Advertisement

ಮಂಗಳೂರು ಗಲಭೆ: ಮ್ಯಾಜಿಸ್ಟೀರಿಯಲ್‌ ತನಿಖೆ ಆರಂಭ

09:53 AM Jan 01, 2020 | sudhir |

ಮಂಗಳೂರು: ನಗರದಲ್ಲಿ ಡಿ. 19ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಗೋಲಿಬಾರ್‌ನಿಂದ ನೌಶೀನ್‌ ಮತ್ತು ಜಲೀಲ್‌ ಅವರು ಸಾವನ್ನಪ್ಪಿರುವ ಕುರಿತಂತೆ ಮ್ಯಾಜಿಸ್ಟೀರಿಯಲ್‌ ತನಿಖೆ ನಡೆಸಲು ನೇಮಕ ಗೊಂಡಿರುವ ಉಡುಪಿ ಜಿಲ್ಲಾ ಧಿಕಾರಿ ಜಿ. ಜಗದೀಶ್‌ ಅವರು ಸೋಮವಾರ ಮಂಗಳೂರಿಗೆ ಬಂದು ತನಿಖೆ ಆರಂಭಿಸಿದರು.

Advertisement

ಸೋಮವಾರ ಬೆಳಗ್ಗೆ ಅವರು ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಜತೆ ಸಮಾಲೋಚನೆ ನಡೆಸಿದರು. ಬಳಿಕ ಡಿ. 19ರಂದು ಪ್ರತಿಭಟನೆಯ ಸಂದರ್ಭ ಗಲಾಟೆ ನಡೆದ ಸ್ಟೇಟ್‌ಬ್ಯಾಂಕ್‌ ಪರಿಸರ, ಸಿಟಿ ಬಸ್‌ ನಿಲ್ದಾಣ, ನೆಲ್ಲಿಕಾಯಿ ರಸ್ತೆ ಮತ್ತಿತರ ಪ್ರದೇಶಗಳನ್ನು ವೀಕ್ಷಿಸಿದರು. ಹಿಂಸಾಚಾರ ಹಾಗೂ ಗೋಲಿಬಾರ್‌ಗೆ ಸಂಬಂಧಿಸಿ ಪೊಲೀಸ್‌ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು.

ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ. 19ರಂದು ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಪ್ರತಿಭಟನೆಗೆ ಇಳಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದರು. ಬಳಿಕ ಅದು ಹಿಂಸೆಗೆ ತಿರುಗಿತ್ತು. ಕೊನೆಯಲ್ಲಿ ಪೊಲೀಸರು ಗೋಲಿಬಾರ್‌ ನಡೆಸಿದಾಗ ಇಬ್ಬರು ಸಾವನ್ನಪ್ಪಿದ್ದರು.

ಗೋಲಿಬಾರ್‌ ಬಗ್ಗೆ ವಿಪಕ್ಷಗಳಿಂದ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮ್ಯಾಜಿಸ್ಟೀರಿಯಲ್‌ ಹಾಗೂ ಸಿಐಡಿ ತನಿಖೆಗೆ ಆದೇಶಿಸಿತ್ತು. ಮ್ಯಾಜಿಸ್ಟೀರಿಯಲ್‌ ತನಿಖೆಯ ಹೊಣೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರಿಗೆ ವಹಿಸಿ ಮೂರು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಜ. 7: ಹೇಳಿಕೆ ದಾಖಲು
ಗೋಲಿಬಾರ್‌ ಕುರಿತಂತೆ ಜ. 7ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30ರ ತನಕ ನಗರದ ಮಿನಿ ವಿಧಾನ ಸೌಧದ 2ನೇ ಮಹಡಿಯಲ್ಲಿರುವ ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಸಾಕ್ಷಿಗಳ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಡಿ. 19ರ ಘಟನೆಯ ಬಗ್ಗೆ ಮಾಹಿತಿ ಇರುವ ಅಥವಾ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾರೇ ಆಗಲಿ ಖುದ್ದಾಗಿ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಬಹುದು ಎಂದು ಜಿ. ಜಗದೀಶ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆ
ಡಿ. 19ರ ಹಿಂಸಾಚಾರ ಘಟನೆಗೆ ಸಂಬಂಧಿಸಿ ದಾಖಲಾದ ಪ್ರಕರಣಗಳ ಸಂಖ್ಯೆ 43ಕ್ಕೆ ತಲುಪಿದೆ. ಬಂದರ್‌ (ಮಂಗಳೂರು ಉತ್ತರ) ಠಾಣೆಯಲ್ಲಿ 14, ಪಾಂಡೇಶ್ವರ (ದಕ್ಷಿಣ) ಠಾಣೆಯಲ್ಲಿ 14, ಕದ್ರಿ (ಮಂಗಳೂರು ಪೂರ್ವ) ಠಾಣೆಯಲ್ಲಿ 3, ಉರ್ವ ಠಾಣೆಯಲ್ಲಿ 2, ಮಂಗಳೂರು ಗ್ರಾಮಾಂತರ ಮತ್ತು ಕೊಣಾಜೆ ಠಾಣೆಗಳಲ್ಲಿ ತಲಾ ಒಂದು ಹಾಗೂ ಸೈಬರ್‌ ಕ್ರೈಂ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ.

ಒಟ್ಟು 65 ಮಂದಿ ಪೊಲೀಸರು ಗಾಯಗೊಂಡಿದ್ದು, ಈ ಪೈಕಿ 33 ಮಂದಿ ಒಳರೋಗಿಗಳಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಈ ತನಕ 20 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಐಡಿ ತನಿಖೆ
ಗೋಲಿಬಾರ್‌ ಕುರಿತಂತೆ ಸಿಐಡಿ ತನಿಖೆ ಆರಂಭ ಆಗಿರುವುದರಿಂದ ಇದೀಗ ಸಿಐಡಿ ಪೊಲೀಸರು ಕೂಡ ಆರೋಪಿಗಳನ್ನು ದಸ್ತಗಿರಿ ಮಾಡುವ ಸಾಧ್ಯತೆ ಇದೆ. ಅಲ್ಲದೆ ಮಂಗಳೂರು ಪೊಲೀಸರು ನಡೆಸಿದ ತನಿಖೆಯನ್ನು ಸಿಐಡಿ ಪೊಲೀಸರು ಮುಂದುವರಿಸಲಿದ್ದಾರೆ. ಸೈಬರ್‌ ಕ್ರೈಂ ಪೊಲೀಸರು ಸಾಮಾಜಿಕ ಜಾಲ ಸಂಬಂಧಿತ ಆರೋಪ ಪ್ರಕರಣಗಳ ಕುರಿತಂತೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಜಾಲತಾಣಗಳ ಆಡ್ಮಿನ್‌ಗಳಿಗೆ ನೋಟಿಸ್‌
ಮಂಗಳೂರು ಹಿಂಸಾಚಾರ ಮತ್ತು ಗೋಲಿಬಾರ್‌ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಬರಹ ಪೋಸ್ಟ್‌ ಮಾಡಿದ ಹಾಗೂ ಶೇರ್‌ ಮಾಡಿದ ಆಡ್ಮಿನ್‌ಗಳಿಗೆ ಸೈಬರ್‌ ಪೊಲೀಸರು ನೋಟಿಸು ಜಾರಿ ಮಾಡಿದ್ದಾರೆ. ಈ ನೋಟಿಸುಗಳ ಬಗ್ಗೆ ಪೊಲೀಸ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

30,000 ನಾಗರಿಕರ ಸ್ಪಂದನೆ
ಪೊಲೀಸ್‌ ಆಯುಕ್ತರ ಸೂಚನೆ ಮೇರೆಗೆ ಈಗಾಗಲೇ 30,000ಕ್ಕೂ ಅಧಿಕ ಮಂದಿ ನಾಗರಿಕರು ಗಲಭೆಗೆ ಸಂಬಂಧಿಸಿ ವಿಡಿಯೋ ಸಾಕ್ಷÂ ಹಾಗೂ ಉದ್ರೇಕಕಾರಿ ಬರಹಗಳ ಸಾಕ್ಷÂಗಳನ್ನು ಪೊಲೀಸ್‌ ಇಲಾಖೆಗೆ ಸಲ್ಲಿಸಿದ್ದಾರೆ. ಈ ಪೈಕಿ 600ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿ ಈಗ ನೋಟಿಸ್‌ ಜಾರಿಗೊಳಿಸಲಾಗುತ್ತಿದೆ. ನೋಟಿಸು ಪಡೆದವರು ಸೈಬರ್‌ ಕ್ರೈಂ ಪೊಲೀಸ್‌ ಅಧಿಕಾರಿಗಳ ಮುಂದೆ ಹಾಜರಾಗಿ ಸಮಜಾಯಿಷಿ ನೀಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next