ಸುರತ್ಕಲ್ : ಬಿಸಿಲಿನ ದಗೆ ಹೆಚ್ಚಾಗುತ್ತಿದ್ದಂತೆ ಇತ್ತ ನೀರು ಪೂರೈಕೆಯಲ್ಲಿ ವ್ಯತ್ಯಾಸ ಕಾಣತೊಡಗಿದೆ. ಹಳೆಯ ಕಾಲದ ಪೂರೈಕೆ ವ್ಯವಸ್ಥೆಯನ್ನೇ ನೆಚ್ಚಿಕೊಂಡಿರುವ ಮಹಾನಗರ ಪಾಲಿಕೆ ದೂರದ ತುಂಬೆಯಿಂದ ಮಂಗಳೂರು, ಸುರತ್ಕಲ್ ವರೆಗೆ ಪೂರೈಕೆ ಸಂದರ್ಭ ಯಥೇಚ್ಚ ನೀರಿನ ಪೋಲು, ಸರಿಯಾದ ವಿತರಣೆ ವ್ಯವಸ್ಥೆ ಇಲ್ಲದೆ ಎರಡು ದಿನಕ್ಕೊಮ್ಮೆ ನೀರು ಪೂರೈಸುವ ಸಂದಿಗ್ಧ ಸ್ಥಿತಿ ಬಂದೊದಗಿದೆ.
ತುಂಬೆಯಿಂದ ನೇರವಾಗಿ ನೀರು ಸರಬರಾಜು ನಿರಾತಂಕವಾಗಿ ಆಗಬೇಕಾದರೆ ವಿದ್ಯುತ್ ಕಡಿತವಾಗ ಬಾರದು. ಹೀಗಾದಾಗ ಮಾತ್ರ ಎಲ್ಲೆಡೆ ಇರುವ ನೀರಿನ ಪಂಪಿಂಗ್ ಸ್ಟೇಷನ್‌ಗಳಿಗೆ ನೀರು ನಿರಾತಂಕವಾಗಿ ಪೂರೈಕೆ ಸಾಧ್ಯವಿದೆ. ಇದೀಗ ಸಾಮಾನ್ಯ ವ್ಯವಸ್ಥೆಯಲ್ಲಿಯೇ ನೀರಿನ ಸರಬರಾಜು ಆಗುತ್ತಿದೆ. ನಗರದಲ್ಲಿ ಅರ್ಧ ಗಂಟೆ ಪವರ್ ಕಟ್, ದುರಸ್ತಿ ಮತ್ತಿತರ ಕಾರಣಗಳಿಗೆ ವಿದ್ಯುತ್ ಕಡಿತವಾದಾಗ ತುಂಬೆಯಿಂದ ಪೈಪ್ ಮೂಲಕ ಹರಿಯುವ ನೀರು ಪಾಲಿಕೆಯ ಕೊನೆಯ ವಾರ್ಡ್ ವರೆಗೆ ಮುಟ್ಟುವ ಖಚಿತತೆಯಲ್ಲ. ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ಎಕ್ಸ್‌ಪ್ರೆಸ್ ಲೈನ್ ಇಲ್ಲ. ಇದರಿಂದ ವಿದ್ಯುತ್ ಕಡಿತವಾದಾಗ ಕೆಲವು ವಾರ್ಡ್‌ಗಳಿಗೆ ಎರಡು ದಿನ, ನಾಲ್ಕು ದಿನಗಳವರೆಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ತುಂಬೆಯಿಂದ ಪಂಪ್ ಮಾಡಿದ ನೀರು ಪಾಲಿಕೆಯಾದ್ಯಂತ ವಿವಿಧ ಪಂಪಿಂಗ್ ಸ್ಟೇಷನ್‌ಗಳಿಗೆ ಮುಟ್ಟಲು ನಿರಂತರ ವಿದ್ಯುತ್ ಇದ್ದರೆ ಮಾತ್ರ ಸಾಧ್ಯ.
ತುಂಬೆಯಲ್ಲಿ ಬೇಕಾದಷ್ಟು ನೀರು!
ತುಂಬೆಯಲ್ಲಿ ಇದೀಗ ಪಾಲಿಕೆಗೆ ಮುಂದಿನ ಸುಮಾರು ಮೂರು ತಿಂಗಳಿಗೆ ಸಮಸ್ಯೆಯಾಗದಷ್ಟು ನೀರು ಸಂಗ್ರಹವಿದೆ. ಆದರೆ ಪ್ರಧಾನವಾಗಿ ಪೂರೈಕೆ ಮತ್ತು ವಿದ್ಯುತ್ ಎಕ್ಸ್‌ಪ್ರೆಸ್ ಲೈನ್ ಇಲ್ಲದೇ ಇರುವುರಿಂದ ನಿರೀಕ್ಷಿತ ಮಟ್ಟದಲ್ಲಿ ಮುಂದಿನ ಬಿರು ಬೇಸಗೆ ಕಾಲದಲ್ಲಿ ನೀರು ಪೂರೈಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ಅಧಿಕಾರಿಗಳನ್ನು ಚಿಂತೆಗೀಡಾಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಈ ವರ್ಷ ನೀರಿನ ಸಮಸ್ಯೆ ಎದುರಾಗದು ಎಂಬ ಲೆಕ್ಕಾಚಾರ ಪಾಲಿಕೆಯದ್ದು, ಮುಂಜಾಗ್ರತೆ ಕ್ರಮವಾಗಿ ಬಂಟ್ವಾಳ ಶಂಭೂರು ಗ್ರಾಮದಲ್ಲಿರುವ ಎಎಂಆರ್ ವಿದ್ಯುತ್ ಯೋಜನೆಯ ಅಣೆಕಟ್ಟಿನಲ್ಲಿ ನೀರನ್ನು ಸ್ಟಾಕ್ ಇಡಲಾಗಿದೆ. ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ನೀರಿನ ಮಟ್ಟ ಇಳಿಕೆಯಾದಾಗ ಈ ಮೇಲಿನ ಡ್ಯಾಮ್‌ಗಳಿಂದ ನೀರು ಬಿಡುವ ವ್ಯವಸ್ಥೆಯೂ ಇದೆ. ಆದರೆ ಎಕ್ಸ್ ಪ್ರಸ್ ವಿದ್ಯುತ್ ಲೈನ್‌ನ ಕೊರತೆಯಿಂದ ಪ್ರತಿದಿನ ನೀರು ಪೂರೈಕೆ ಮಾಡುವುದು ಸಮಸ್ಯೆಯಾಗಿದೆ. ಈ ಬಗ್ಗೆ ಪಾಲಿಕೆ ಮೆಸ್ಕಾಂ ಜತೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಬೇಕಿದೆ.
ಚರ್ಚಿಸಿ ಸೂಕ್ತ ಕ್ರಮ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಬೇಸಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ನೀಡುವ ಕುರಿತು ಕ್ರಮ ವಹಿಸಲಾಗುವುದು. ಈ ಹಿಂದೆ ಇದ್ದ ಲೈನ್ ಯಾಕಾಗಿ ಬಳಸುತ್ತಿಲ್ಲ ಎಂಬುದರ ಕುರಿತು ನನಗೆ ಮಹಿತಿ ಇಲ್ಲ. ಈ ಬಗ್ಗೆ ಸಂಬಂಧ ಪಟ್ಟ ಮೆಸ್ಕಾಂ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಸ್ನೇಹಲ್ ಆರ್.,
ಮೆಸ್ಕಾಂ ನಿರ್ದೇಶಕರು
ವಿಶೇಷ ವರದಿ