Advertisement

ಮಂಗಳೂರು: ರಾತ್ರಿ ಅನಗತ್ಯ ಓಡಾಟಕ್ಕೆ ಪೊಲೀಸರಿಂದ ತಡೆ

11:02 PM Jan 04, 2021 | Team Udayavani |

ಮಹಾನಗರ: ನಗರದ ಸಾರ್ವ ಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಅನಗತ್ಯವಾಗಿ ಸಂಚರಿಸುವವರು, ಮದ್ಯಪಾನದಂತಹ ಚಟುವಟಿಕೆಗಳನ್ನು ನಡೆಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕೆಲಸ ಆರಂಭಿಸಿದ್ದಾರೆ.

Advertisement

ಮಂಗಳೂರಿನ ನೂತನ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರ ಸೂಚನೆಯಂತೆ ರವಿವಾರ ತಡರಾತ್ರಿಯಿಂ ದಲೇ ಕಾರ್ಯಾಚರಣೆ ಆರಂಭಿ ಸಿರುವ ಪೊಲೀಸರು ಮೊದಲ ದಿನ ನೂರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ನಗರದ ಬರ್ಕೆ, ಪಾಂಡೇಶ್ವರ (ಮಂಗಳೂರು ದಕ್ಷಿಣ) ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಮೈದಾನ, ಪಾರ್ಕ್‌, ರೈಲ್ವೇ ಟ್ರ್ಯಾಕ್‌, ಸಾರ್ವಜನಿಕ ರಸ್ತೆ ಮೊದಲಾದೆಡೆ ಅಲೆದಾಡುತ್ತಿದ್ದವರನ್ನು, ಮದ್ಯಪಾನ, ಧೂಮಪಾನ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಯಿಸಿ, ಮನೆಯವರನ್ನು ಕರೆಯಿಸಿ ಎಚ್ಚರಿಕೆ ನೀಡಿ ಕಳುಹಿಸಿದರು. ವಿಳಾಸ, ಸಂಪರ್ಕ ಸಂಖ್ಯೆಗಳನ್ನು ದಾಖಲಿಸಿಕೊಂಡರು. ಕಾನೂನು, ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್‌, ಸಂಚಾರ ಮತ್ತು ಅಪರಾಧ ನಿಯಂತ್ರಣ ವಿಭಾಗದ ಡಿಸಿಪಿ ವಿನಯ್‌ ಗಾಂವ್‌ಕರ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ತಡರಾತ್ರಿ ಆಯುಕ್ತರಿಂದ ಕ್ಲಾಸ್‌
ಪೊಲೀಸ್‌ ವಶವಾದವರಿಗೆ ಡಿಎಆರ್‌ ಕಚೇರಿ ಯಲ್ಲಿ ಆಯುಕ್ತ ಶಶಿಕುಮಾರ್‌ ತಡರಾತ್ರಿಯೇ ಕ್ಲಾಸ್‌ ತೆಗೆದು ಕೊಂಡರು. ಈ ಸಂದರ್ಭ ಹಲವರು ಮದ್ಯದ ನಶೆಯಲ್ಲಿದ್ದರು. “ಎಲ್ಲರ ಫೋಟೋ, ವೀಡಿಯೋ ಮಾಡಿದ್ದೇವೆ. ಇನ್ನೊಮ್ಮೆ ಈ ರೀತಿ ಸಿಕ್ಕಿದರೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ’ ಎಂದು ಆಯುಕ್ತರು ಕನ್ನಡ, ಹಿಂದಿಯಲ್ಲಿ ಸ್ಪಷ್ಟ ಎಚ್ಚರಿಕೆ ನೀಡಿದರು.

13 ಮಂದಿ ಮಂಗಳಮುಖಿಯರು
ಕಾರ್ಯಾಚರಣೆ ವೇಳೆ 12-13 ಮಂದಿ ಮಂಗಳಮುಖಿಯರು ಕೂಡ ಕಂಡು ಬಂದಿದ್ದು, ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಮಂಗಳಮುಖೀಯರಿಗೆ ಸಾರ್ವಜನಿಕರಿಂದ, ಸಾರ್ವಜನಿಕರಿಗೆ ಮಂಗಳ ಮುಖೀಯರಿಂದ ತೊಂದರೆ ಯಾಗದಂತೆ ನೋಡಿಕೊಳ್ಳಲು ಮಂಗಳಮು ಖೀಯರ ಸಂಘದ ಪದಾಧಿಕಾರಿಗಳಿಗೂ ಸೂಚನೆ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಇನ್ನು ಎಲ್ಲೆಡೆ ಕಾರ್ಯಾಚರಣೆ
ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬರ್ಕೆ, ಪಾಂಡೇಶ್ವರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ರವಿವಾರ ಕಾರ್ಯಾಚರಣೆ ನಡೆಸಲಾಗಿದೆ. ಮೊದಲ ದಿನ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿಯೂ ಇಂತಹ ಕಾರ್ಯಾಚರಣೆ ನಡೆಸಲಾಗುವುದು. ರಾತ್ರಿ 9-10 ಗಂಟೆಯ ಅನಂತರ ಸಾರ್ವಜನಿಕ ಸ್ಥಳಗಳಲ್ಲಿ ಅನಾವಶ್ಯಕವಾಗಿ ಕಂಡುಬರುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಹಲವು ಹಾಟ್‌ಸ್ಪಾಟ್‌ಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

ಪೊಲೀಸ್‌ ನಿಯೋಜನೆಯಾಗಲಿ
ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಅನಾವಶ್ಯಕವಾಗಿ ಉಳಿದು ಅಕ್ರಮ ಚಟುವಟಿಕೆ ನಡೆಸುವವರನ್ನು ನಿಯಂತ್ರಿಸಲು, ಕೆಲಸ ಮುಗಿಸಿ ಮನೆಗೆ ವಾಪಸಾಗುವ ಮಹಿಳೆಯರಿಗೆ ಕಿರುಕುಳ ನೀಡುವವರ ಮೇಲೆ ನಿಗಾ ಇಡಲು ಎರಡು ವರ್ಷಗಳ ಹಿಂದೆ ಕೆಲವು ಆಯ್ತ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಅದು ಕೆಲವೇ ದಿನಗಳಿಗೆ ಸೀಮಿತವಾಗಿತ್ತು. ಮತ್ತೆ ಇಂತಹ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಅಪರಾಧ ಕೃತ್ಯಗಳಿಗೆ ಕಡಿವಾಣ
ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳನ್ನು, ಅಪರಾಧ ಕೃತ್ಯಗಳನ್ನು ತಡೆಯಲು ಇಂತಹ ಕಾರ್ಯಾಚರಣೆ ಅಗತ್ಯವಾಗಿದೆ. ನಗರದ ಕಾನೂನು ಸುವ್ಯವಸ್ಥೆ, ಸಾರ್ವಜನಿಕರ ಸುರಕ್ಷತೆ, ನೆಮ್ಮದಿ ಕಾಪಾಡಲು ಪೊಲೀಸರೊಂದಿಗೆ ಎಲ್ಲರೂ ಸಹಕರಿಸಬೇಕು. ಅನಾವಶ್ಯಕವಾಗಿ ಕತ್ತಲೆ ಇರುವ ಸ್ಥಳಗಳಲ್ಲಿ ಓಡಾಟ ನಡೆಸಲು, ಉಳಿದುಕೊಳ್ಳಲು ಕುಟುಂಬದ ಸದಸ್ಯರು ಯಾರನ್ನೂ ಬಿಡಬಾರದು.
-ಎನ್‌. ಶಶಿಕುಮಾರ್‌, ಪೊಲೀಸ್‌ ಆಯುಕ್ತರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next