Advertisement

ಮಂಗಳೂರು ರ್ಯಾಲಿ ತಡೆದರೆ ಉಗ್ರ ಹೋರಾಟ

10:25 AM Sep 04, 2017 | |

ಬೆಂಗಳೂರು: ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡಿಸಿ ಮತ್ತು ಇಂತಹ ಪ್ರಕರಣಗಳಲ್ಲಿ ತೊಡಗಿರುವ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್‌ ರ್ಯಾಲಿಗೆ ಅಡ್ಡಿಪಡಿಸಿದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲು ಬಿಜೆಪಿ ನಿರ್ಧರಿಸಿದೆ.

Advertisement

ಬಿಜೆಪಿ ಆಯೋಜಿಸಿರುವ ಮಂಗಳೂರು ಚಲೋ ಬೈಕ್‌ ರ್ಯಾಲಿ ಹತ್ತಿಕ್ಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ರ್ಯಾಲಿಯಿಂದ ಹಿಂದೆ ಸರಿಯುವಂತಿಲ್ಲ. ಒಂದು ವೇಳೆ ಪೊಲೀಸರು ತಡೆಯೊಡ್ಡಿದರೆ ರಸ್ತೆಯಲ್ಲೇ ಕುಳಿತು ಧರಣಿ ಆರಂಭಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ಯುವ ಮೋರ್ಚಾ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಸರ್ಕಾರ ರ್ಯಾಲಿಯನ್ನು  ಹತ್ತಿಕ್ಕಿದರೆ ಮಂಗಳೂರು ಚಲೋ ಕಾರ್ಯಕ್ರಮ ಇಡೀ ರಾಜ್ಯಕ್ಕೆ ವ್ಯಾಪಿಸಬೇಕು. ಎಲ್ಲಾ ಕಡೆಗಳಲ್ಲಿ ಹೋರಾಟ ಆರಂಭಿಸಬೇಕು ಎಂದೂ ನಿರ್ದೇಶನ ನೀಡಿದ್ದಾರೆ.

ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಈಗಾಗಲೇ ಸೂಚಿಸಿದ್ದಾರೆ. ಅಲ್ಲದೆ, ರ್ಯಾಲಿಗೆ ಸಂಬಂಧಿಸಿದಂತೆ ಹಲವು ಷರತ್ತುಗಳನ್ನು ವಿಧಿಸಬೇಕೆಂದು ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಮಧ್ಯೆ, ಮಡಿಕೇರಿಯಿಂದ ಬೈಕ್‌ ರ್ಯಾಲಿಯಲ್ಲಿ ಆಗಮಿಸುವವರಿಗೆ ಯಾವುದೇ ಕಾರಣಕ್ಕೂ ಕಲ್ಯಾಣ ಮಂಟಪದಲ್ಲಿ ತಂಗಲು ಅವಕಾಶ ಕಲ್ಪಿಸದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಠಾಣೆ ಇನ್ಸ್‌ಪೆಕ್ಟರ್‌ ಅಲ್ಲಿನ ಕಲ್ಯಾಣ ಮಂಟಪದ ಮಾಲೀಕರಿಗೆ
ಲಿಖೀತ ಸೂಚನೆ ನೀಡಿದ್ದಾರೆ.

ಇದೆಲ್ಲವೂ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಈಗಾಗಲೇ ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳಿಗೆ ಹೇಳಿದ್ದರೂ ಸರ್ಕಾರ ಉದ್ದೇಶಪೂರ್ವಕವಾಗಿ ಮಂಗಳೂರು ಚಲೋಗೆ ಅಡ್ಡಿಪಡಿಸುತ್ತಿದೆ ಎಂಬ ಅಭಿಪ್ರಾಯಕ್ಕೆ ಬಂದಿರುವ ಬಿಜೆಪಿ, ಸರ್ಕಾರ ರ್ಯಾಲಿಗೆ ಅಡ್ಡಿಪಡಿಸಿದರೆ ಅದನ್ನೇ ಸರ್ಕಾರದ ವಿರುದ್ಧ ಮತ್ತೂಂದು ಹೋರಾಟಕ್ಕೆ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. 

ರ್ಯಾಲಿ ವೇಳೆ ಎಚ್ಚರಿಕೆ ವಹಿಸಿ: ಈ ಮಧ್ಯೆ ರ್ಯಾಲಿ ಹಾಳು ಮಾಡುವ ಉದ್ದೇಶದಿಂದ ಮಾರ್ಗಮಧ್ಯೆ ಕಿಡಿಗೇಡಿಗಳು ಸಮಸ್ಯೆ ಸೃಷ್ಟಿಸಬಹುದು. ಇದನ್ನು ಗಂಭೀರವಾಗಿ ಪರಿಗಣಿಸದೆ ಹೋರಾಟ ಮುಂದುವರಿಸಿ. ಒಂದು ವೇಳೆ ಪರಿಸ್ಥಿತಿ ಕೈಮೀರಿ ನಮ್ಮ ಕಾರ್ಯಕರ್ತರಿಗೆ ದೈಹಿಕವಾಗಿ ತೊಂದರೆಯಾಗುತ್ತದೆ ಎಂಬ ವಾತಾವರಣ ನಿರ್ಮಾಣವಾದರೆ ಮಾತ್ರ ತಿರುಗೇಟು ನೀಡಿ. ಆಗ ನಿಮ್ಮೊಂದಿಗೆ ನಾವೂ ಬರುತ್ತೇವೆ ಎಂದು ಯುವ ಮೋರ್ಚಾ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯ ಘಟಕ ಸಲಹೆ ನೀಡಿದೆ ಎನ್ನಲಾಗಿದೆ.

Advertisement

ರ್ಯಾಲಿಗೆ ಅನುಮತಿ ಇಂದು ನಿರ್ಧಾರ: ಎಸ್‌ಪಿ
ಮಂಗಳೂರು:
ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಬೈಕ್‌ ರ್ಯಾಲಿಗೆ ಜಿಲ್ಲೆಯಲ್ಲಿ ಅನುಮತಿ ನೀಡುವ ಬಗ್ಗೆ ಸೋಮವಾರ
ಪೊಲೀಸರು ವಿವಿಧ ಇಲಾಖೆಗಳ ಜತೆ ಚರ್ಚಿಸಿ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮವು ದಕ್ಷಿಣ ಕನ್ನಡ ಪೊಲೀಸ್‌
ಮತ್ತು ಮಂಗಳೂರು ನಗರ ಪೊಲೀಸ್‌ ವ್ಯಾಪ್ತಿಗೆ ಬರುವುದರಿಂದ ಸೋಮವಾರ ಈ ಕುರಿತಂತೆ ಮಂಗಳೂರು ಪೊಲೀಸ್‌ ಆಯುಕ್ತರ ಜತೆ ಚರ್ಚಿಸಿ
ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ರೆಡ್ಡಿ ಅವರು ತಿಳಿಸಿದ್ದಾರೆ. 

ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಬೈಕ್‌ ರ್ಯಾಲಿಯನ್ನು ರಾಜ್ಯ ಸರ್ಕಾರ ಪೊಲೀಸ್‌ ಬಳಸಿ ಹತ್ತಿಕ್ಕಲು ಮುಂದಾಗಿದೆ. ನಕ್ಸಲರು ಮತ್ತು
ಪ್ರಜಾತಂತ್ರ ವಿರೋಧಿಗಳನ್ನು ಮಾತುಕತೆಗೆ ಕರೆಯುವ ಸರ್ಕಾರ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿ ಶಾಂತಿಯುತವಾಗಿ ರ್ಯಾಲಿ
ನಡೆಸುವ ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕಲು ಹೊರಟಿರುವುದು ಖಂಡನಾರ್ಹ.
ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next