ಬೆಂಗಳೂರು: ಮಂಗಳೂರು ಗಲಭೆಯ ಸತ್ಯಾಸತ್ಯತೆ ಕುರಿತ ಸಿಡಿ ಬಿಡುಗಡೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರ ಪ್ರತಿಕ್ರಿಯೆಗಳಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
“ಅದಕ್ಕೆಲ್ಲಾ ಅರ್ಥ ಇದ್ಯೆನ್ರಿ, ಅದೆಲ್ಲಾ ಕಟ್ ಅಂಡ್ ಪೇಸ್ಟ್ ವಿಡಿಯೋ’ ಎಂದಿದ್ದಾರೆ. ಸಿಎಂ ಸಿಡಿ ಬಿಡುಗಡೆ ವೇಳೆಯೇ ನಾನು ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಮತ್ತೇನು ಬಿಜೆಪಿ ನಾಯಕರಿಂದ ನಿರೀಕ್ಷಿಸಲು ಸಾಧ್ಯ ಎಂದಿದ್ದೆ. ಅದನ್ನು ರುಜುವಾತುಪಡಿಸಿದ್ದೀರಿ’ ಎಂದು ಟ್ವೀಟ್ ಮಾಡಿದ್ದಾರೆ.
ಸಿಡಿ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯೇ? ಅದಕ್ಕೂ ಮಿಗಿಲಾಗಿ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ನಾನು ಬಿಡುಗಡೆ ಮಾಡಿರುವ ಸಿಡಿಯನ್ನು ನೀವು ಸೃಷ್ಟಿಸಿಕೊಂಡಂತೆ “ಕಟ್ ಅಂಡ್ ಪೇಸ್ಟ್’ ಬಿಜೆಪಿ ಸರ್ಕಾರ ಎಂದುಕೊಂಡಿರಾ? ಎಂದು ಪ್ರಶ್ನಿಸಿದ್ದಾರೆ.
ಸವದಿಗೆ ಪ್ರಶ್ನೆ?: ಉಪ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಸ್ಥಿಮಿತ ಕಳೆದುಕೊಂಡ ಕುಮಾರಸ್ವಾಮಿ ಮಂಗಳೂರು ಗಲಭೆ ವಿಡಿಯೋ ಬಿಡುಗಡೆ ಮಾಡಿದ್ದಾರೆಂದು ಉಪ ಮಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ. “ಸರಿ, ಹಾಗಾದರೆ ಸವದಿ ಅದ್ಯಾವ ಸ್ಥಿಮಿತ ಕಳೆದುಕೊಂಡು ಸದನದಲ್ಲಿ ನೀಲಿ ಚಿತ್ರ ನೋಡಿದರು? ಈ ಬಾರಿ ಅವರು ಯಾವ ಚುನಾವಣೆ ಗೆದ್ದಿದ್ದಾರೆ? ಸ್ಥಿಮಿತ ಉಳಿದಿದೆಯೇ?’ ಎಂದು ಕುಮಾರಸ್ವಾಮಿ ಕೇಳಿದ್ದಾರೆ.
ಪೊಲೀಸರು ಗಲಭೆ ಮಾಡುವುದಿಲ್ಲ, ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಕಾಲದಲ್ಲೂ ಅದೇ ಪೊಲೀಸರು ಇದ್ದರು ಎಂದಿದ್ದಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು. “ಬೊಮ್ಮಾಯಿ ಅವರೇ, ಅದು ನನ್ನ ಕಾಲ. ಶಾಂತಿ-ಸುವ್ಯವಸ್ಥೆಗಷ್ಟೇ ಪೊಲೀಸರ ಸೇವೆ ಪಡೆಯುತ್ತಿದ್ದೆವು. ಇದು ನಿಮ್ಮ ಕಾಲ, ಗಲಭೆ, ಗುಂಡೇಟಿಗೆ ನೀವು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದೀರಿ. ನನ್ನ ಕಾಲದಲ್ಲೂ ಇದೇ ಪೊಲೀಸರಿದ್ದರೂ ಗೋಲಿಬಾರ್, ಗಲಭೆ ಏಕೆ ಆಗಲಿಲ್ಲ’ ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ನಿರುದ್ಯೋಗಿಗಳ ಕಣ್ಣಲ್ಲೇಕೆ ನೀರು ತರಿಸುವಿರಿ: ರಾಜ್ಯದಲ್ಲಿ ಉದ್ಯೋಗಕ್ಕೆ ಬರವಿಲ್ಲ. ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ನೀಡಿರುವ ಹೇಳಿಕೆ ಬೌದ್ಧಿಕ ದಿವಾಳಿತನದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪಕೋಡ ತಯಾರಿಸಲು ಕೂಡ ಈರುಳ್ಳಿಕೊಳ್ಳಲು ಆರ್ಥಿಕವಾಗಿ ನಿಶಕ್ತರಾಗಿರುವ ನಿರುದ್ಯೋಗಿಗಳ ಕಣ್ಣಲ್ಲೇಕೆ ನೀರು ತರಿಸುವಿರಿ ಎಂದು ಪ್ರಶ್ನಿಸಿದ್ದಾರೆ. ಯಾರನ್ನು ಮೆಚ್ಚಿಸಲು ಹೇಳುತ್ತಿದ್ದೀರಿ? ನಾಚಿಗೆಯಾಗಬೇಕು ನಿಮಗೆ. ಯೋಗ್ಯ ಉದ್ಯೋಗಾಕಾಂಕ್ಷಿಗಳನ್ನು ನಿಮ್ಮ ಮನೆಗೆ ಕಳುಹಿಸಲೇ? ಕಚೇರಿಗೆ ಕಳುಹಿಸಲೇ? ಕೆಲಸ ಕೊಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.