Advertisement

ಮಂಗಳೂರು: ಹೊಸ ಸ್ಮಾರ್ಟ್‌ ಕೆಮರಾಗಳಲ್ಲಿ ವಾಹನದ ಹಿಂಭಾಗ ಮಾತ್ರವೇ ಸೆರೆ!

05:51 PM Jul 11, 2024 | Team Udayavani |

ಮಹಾನಗರ: ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ನಗರದಲ್ಲಿ ಸ್ಮಾರ್ಟ್‌ ಸಿಟಿಯಿಂದ ಅಳವಡಿಸಿರುವ “ಕೆಮರಾ ಕಣ್ಗಾವಲು’ ಈಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ವಾಹನಗಳ ಮುಂಭಾಗದ ದೃಶ್ಯ ಸೆರೆ ಹಿಡಿಯುವ ಬದಲು ಹಿಂಭಾಗದ ದೃಶ್ಯ ಮಾತ್ರ ಸೆರೆ ಹಿಡಿಯುವ ಕೆಮರಾ ಅಳವಡಿಸಿದ್ದು ಚರ್ಚೆ ಹುಟ್ಟು ಹಾಕಲು ಕಾರಣ.

Advertisement

ವಾಹನದ ಮುಂಭಾಗದ ದೃಶ್ಯ ಬೇಕು ಎಂದು ಸಂಚಾರ ಪೊಲೀಸರು ತಿಳಿಸಿದರೆ, ಹಿಂಭಾಗದ ಮೂಲಕವೇ ವಾಹನಗಳ ಪರಿಶೀಲನೆ ಸುಲಭ ಎಂಬುವುದು ಸ್ಮಾರ್ಟ್‌ ಸಿಟಿ ಲೆಕ್ಕಾಚಾರ. ಈ ವಿಚಾರ ಈಗ ಸಾರ್ವಜನಿಕರ ವಲಯದಲ್ಲಿ ಪರ ವಿರೋಧ ಚರ್ಚೆ ಹುಟ್ಟು ಹಾಕಿದೆ. ಸಾಮಾನ್ಯವಾಗಿ ರಸ್ತೆಗಳಲ್ಲಿ ಅಳವಡಿಸಿರುವ ಕೆಮರಾಗಳು ವಾಹನದ ಮುಂಭಾಗವನ್ನು ಸೆರೆ ಹಿಡಿಯುತ್ತವೆ. ಇದರಿಂದ ಸೀಟ್‌ ಬೆಲ್ಟ್, ಮೊಬೈಲ್‌ ಬಳಕೆ, ಝೀಬ್ರಾ ಕ್ರಾಸ್‌ ಸಹಿತ ಸಂಚಾರ ನಿಯಮ ಉಲ್ಲಂಘನೆಯ
ದೃಶ್ಯಾವಳಿ ದಾಖಲಾಗುತ್ತದೆ. ಆದರೆ ಪ್ರಸ್ತುತ ಅಳವಡಿಸಲಾಗಿರುವ ಕೆಮರಾ ಗಳಲ್ಲಿ ವಾಹನಗಳ ಹಿಂಭಾಗವಷ್ಟೇ ದಾಖಲಾಗುತ್ತದೆ. ಮುಂಭಾಗದಿಂದ ಕಾಣುವ ಯಾವುದೇ ಉಲ್ಲಂಘನೆಯೂ ಕ್ಯಾಮೆರಾದಲ್ಲಿ ಕಾಣದಿರುವುದು ಚರ್ಚೆಗೆ
ಕಾರಣವಾಗಿದೆ.

50 ಮೀ. ದೂರದ ತನಕ ಗುಣಮಟ್ಟದ ಚಿತ್ರ ಸೆರೆ
ಕೆಮರಾವನ್ನು ಸರಿಸುಮಾರು 20 ಅಡಿ ಎತ್ತರದಲ್ಲಿ ಅಳವಡಿಸಲಾಗಿದ್ದು, 50 ಮೀ. ದೂರದವರೆಗೆ ಗುಣಮಟ್ಟದ ಚಿತ್ರಗಳನ್ನು
ಸೆರೆ ಹಿಡಿಯುತ್ತವೆ. ರಾಡರ್‌ ಮೂಲಕ ಒಂದು ಸಿಗ್ನಲ್‌ನಿಂದ ಮತ್ತೊಂದು ಸಿಗ್ನಲ್‌ ಮಧ್ಯೆ ಸಂಚರಿಸುವ ವೇಳೆ ವಾಹನದ
ವೇಗವನ್ನು ಅಳೆಯುತ್ತದೆ.

ಅಗತ್ಯವಿರುವಲ್ಲಿ 2 ಕಡೆಗಳಲ್ಲೂ ಕೆಮರಾ ಅಳವಡಿಕೆ
ಪ್ರಸ್ತುತ ಅಳವಡಿಸಿರುವ ಕೆಮರಾದಲ್ಲಿ ವಾಹನದ ಸಂಪೂರ್ಣ ಮಾಹಿತಿ ಸಿಗಲಿದೆ. ಅತಿಯಾದ ವೇಗದಲ್ಲಿ ವಾಹನ ಸಂಚರಿಸುತ್ತವೆ. ಅಂತಹ ಸಂದರ್ಭ ಹಿಂಭಾಗದ ನಂಬರ್‌ ಪ್ಲೇಟ್‌ ಹಾಗೂ ವಾಹನ ಮಾಲಕರ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಕೆಮರಾ ಅಳವಡಿಸಲಾಗಿದೆ. ಅಗತ್ಯವಿರುವ ಪ್ರದೇಶಗಳಲ್ಲಿ ಮುಂಭಾಗ ಸೆರೆಯಾಗುವಂತೆಯೂ ಕೆಮರಾ ಅಳವಡಿಸಲಾಗುವುದು ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ಎಐ ತಂತ್ರಜ್ಞಾನ ಬಳಕೆ
ಕಮಾಂಡ್‌ ಕಂಟ್ರೋಲ್‌ ಸೆಂಟರ್‌ನಲ್ಲಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಬ್ಯಾಕ್‌ ಎಂಡ್‌ ಪ್ರೋಗ್ರಾಮಿಂಗ್‌ ಮೂಲಕ ಕಾರಿಡಾರ್‌
ಮ್ಯಾನೇಜ್‌ಮೆಂಟ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌(ಐಟಿಎಂಎಸ್‌)
ಮೂಲಕ ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಲು ಉದ್ದೇಶಿಸಲಾಗಿದೆ. ಎಐ ಮೂಲಕ ವೀಡಿಯೋಗಳನ್ನು ಪರಿಶೀಲಿಸಿ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚುತ್ತದೆ.

Advertisement

ನೊಂದಣಿ ಸಂಖ್ಯೆಯ ಮೂಲಕ ಸಾರಿಗೆ ಇಲಾಖೆಯ “ವಾಹನ’ ಸರ್ವರ್‌ನಲ್ಲಿ ದಂಡದ ಮೊತ್ತದ ಉಲ್ಲೇಖವಾಗುತ್ತದೆ. ಮಾತ್ರವಲ್ಲದೆ ವಾಹನ ಮಾಲಕರ ಮೊಬೈಲ್‌ಗೆ ದಂಡ ಮೊತ್ತ ಸಹಿತ ಎಸ್ಸೆಮ್ಮೆಸ್‌ ಕಳುಹಿಸುತ್ತದೆ.

ವಾಹನದ ಮುಂಭಾಗ ಕಾಣುವಂತೆ ಕೆಮರಾ ಅಳಡಿಸಲು ಸೂಚನೆ ಕೆಮರಾ ಅಳವಡಿಸಿರುವ ಬಗ್ಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ವಾಹನದ ಮುಂಭಾಗ ಸೆರೆಯಾಗುವಂತೆಯೂ ಕೆಮರಾ ಅಳವಡಿಸುವಂತೆ ಸೂಚನೆ ನೀಡಿದ್ದೇವೆ. ಇದರಿಂದ ಹೆಚ್ಚಿನ ಉಲ್ಲಂಘನೆಗಳಿಗೆ, ವಾಹನದ ಚಾಲಕ, ಪ್ರಯಾಣಕರ ಪತ್ತೆಕಾರ್ಯವಾಗಲಿದೆ.

*ನಝ್ಮಾ ಫರೂಕಿ, ಎಸಿಪಿ, ಸಂಚಾರ ವಿಭಾಗ

ಅವೈಜ್ಞಾನಿಕವಾಗಿ ಅಳವಡಿಕೆ
ಹಿಂಭಾಗ ಸೆರೆಯಾಗುವಂತೆ ಕೆಮರಾ ಅಳವಡಿಸಿರುವುದು ಅವೈಜ್ಞಾನಿಕ. ಇದರಿಂದ ದರೋಡೆ, ಕೊಲೆ ಸಹಿತ ಅಪರಾಧ ಕೃತ್ಯಗಳ ವೇಳೆ ವಾಹನ ಯಾರು ಚಾಲನೆ ಮಾಡಿದ್ದಾರೆ, ಎಷ್ಟು ಜನರಿದ್ದರು ಎಂಬುವುದು ಪತ್ತೆ ಹಚ್ಚಲು ಅಸಾಧ್ಯ. ನಗರದೊಳಗೆ ಸಂಚಾರ ದಟ್ಟಣೆ ಇರುವಾಗ ವೇಗವಾಗಿ ಸಂಚರಿಸಲು ಸಾಧ್ಯವಿಲ್ಲ. ಮುಂಭಾಗ ಸೆರೆಯಾಗುವಂತೆಯೇ ಕೆಮರಾ ಅಳವಡಿಸಬೇಕು.
*ಜಿ.ಕೆ. ಭಟ್‌, ದ.ಕ. ಜಿಲ್ಲಾ ರಸ್ತೆ ಸುರಕ್ಷ ಸಮಿತಿ ಸದಸ್ಯರು

*ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next