Advertisement

ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್‌: ನಿವೇಶನಕ್ಕೆ ಭಾರೀ ಬೇಡಿಕೆ

01:34 AM Apr 09, 2022 | Team Udayavani |

ಮಂಗಳೂರು: ಮಂಗಳೂರು ಹೊರವಲಯದ ಗಂಜೀಮಠದಲ್ಲಿ ಸ್ಥಾಪನೆಗೊಳ್ಳುತ್ತಿರುವ ಪ್ಲಾಸ್ಟಿಕ್‌ ಪಾರ್ಕ್‌ನಲ್ಲಿ ನಿವೇಶನಗಳಿಗೆ ಉದ್ಯಮಿ ಗಳಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.

Advertisement

ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್‌ ಯೋಜನೆಗೆೆ ಜ. 21ರಂದು ಅಂತಿಮ ಒಪ್ಪಿಗೆ ನೀಡಿತ್ತು. ಯೋಜನೆಯ ಮುಖ್ಯ ಪ್ರವರ್ತಕನಾಗಿರುವ ಬೆಂಗಳೂರಿನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ಪಾರ್ಕ್‌ ಅಭಿವೃದ್ಧಿ ಯೋಜನೆ ಅಂಗೀಕೃತಗೊಂಡು ಟೆಂಡರ್‌ಗೆ ಸಿದ್ಧತೆಗಳು ನಡೆಯುತ್ತಿವೆ.

35 ಘಟಕಗಳಿಂದ ಕೋರಿಕೆ
ಯೋಜನೆಗೆ ಗಂಜೀಮಠದಲ್ಲಿ ಒಟ್ಟು 104ಎಕ್ರೆ ಜಾಗ ಗುರುತಿಸಲಾಗಿದೆ. ಇದನ್ನು ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದ ಬಳಿಕ ನಿವೇಶನಗಳಾಗಿ ವಿಂಗಡಿಸಿ ಬೇಡಿಕೆ ಸಲ್ಲಿಸಿರುವ ಉದ್ದಿಮೆದಾರರಿಗೆ ನೀಡಲಾಗುತ್ತದೆ. ಪಾರ್ಕ್‌ ಸಿದ್ಧಗೊಂಡಾಗ ಉದ್ದಿಮೆಗಳ ಸ್ಥಾಪನೆಗೆ ಸುಮಾರು 60 ಎಕ್ರೆ ಜಾಗ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ 35 ಘಟಕಗಳಿಂದ ನಿವೇಶನಕ್ಕೆ ಕೋರಿಕೆ ಬಂದಿದ್ದು, ನಿವೇಶನಗಳ ಒಟ್ಟು ಬೇಡಿಕೆ 90 ಎಕ್ರೆ ಸಮೀಪಿಸಿದೆ. ಇದರಲ್ಲಿ ಗರಿಷ್ಠ ಬೇಡಿಕೆ ಜಿಲ್ಲೆಯ ಉದ್ದಿಮೆಗಳದೇ.ನಿವೇಶನ ಹಂಚಿಕೆ ಸಂದರ್ಭ ಉದ್ದಿಮೆಗಳ ಗಾತ್ರ ಮತ್ತು ಉತ್ಪಾದನ ಸಾಮರ್ಥ್ಯವನ್ನು ಪರಿಗಣಿಸಲಾಗುತ್ತದೆ. ಪ್ರಸ್ತುತ ಜಾಗದ ಪಕ್ಕದಲ್ಲಿ ಸುಮಾರು 200 ಎಕ್ರೆ ಲಭ್ಯವಿದ್ದು, ಇದನ್ನು ಸ್ವಾಧೀನಪಡಿಸಿ ಉದ್ದಿಮೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿವೆ.

ಪ್ಲಾಸ್ಟಿಕ್‌ ಪಾರ್ಕ್‌
ಗಂಜೀಮಠದಲ್ಲಿ ಒಟ್ಟು 62.77 ಕೋ.ರೂ. ವೆಚ್ಚದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸಿದ್ಧಗೊಳ್ಳಲಿದೆ. ಇದರಲ್ಲಿ ಶೇ. 50 ಕೇಂದ್ರ ಸರಕಾರ ಹಾಗೂ ಉಳಿದ ಶೇ. 50 ಭಾಗವನ್ನು ಕೆಐಎಡಿಬಿ ಹೂಡಿಕೆಯೊಂದಿಗೆ ಅನುಷ್ಠಾನಗೊಳಿಸಲಿದೆ. ಇದರಂತೆ ಒಟ್ಟು ಯೋಜನ ಮೊತ್ತದಲ್ಲಿ ಕೇಂದ್ರ ಸರಕಾರ 31.38 ಕೋ.ರೂ. ಹಾಗೂ ಕೆಐಎಡಿಬಿ 31.38 ಕೋ.ರೂ. ಹೂಡಿಕೆ ಮಾಡಲಿದೆ. ಒಟ್ಟು ಮೊತ್ತದಲ್ಲಿ 29.82 ಕೋ.ರೂ. ಮೂಲಸೌಕರ್ಯ ಗಳಿಗೆ ಹಾಗೂ 30.95 ಕೋ.ರೂ.ಇತರ ಸೌಲಭ್ಯಗಳ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಸೂಚನೆಯಂತೆ ಅನುಮೋದನೆ ನೀಡಿದ 3 ತಿಂಗಳೊಳಗೆ ಯೋಜನೆಗೆ ಚಾಲನೆ ನೀಡಬೇಕಾಗಿದೆ. ಯೋಜನೆಯಲ್ಲಿ ಪ್ಲಾಸ್ಟಿಕ್‌ ತಯಾರಿಕೆಯ ಜತೆಗೆ, ಪ್ಲಾಸ್ಟಿಕ್‌ನ ಮರುಬಳಕೆ ತಂತ್ರಜ್ಞಾನಕ್ಕೂ ಒತ್ತು ನೀಡಲು ಉದ್ದೇಶಿಸ ಲಾಗಿದೆ. ಇದರಿಂದ ಪ್ಲಾಸ್ಟಿಕ್‌ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗಲಿದ್ದು, ಬೇಡಿಕೆ ಇರುವ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಲಿದೆ.

Advertisement

ಗಂಜೀಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಯೋಜನೆ ಅನುಷ್ಠಾನ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಉದ್ದಿಮೆಗಳಿಂದ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿವೆ. ಮೂಲಸೌಕರ್ಯಗಳು ಮತ್ತು ಇತರ ಸೌಲಭ್ಯ ಸಹಿತ ನಿವೇಶನ ಸಿದ್ಧಗೊಂಡಾಗ ಬಳಿಕ ಹಂಚಿಕೆ ನಡೆಯುತ್ತದೆ.
– ಗೋಕುಲ್‌ದಾಸ್‌ ನಾಯಕ್‌,
ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರು

 

 

Advertisement

Udayavani is now on Telegram. Click here to join our channel and stay updated with the latest news.

Next