Advertisement

94 ಕೋ.ರೂ. ವೆಚ್ಚದಲ್ಲಿ ಮಂಗಳೂರು ಹಳೆ ಬಂದರಿಗೆ ಕಾಯಕಲ್ಪ

11:40 AM Jun 08, 2020 | mahesh |

ಮಂಗಳೂರು: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡು ಸರಕು ನಿರ್ವಹಣೆಯಲ್ಲಿ ಉಚ್ಛ್ರಯ ಸ್ಥಿತಿಯಲ್ಲಿದ್ದು, ಅನಂತರ ನಿರ್ಲಕ್ಷ್ಯಕ್ಕೊಳಗಾಗಿರುವ ಮಂಗಳೂರಿನ ಹಳೆ ಬಂದರಿಗೆ (ವಾಣಿಜ್ಯ) ಹೊಸ ರೂಪ ನೀಡಲು ರೂಪುರೇಷೆ ಸಿದ್ಧವಾಗಿದೆ. ಸಾಗರ ಮಾಲಾ ಯೋಜನೆಯಡಿ 94 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಟೆಂಡರ್‌ ಪ್ರಕ್ರಿಯೆ ಈಗ ಬಹುತೇಕ ಪೂರ್ಣಗೊಂಡಿದ್ದು ಫೈನಾನ್ಶಿಯಲ್‌ ಬಿಡ್‌ ಹಾಗೂ ಕಾರ್ಯಾದೇಶ ಮಾತ್ರ ಬಾಕಿಯಿದೆ. ಬಂದರು ಪ್ರದೇಶ ವ್ಯಾಪ್ತಿಯ ಕಸಬಾ ಬೆಂಗ್ರೆ ಭಾಗದಲ್ಲಿ 65 ಕೋ.ರೂ. ವೆಚ್ಚದಲ್ಲಿ 350 ಮೀಟರ್‌ ವಿಸ್ತಾರದ ಬರ್ತ್‌, 2 ಗೋದಾಮುಗಳು, ಒಂದು ಓವರ್‌ಹೆಡ್‌ ಟ್ಯಾಂಕ್‌, 400 ಮೀಟರ್‌ ಒಳರಸ್ತೆಗಳ ನಿರ್ಮಾಣ-ಅಭಿವೃದ್ಧಿ, ಶೌಚಾಲಯ ಇತ್ಯಾದಿ ಸೌಕರ್ಯ ಒದಗಿಸಲಾಗುವುದು. 29 ಕೋ.ರೂ. ವೆಚ್ಚದಲ್ಲಿ ಡ್ರೆಜ್ಜಿಂಗ್‌ ನಡೆಯಲಿದೆ.

Advertisement

ವಹಿವಾಟಿಗೆ ಬೇಡಿಕೆ ಹೆಚ್ಚಳ
ಹಲವು ಅನನುಕೂಲಗಳ ನಡು ವೆಯೂ ಹಳೆ ಬಂದರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರಕು ಸಾಗಾಟ ವ್ಯವಹಾರ ವೃದ್ಧಿಯಾಗುತ್ತಲೇ ಇದೆ. 2011-12ರಲ್ಲಿ ವಾರ್ಷಿಕ 87 ಸಾವಿರ ಮೆಟ್ರಿಕ್‌ ಟನ್‌ನಷ್ಟಿದ್ದ ವ್ಯವಹಾರ 2017-18ರಲ್ಲಿ ವರ್ಷಕ್ಕೆ 1.5 ಲಕ್ಷ ಮೆಟ್ರಿಕ್‌ ಟನ್‌ಗೆ ಏರಿದೆ. ಮುಂದಿನ 5 ವರ್ಷಗಳಿಗೆ 5 ಲಕ್ಷ ಮೆಟ್ರಿಕ್‌ ಟನ್‌ ಹಾಗೂ ಮುಂದಿನ 10 ವರ್ಷಗಳಿಗೆ 8 ಲಕ್ಷ ಮೆಟ್ರಿಕ್‌ ಟನ್‌ ವ್ಯವಹಾರದ ಗುರಿ ಹೊಂದಲಾಗಿದೆ.

ಈಗ ಇರುವ ತೊಡಕು
ಅಳಿವೆ ಬಾಗಿಲಿನಲ್ಲಿ (ಫ‌ಲ್ಗುಣಿ- ಗುರುಪುರ ನದಿ ಪ್ರದೇಶ) ಹೂಳಿನಿಂದಾಗಿ ಸರಕು ನೌಕೆಗಳ ಸಂಚಾರಕ್ಕೆ ಭಾರೀ ತೊಡಕಾಗಿದೆ. ಹಳೆ ಬಂದರು 7 ಎಕರೆಗೂ ಅಧಿಕ ಪ್ರದೇಶದಲ್ಲಿದೆ; ಆದರೆ ಆಳ 4 ಮೀಟರ್‌ಗಳಷ್ಟು ಮಾತ್ರ. ಉತ್ತರ ಧಕ್ಕೆಯ ಆಳ 3 ಮೀಟರ್‌ ಕೂಡ ಇಲ್ಲ. ಒಂದು ವೇಳೆ 7 ಮೀಟರ್‌ನಷ್ಟು ಆಳವಾದರೆ ಎನ್‌ಎಂಪಿಟಿಗೆ (ನವಮಂಗಳೂರು ಬಂದರು) ಬರುವಷ್ಟೇ ಸಾಮರ್ಥ್ಯದ ಹಡಗು  ಗಳು ಇಲ್ಲಿಗೂ ಬರಬಹುದು. ಪ್ರಸ್ತುತ ಲಕ್ಷದ್ವೀಪದೊಂದಿಗೆ ಮಾತ್ರ ಸರಕು ಸಾಗಾಟ ವ್ಯವಹಾರ ನಡೆಯುತ್ತಿದೆ. 2,000ದಿಂದ 2,500 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಯಾಂತ್ರೀಕೃತ ನೌಕೆಗಳು ಮಾತ್ರ ಸಂಚರಿಸುತ್ತಿವೆ.

ಈ ಬಂದರು ಅಭಿವೃದ್ಧಿಯಾದರೆ ಪ್ರವಾಸಿ ಹಡಗುಗಳೂ ಆಗಮಿಸ ಬಹುದಾಗಿದ್ದು, ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ. ಲಕ್ಷದ್ವೀ ಪಕ್ಕೆ ಇಲ್ಲಿಂದ ಪ್ರಯಾಣಿಕರ ಹಡಗು ಸಂಚರಿಸುತ್ತದೆಯಾದರೂ ಮಂಗಳೂರಿನಿಂದ ಅಲ್ಲಿಗೆ ಹೋಗಲು ಅವಕಾಶವಿಲ್ಲ. ಕೊಚ್ಚಿಯಿಂದಲೇ ಹೋಗಬೇಕು. ಇಲ್ಲಿಂದ ಅವಕಾಶ ನೀಡಿದರೆ ಅದು ಕೂಡ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದೀತು.

ರಸ್ತೆ ಸಂಪರ್ಕ ಸವಾಲು
ಹಳೆ ಬಂದರು ಪ್ರದೇಶಕ್ಕೆ ಸರಕು ಕೊಂಡೊಯ್ಯುವ ವಾಹನಗಳು ಮಂಗ ಳೂರು ನಗರದ ನಡುವಿನಿಂದಲೇ ಸಂಚರಿಸುವ ಅನಿವಾರ್ಯ ಇದೆ. ತಣ್ಣೀರುಬಾವಿ-ಬೆಂಗ್ರೆ ರಸ್ತೆ ಅಭಿವೃದ್ಧಿ ಯಾದರೆ ಅದನ್ನು ಬದಲಿ ರಸ್ತೆಯಾಗಿ ಬಳಸಬಹುದು.

Advertisement

ಗೋವಾ, ಗುಜರಾತ್‌ ಹಡಗು ಸಂಚಾರ ಪುನರಾರಂಭ ನಿರೀಕ್ಷೆ
ಹಲವು ವರ್ಷಗಳ ಹಿಂದೆ 4,500ರಿಂದ 5,000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಸರಕು ಹಡಗುಗಳು ಗುಜರಾತ್‌ನಿಂದ ಸೋಡಾ ಪುಡಿ ಮೊದಲಾದ ಸರಕು ಹೊತ್ತು ಬರುತ್ತಿದ್ದವು. ಗೋವಾದಿಂದ ಪ್ರಯಾಣಿಕ ಹಡಗು ಬರುತ್ತಿತ್ತು. ಒಂದು ವೇಳೆ ಬಂದರಿನ ಸಮಗ್ರ ಅಭಿವೃದ್ಧಿಯಾದರೆ ಆ ರಾಜ್ಯಗಳ ಹಡಗುಗಳು ಮತ್ತೆ ತಮ್ಮ ಸಂಚಾರ-ವ್ಯವಹಾರ ಆರಂಭಿಸಬಹುದು.

ಹಳೆ ಬಂದರು ಅಭಿವೃದ್ಧಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು ಫೈನಾನ್ಶಿಯಲ್‌ ಬಿಡ್‌ ಸರಕಾರದ ಮಟ್ಟದಲ್ಲಿ ನಡೆಯಲಿದೆ. ಅನಂತರ ಕಾರ್ಯಾದೇಶ ನೀಡಲಾಗುತ್ತದೆ. ಲಾಕ್‌ಡೌನ್‌ ಕಾರಣ ಪ್ರಕ್ರಿಯೆ ನಿಧಾನವಾಗಿತ್ತು. ಶೀಘ್ರ ಕಾರ್ಯಾ ದೇಶ ನೀಡುವ ನಿರೀಕ್ಷೆ ಇದೆ.
–  ಮಂಚೇಗೌಡ, ಕಾರ್ಯನಿರ್ವಾಹಕ ಎಂಜಿನಿಯರ್‌,  ಬಂದರು, ಒಳನಾಡು ಜಲ ಸಾರಿಗೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next