Advertisement
ಇದು ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯ ದುಸ್ಥಿತಿ. ಇಲ್ಲಿ ಹನ್ನೊಂದು ವರ್ಷಗಳಿಂದ ನಿವೃತ್ತರ ಸಂಖ್ಯೆ ಹೆಚ್ಚಾಗುತ್ತಿದೆಯೇ ವಿನಾ ಹೊಸಬರ ನೇಮಕಾತಿ ನಡೆಯುತ್ತಿಲ್ಲ. ಪರಿಣಾಮ, ಹಾಲಿ ಕೆಲಸದಲ್ಲಿರುವವರ ಹೆಗಲ ಮೇಲೆ ಹೆಚ್ಚುವರಿ ಹೊಣೆಗಾರಿಕೆ ಬೀಳುತ್ತಿದೆ.
ವಿಪರ್ಯಾಸವೆಂದರೆ 2008 ರಿಂದೀಚೆಗೆ ಯಾವ ನೇಮಕಾತಿ ಯೂ ನಡೆದಿಲ್ಲ. ಪ್ರತಿ ವರ್ಷ ಕನಿಷ್ಠ ಐವರು ನಿವೃತ್ತರಾಗುತ್ತಿದ್ದಾರೆ. ಆ ಜಾಗಕ್ಕೆ ಹೊಸ ಬರ ನೇಮಕ ನಡೆಯದೇ, ಇರುವ ಸಂಖ್ಯೆಯಲ್ಲಿಯೂ ಕುಸಿತ ಆಗುತ್ತಿದೆ. ಕಳೆದೊಂದು ವರ್ಷದ ಹಿಂದೆ 36 ಮಂದಿ ಸಿಬಂದಿ ಇದ್ದರೆ, 17ಕ್ಕಿಳಿದಿದೆ.
Related Articles
ಸಿಬಂದಿ ಕೊರತೆಯಿಂದಾಗಿ ಅವಧಿ ಮೀರಿದರೂ ಕೆಲಸ ಮಾಡಬೇಕಾದ ಅನಿವಾರ್ಯದ ಸ್ಥಿತಿ ಈಗಿರುವ ಸಿಬಂದಿಯದ್ದು. ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಕೆಲಸ ನಿರ್ವಹಿಸಬೇಕೆಂಬುದು ಸರಕಾರಿ ನಿಯಮ.
Advertisement
ಆದರೆ, ಇಲ್ಲಿ ರಾತ್ರಿ ಎಂಟಾದರೂ ಕೆಲಸ ಮುಗಿಯುವುದಿಲ್ಲ ಎನ್ನುತ್ತಾರೆ ಕಚೇರಿ ಸಿಬಂದಿ. ಅಲ್ಲದೆ, ಮುಖ್ಯವಾದ ಕೆಲಸಗಳನ್ನೇ ಮಾಡಲು ಸಿಬಂದಿ ಇಲ್ಲದಿರುವುದರಿಂದ ನಿಯಮಗಳ ಪರಿಣಾಮಕಾರಿ ಅನುಷ್ಠಾನವೂ ಸಾಧ್ಯವಾಗದೆ ಅಧಿಕಾರಿಗಳು ಕೈ ಚೆಲ್ಲಿದ್ದಾರೆ.
ವಾಹನಗಳ ಸಂಬಂಧಿಸಿದಂತೆ ಹಲವಾರು ಕೆಲಸಗಳನ್ನು ಇರುವ 17 ಮಂದಿ ಸಿಬಂದಿ ನಿರ್ವಹಿಸಬೇಕಾಗುತ್ತದೆ. ಇದರೊಂದಿಗೆ ಪೊಲ್ಯೂಶನ್ ಡ್ರೈವ್, ರಸ್ತೆ ಸುರಕ್ಷತಾ ಸಪ್ತಾಹ, ಚುನಾವಣೆ ಸಂಬಂಧಿ ಕೆಲಸಗಳು ಸಹಿತ ಇತರ ಕೆಲಸಗಳನ್ನೂ ಇದೇ ಸಿಬಂದಿ ನಿರ್ವಹಿಸಬೇಕಾಗುತ್ತದೆ. ಇದರಿಂದ ಸಾರ್ವಜನಿಕರು ತಿಂಗಳಗಟ್ಟಲೆ ಕಾಯಬೇಕಾಗಿದೆ ಎನ್ನುತ್ತಾರೆ ವಾಹನ ಚಾಲಕ ಶಿವಪ್ರಸಾದ್.
ಶಾಶ್ವತ ಆರ್‌ಟಿಒ ಇಲ್ಲನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ ಶಾಶ್ವತ ಸಾರಿಗೆ ಅಧಿಕಾರಿ ನೇಮಕವಾಗದೇ 2019ರ ಆಗಸ್ಟ್‌ಗೆ ನಾಲ್ಕು ವರ್ಷ. 2015ರ ಬಳಿಕ ಶಾಶ್ವತ ನೇಮಕಾತಿಯೇ ನಡೆದಿಲ್ಲ. ಪ್ರಭಾರ ಆರ್‌ಟಿಒ ನಿಯೋಜನೆಗೊಂಡು ಕನಿಷ್ಠ ಸಮಯದಲ್ಲೇ ವರ್ಗಾವಣೆ ನಡೆಯುತ್ತಿದೆ. 2015ರಿಂದ ಇಲ್ಲಿವರೆಗೆ ಹತ್ತು ಬಾರಿ ಪ್ರಭಾರ ಆರ್‌ಟಿಒಗಳ ನಿಯೋಜನೆಯಾಗಿದ್ದು, ಕೆಲವರು ಎರಡೆರಡು ಬಾರಿ ಪ್ರಭಾರ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜಾನ್ ಮಿಸ್ಕಿತ್ ಅವರು ಪ್ರಭಾರ ಆರ್‌ಟಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಬಂದಿ ಅಗತ್ಯ
ನಗರದ ಆರ್‌ಟಿಒ ಕಚೇರಿಯಲ್ಲಿ ಸಿಬಂದಿ ಕೊರತೆ ಇದೆ. ಈ ಬಗ್ಗೆ ಪ್ರತಿ ಬಾರಿ ಮೀಟಿಂಗ್‌ನಲ್ಲಿಯೂ ಪ್ರಸ್ತಾವಿಸಲಾಗುತ್ತಿದೆ. ನಿಯಮಗಳನ್ನು ಪರಿಣಾಮಕಾರಿಯಾಗಿ ಫಾಲೋ ಅಪ್ ಮಾಡಲಾಗುತ್ತಿದೆ. ಆದರೆ, ಸಿಬಂದಿ ನೇಮಕಾತಿ ನಡೆದು ಸಿಬಂದಿ ಸಂಖ್ಯೆ ಹೆಚ್ಚಾದಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ.
–ಜಾನ್ ಮಿಸ್ಕಿತ್,
ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ
ಧನ್ಯಾ ಬಾಳೆಕಜೆ