ಮಂಗಳೂರು: ದರೋಡೆ ಪ್ರಕರಣವೊಂದನ್ನು ತನಿಖೆ ಮಾಡಲು ಹೊರಟ ಮಂಗಳೂರು ಪೊಲೀಸರು ಬಹುಕೋಟಿ ಹವಾಲಾ ಜಾಲವನ್ನು ಪತ್ತೆ ಮಾಡಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರದಿಂದ ಬರುತ್ತಿದ್ದ ಹಣವನ್ನು ನಗರದಲ್ಲಿ ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮೊಹಮ್ಮದ್ ರಿಫಾತ್ ಅಲಿ, ಅಸ್ಫಕ್ ಯಾನೆ ಜುಟ್ಟು, ಜಾಫರ್ ಸಾಧಿಕ್, ಮೊಹಮ್ಮದ್ ಇಸ್ಮಾಯಿಲ್ ಮತ್ತು ಮಯ್ಯದಿ ಎಂದು ಗುರುತಿಸಲಾಗಿದೆ.
ಘಟನೆ ವಿವರ: ಮಾ.4ರಂದು ಅಬ್ದುಲ್ ಸಲಾಮ್ ಎಂಬಾತ ‘ತನಗೆ ದುಷ್ಕರ್ಮಿಗಳು ಚೂರಿ ತೋರಿಸಿ ಬೆದರಿಸಿ ಸ್ಕೂಟರ್ ಸುಲಿಗೆ ಮಾಡಿದ್ದಾರೆ’ ಎಂದು ಮಂಗಳೂರು ದಕ್ಷಿಣಾ ಠಾಣೆಯಲ್ಲಿ ದೂರು ನೀಡಿದ್ದರು. 10 ದಿನಗಳ ಬಳಿಕ ಅಬ್ದುಲ್ ಸಲಾಂ ಮತ್ತೆ ಠಾಣೆಗೆ ಬಂದು, ಆರೋಪಿಗಳು ತಮ್ಮ ಹಣವನ್ನೂ ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಇದನ್ನೂ ಓದಿ:ರಾಷ್ಟ್ರಪತಿ ಕೋವಿಂದ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು; ಆರೋಗ್ಯ ವಿಚಾರಿಸಿದ ಪ್ರಧಾನಿ
ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ, ಇದು ಹವಾಲ ಹಣವಾಗಿದ್ದು, ದೂರುದಾರನು ದರೋಡೆ ನಾಟಕವಾಡಿದ್ದು ಬೆಳಕಿಗೆ ಬಂದಿದೆ. ಇದು ಬಹುಕೋಟಿ ಹವಾಲಾ ಜಾಲವಾಗಿದ್ದು ದೂರುದಾರ ಅಬ್ದುಲ್ ಸಲಾಮ್, ಹವಾಲಾ ಹಣ ಸಾಗಿಸುವ ಏಜೆಂಟ್ ಆಗಿದ್ದ. 16.20 ಲಕ್ಷ ರೂ ಹಣವನ್ನು ಅವರು ಸಾಗಾಟ ಮಾಡುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಐವರನ್ನು ಬಂಧಿಸಲಾಗಿದ್ದು, ದೂರುದಾರ ಅಬ್ದುಲ್ ಸಲಾಮ್ ಸೇರಿದಂತೆ ಇನ್ನೂ 7-8 ಜನರನ್ನು ಬಂಧಿಸಬೇಕಿದೆ.