ್ಕೆಲ್ಲಾ ನನ್ನ ಒಪ್ಪಿಗೆ ಇಲ್ಲ. ಆದರೆ ರೈಲ್ವೆ ಖಾತೆ ರಾಜ್ಯ ಸಚಿವರು ನೀಡಿರುವ ಹೇಳಿಕೆಗೂ, ಇದಕ್ಕೂ ವ್ಯತ್ಯಾಸವಿದೆ. ಇಲ್ಲಿ ಹೇಳಿಕೆ ನೀಡಿದ ಮರುದಿನವೇ ಗಲಭೆಯಾಗಿದೆ.
ಅದರ ಹಿಂದಿರುವ ಷಡ್ಯಂತ್ರ, ಶಕ್ತಿಗಳಿಗೆ ಹೇಳಿಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು. ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಿರುವುದು ಮುಖ್ಯಮಂತ್ರಿಗಳ ತೀರ್ಮಾನ ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಂಸದ ತೇಜಸ್ವಿ ಸೂರ್ಯ ಅವರ “ಪಂಕ್ಚರ್ ಹಾಕುವವರು ಪ್ರತಿಭಟನೆ ನಡೆಸಿದ್ದಾರೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವ ಭಾವನೆಯಲ್ಲಿ ಹೇಳಿದ್ದಾರೆ ಎಂಬುದು ಮುಖ್ಯವಾಗಿದೆ ಎಂದಷ್ಟೇ ಹೇಳಿದರು.
ಗಲಭೆಗೆ ಮರಿ ಟಿಪ್ಪುಗಳು ಕಾರಣಮೈಸೂರು: ಮಂಗಳೂರಿನಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತವಾಗಿದ್ದು ಅದಕ್ಕೆ ಕಾಂಗ್ರೆಸ್ ನಾಯಕರ ಕುಮ್ಮಕ್ಕಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಸುಯೇಜ್ ಫಾರಂ ಕುರಿತು ಆಯೋಜಿಸಿದ್ದ ಸಭೆಗೆ ಆಗಮಿಸಿ ಮಾತನಾಡಿ, 2015ರಲ್ಲಿ ಸಿದ್ದರಾಮಯ್ಯ ನವರು ಟಿಪ್ಪು ಜಯಂತಿ ಪ್ರಾರಂ ಭಿಸಿದಾಗ ಕೊಡಗಿನಲ್ಲಿ ಗಲಾಟೆ ನಡೆದಿತ್ತು. ಆ ವೇಳೆ ಕೇರಳದಿಂದ ಬಂದ ಕಿಡಿಗೇಡಿಗಳು ಮಾರಕಾಸ್ತ್ರ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿದ್ದರು. ಈಗಲೂ ಅದೇ ರೀತಿ ಮಂಗಳೂರಿನಲ್ಲಿ ನಡೆದಿದೆ. ಅದಕ್ಕೆ ಸಿಸಿ ಕ್ಯಾಮೆರಾ ದೃಶ್ಯಾವಳಿ ನೋಡಬಹುದಾಗಿದೆ ಎಂದರು. ಆಟೋಗಳಲ್ಲಿ ಕಲ್ಲು ತರುವುದು, ಸಿಸಿ ಕ್ಯಾಮೆರಾ ಪುಡಿ ಮಾಡುತ್ತಿರುವುದು ಎಲ್ಲವೂ ಸಿಕ್ಕಿದೆ. ಆಸ್ಪತ್ರೆ ತುರ್ತು ಚಿಕಿತ್ಸೆ ಘಟಕಕ್ಕೆ ಹೋಗಿ ರೋಗಿಗಳ ಮೇಲೆ ಹಲ್ಲೆ ನಡೆಸಲು ಪ್ರಯತ್ನ ಮಾಡುವವರನ್ನು ಅಮಾಯಕರು ಎನ್ನಬಹುದೇ ಎಂದು ಪ್ರಶ್ನಿಸಿದರು. ಅವರೆಲ್ಲಾ ಸಿದ್ದ ರಾಮಯ್ಯ ರಾಜ್ಯಾದ್ಯಂತ ಟಿಪ್ಪು ಜಯಂತಿ ಪ್ರಾರಂಭ ಮಾಡುವ ಮೂಲಕ ಸೃಷ್ಟಿ ಮಾಡಿದ ಮರಿ ಟಿಪ್ಪುಗಳು. ಅವರ ರಕ್ಷಣೆಗೆ ಸಿದ್ದರಾಮಯ್ಯ ಮಂಗಳೂರಿಗೆ ಹೋಗಿದ್ದರು. ಜತೆಗೆ ವಿಧಾನಸೌಧದ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತು ಊರಿಗೆಲ್ಲಾ ನೀತಿ ಪಾಠ ಹೇಳುತ್ತಿದ್ದ ರಮೇಶ್ ಕುಮಾರ್, ಪೊಲೀಸರ ಮೇಲೆ ಎಗರಾಡು ತ್ತಿದ್ದರು. ಇದು ನಾಚಿಕೆಗೇಡಿನ ವಿಚಾರ ಎಂದರು. ಎನ್‌ಐಎ ತನಿಖೆಗೆ ವಿಹಿಂಪ ಆಗ್ರಹ
ಮಂಗಳೂರು: ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಪ್ರತಿಭಟನಾಕಾರರಿಂದ ಕಲ್ಲು ತೂರಾಟ ಮತ್ತು ಪೊಲೀಸರ ಮೇಲಿನ ಹಲ್ಲೆ ಇತ್ಯಾದಿ ಘಟನೆಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಪ್ರತಿಭಟನೆಯಲ್ಲಿ ಭಾಗವಹಿಸಿದವರು ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ತೂರಾಟ ನಡೆಸುವ ದೃಶ್ಯ ನೋಡಿದರೆ ಇದರ ಹಿಂದೆ ವ್ಯವಸ್ಥಿತ ಪಿತೂರಿ ಅಡಗಿದೆ. ಗಲಭೆಯಲ್ಲಿ ಕೇರಳ ಸೇರಿ ಬೇರೆ ಕಡೆಯ ದುಷ್ಕರ್ಮಿಗಳು ಪಾಲ್ಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎನ್ನುವ ವಿಚಾರವೂ ಗಂಭೀರವಾದದ್ದು. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದರು.