Advertisement

ಮಂಗಳೂರು: ಜಿಲ್ಲೆಯಲ್ಲಿ ಕ್ಲಿಕ್‌ ಆಗದ ನೋಟಾ; ನೋಟಾ ನಿರಾಸಕ್ತಿ ಯಾಕೆ?

12:27 PM Mar 28, 2023 | Team Udayavani |

ಮಂಗಳೂರು: ಕಣದಲ್ಲಿರುವ ಯಾವ ಅಭ್ಯರ್ಥಿಯೂ ಇಷ್ಟವಿಲ್ಲ, ಅವರ ಮೇಲೆ ಭರವಸೆ ಇಲ್ಲ ಎಂಬ ಅಭಿಪ್ರಾಯ ಹೊಂದಿರುವ ಮತದಾರರಿಗೆ ಚುನಾವಣ ಆಯೋಗ ನೀಡಿರುವ ಅವಕಾಶ ನೋಟಾ (ನನ್‌ ಆಫ್‌ ದಿ ಎಬವ್‌.) 2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ನೋಟಾ ಚಾಲ್ತಿಗೆ ಬಂದಿತು. ಇದುವರೆಗೆ 3 ಚುನಾವಣೆಗಳಲ್ಲಿ ಬಳಕೆಯಾಗಿದೆ. ಆದರೆ ಎಲ್ಲೂ ಗಣನೀಯವಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರಿಲ್ಲ.

Advertisement

ದಕ್ಷಿಣ ಕನ್ನಡದಲ್ಲೂ 2014ರಲ್ಲಿ ನೋಟಾ ಪರಿಚಯಿಸಲ್ಪಟ್ಟಿತು. ಆಗ ಸಹ್ಯಾದ್ರಿ ಸಂಚಯ ಎಂಬ ಪರಿಸರಾಸಕ್ತರ ಗುಂಪು ನೋಟಾಕ್ಕೆ ಒತ್ತು ನೀಡಿತು. ಮುಖ್ಯವಾಗಿ ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಗಳಿಗೆ ಹಾನಿಯಾಗುತ್ತದೆ. ಪರಿಣಾಮವಾಗಿ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ಬಳಲುತ್ತಾಳೆ, ಎಲ್ಲ ಪಕ್ಷಗಳೂ ಎತ್ತಿನಹೊಳೆ ವಿಷಯದಲ್ಲಿ ಜಿಲ್ಲೆಯ ಜನರನ್ನು ವಂಚಿಸಿವೆ. ಹಾಗಾಗಿ ಎಲ್ಲ ಅಭ್ಯರ್ಥಿಗಳನ್ನೂ ಧಿಕ್ಕರಿಸಿ, ನೋಟಾ ಮತ ಚಲಾಯಿಸಿ ಎಂದು ಪ್ರಚಾರ ಮಾಡಿತು.

ಆದರೆ ಪಕ್ಷ ರಾಜಕೀಯ ಪ್ರಮುಖವಾಗಿರುವ ಜಿಲ್ಲೆಯಲ್ಲಿ ನೋಟಾಕ್ಕೆ ಅಷ್ಟಾಗಿ ಯಶಸ್ಸು ಸಿಗಲಿಲ್ಲ. ಒಟ್ಟು 7,109 ಮತಗಳು ನೋಟಾಕ್ಕೆ ಬಿದ್ದವು. ಅಂದರೆ ಚಲಾವಣೆಯಾದ ಒಟ್ಟು ಮತಗಳ ಶೇ 0.59ರಷ್ಟು.

2018ರಲ್ಲಿ ವಿಧಾನಸಭಾ ಚುನಾವಣೆ. ಆಗಲೂ ಎತ್ತಿನಹೊಳೆ ವಿಷಯ ಮುನ್ನೆಲೆಗೆ ಬಂದಿತು. ಜತೆಗೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಗದಿರುವ ಕಾಮಗಾರಿ, ಹಾಲಿ ಶಾಸಕರ ವಿರುದ್ಧ ಅಸಮಾಧಾನ ಎಲ್ಲವೂ ಸೇರಿತು. ಹಾಗಿದ್ದರೂ ದೊಡ್ಡ ಸಂಖ್ಯೆಯಲ್ಲಿ ನೋಟಾಕ್ಕೆ ಮತದಾರರು ಮುಂದಾಗಲಿಲ್ಲ. ಒಟ್ಟು 8,823 ಮತಗಳು ನೋಟಾದಡಿ ಬಿದ್ದವು. ಸುಳ್ಯದಲ್ಲಿ ಗರಿಷ್ಠ ಎಂದರೆ 1,310 ಮತಗಳು(ಶೇ. 0.78), ಕನಿಷ್ಠ ಬಂಟ್ವಾಳದಲ್ಲಿ 946(ಶೇ.0.52) ಮತಗಳು ಬಿದ್ದವು.

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯಗಳೇನೂ ನೋಟಾಕ್ಕೆ ಇರಲಿಲ್ಲ. ನೋಟಾ ಪರವಾಗಿ ಪ್ರಚಾರ ಮಾಡುವುದು, ನೋಟಾ ಮತ ಚಲಾಯಿಸುವಂತೆ ಸಂಘ ಸಂಸ್ಥೆಗಳು ಆಗ್ರಹಿಸುವುದು ಸರಿಯಲ್ಲ, ಅದು ನಿಯಮಬಾಹಿರ ಎಂದು ಜಿಲ್ಲಾಧಿಕಾರಿಗಳು ಕೆಲವೆಡೆ ನೇರವಾಗಿ ತಿಳಿಸಿದ್ದರು. ಎಲ್ಲದರ ಪರಿಣಾಮ ಆ ವರ್ಷ ನೋಟಾ ಮತ 7,380 ಆಗಿತ್ತು. ಹಿಂದಿನ ಸಂಸತ್‌ ಚುನಾವಣೆಗೆ ಹೋಲಿಸಿದರೆ ಒಟ್ಟು ಮತಗಳಲ್ಲಿ ನೋಟಾ ಮತಗಳ ಶೇಕಡಾವಾರು ಇಳಿಕೆಯಾಗಿ 0.55ಕ್ಕೆ ತಲುಪಿತು. ಹಾಗಾಗಿ ನೋಟಾ ಜಿಲ್ಲೆಯಲ್ಲಿ ಅಷ್ಟಾಗಿ ಪ್ರಭಾವ ಬೀರಿಲ್ಲ ಎಂದೇ ವಿಶ್ಲೇಷಿಸಲಾಗುತ್ತದೆ.

Advertisement

ಈ ವರ್ಷವೂ ಕಡಿಮೆ?
ಮುಖ್ಯವಾಗಿ ಸುಳ್ಯದ ಕೆಲವೆಡೆ ಮತದಾನ ಬಹಿಷ್ಕಾರದ ಕೂಗು ಇರುವುದು, ಈಗ ನೋಟಾ ಪರವಾಗಿ ಪರಿವರ್ತಿತಗೊಂಡಿರಬಹುದು. ಆರಂತೋಡಿನಂತಹ ಭಾಗಗಳಲ್ಲಿ ರಸ್ತೆ ಕಾಮಗಾರಿ ಪೂರ್ಣವಾಗದಿದ್ದರೆ ನೋಟಾ ಮತ ಹಾಕುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ. ಅದು ಬಿಟ್ಟರೆ ನೋಟಾಕ್ಕೆ ಒಲವು ತೋರುವಂಥ ವಿಷಯಗಳು ಇನ್ನೂ ಚರ್ಚೆಗೆ ಬಂದಿಲ್ಲ.

ನೋಟಾ ನಿರಾಸಕ್ತಿ ಯಾಕೆ?
ವಿಷಯ ಸರಳ, ನಮ್ಮ ಕಡೆ ಹೆಚ್ಚಿನವರಿಗೆ ಚುನಾ ವಣ ಪ್ರಕ್ರಿಯೆ, ಮತದಾನದಲ್ಲಿ ಆಸಕ್ತಿ ಇದೆ. ಅಂಥವರೆ ಲ್ಲರೂ ಮತಗಟ್ಟೆಗೆ ತೆರಳಿ ಮತ ಹಾಕುತ್ತಾರೆ. ಯಾರಿಗೆ ನಿರಾಸಕ್ತಿ ಇದೆಯೋ ಅವರು ದೂರ ಉಳಿಯುತ್ತಾರೆ. ನೋಟಾದಿಂದ ಯಾವುದೇ ಪರಿಣಾಮ ಇಲ್ಲದಿರುವಾಗ ಮತಗಟ್ಟೆಗೆ ಬಂದು ನೋಟಾ ಹಾಕುವಷ್ಟು ಆಸಕ್ತಿ ತೋರುವುದಿಲ್ಲ.
ಡಾ|ಪಿ.ಅನಂತಕೃಷ್ಣ ಭಟ್‌, ಚುನಾವಣ ವಿಶ್ಲೇಷಕರು

ಸಂಸತ್‌ ಚುನಾವಣೆ
2014- ನೋಟಾ ಮತ 7,109(ಶೇ. 0.59)

2019 -ನೋಟಾ ಮತ 7,380(ಶೇ.0.55)

Advertisement

Udayavani is now on Telegram. Click here to join our channel and stay updated with the latest news.

Next