ಸುರತ್ಕಲ್: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸುರತ್ಕಲ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ರಾಜ್ಯ ಸರಕಾರ ಹಿಂದುಳಿದ ವರ್ಗ, ಪ.ಜಾತಿ, ಪ.ಪಂಗಡಗಳಿಗೆ ಸಾಕಷ್ಟು ಅನುದಾನ ಘೋಷಿಸಿ ವಿವಿಧ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ ಎಂದು ಪುದುಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಹೇಳಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ಸುರತ್ಕಲ್ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ಆಯೋಜಿಸಲಾದ ಹೊಸ ವರ್ಷದ ಸೌಹಾರ್ದ ಸಂಭ್ರಮಾಚರಣೆ 2017ರ ಸಂಗಮ ಹಾಗೂ 2018ರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುದುಚೇರಿಯಲ್ಲಿ 15 ಲಕ್ಷ ಜನ ಸಂಖ್ಯೆಯಿದ್ದು, ಬಡ ವರ್ಗಕ್ಕೆ ಪ್ರತೀ ತಿಂಗಳು 20 ಕೆ.ಜಿ. ಅಕ್ಕಿ ವಿತರಣೆ, ಸ್ವ ಉದ್ಯೋಗಕ್ಕಾಗಿ ಆರ್ಥಿಕ ಅನುದಾನ, ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಮತ್ತಿತರ ಸೌಲಭ್ಯಗಳನ್ನು ಸರಕಾರ ಒದಗಿಸು ತ್ತಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ
ನೀಡಲಾಗಿದ್ದು, ಈ ಬಾರಿ 1 ಲಕ್ಷ ಪ್ರವಾಸಿಗರು ಆಗಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೀರೆ, ಮುಖ್ಯಮಂತ್ರಿ ಆರೋಗ್ಯ ನಿಧಿ , ಗಂಗಾ ಕಲ್ಯಾಣ ಕೊಳವೆ ಯೋಜನೆ ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಯಿತು. ಶಾಸಕ ಮೊದಿನ್ ಬಾವಾ ಪ್ರಸ್ತಾವನೆಗೈದರು. ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ಶ್ರೀ ಕ್ಷೇತ್ರ ಕಟೀಲಿನ ಅನಂತ ಆಸ್ರಣ್ಣ, ಚೊಕ್ಕಬೆಟ್ಟು ಮಸೀದಿಯ ಅಜೀಜ್ ದಾರಿಮಿ, ಸುರತ್ಕಲ್ ಚರ್ಚ್‌ನ ಧರ್ಮಗುರು ಪೌಲ್ ಪಿಂಟೋ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪುರುಷೋತ್ತಮ ಚಿತ್ರಾಪುರ, ಸುರತ್ಕಲ್ ವಿಧಾನಸಭಾ ಕ್ಷೇತ್ರದ ಕೇಶವ ಸನಿಲ್, ಗುರುಪುರ ಬ್ಲಾಕ್‌ನ ಸುರೇಂದ್ರ ಕಾಂಬ್ಳಿ, ಉಪಮೇಯರ್ ರಜನೀಶ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತಾರ್, ರಾಜ್ಯ ಮಹಿಳಾ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ವೈ. ರಾಘವೇಂದ್ರ ರಾವ್, ನವೀನ್ ಡಿ’ಸೋಜಾ, ಅಬ್ದುಲ್ ಗಫೂರ್, ಕುಮಾರ್ ಮೆಂಡನ್, ಬಶೀರ್ ಅಹ್ಮದ್, ಅಶೋಕ್ ಶೆಟ್ಟಿ, ದೀಪಕ್ ಪೂಜಾರಿ, ಗಿರೀಶ್ ಆಳ್ವ, ಅಪ್ಪಿ, ಮಂಗಳೂರು ಬಾವಾ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 4 ಕೋಟಿ ರೂ. ಮೊತ್ತದ ವಿವಿಧ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಇದೇ ಸಂದರ್ಭ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಹಾಗೂ 1.5 ಕೋಟಿ ರೂ. ವೆಚ್ಚದಲ್ಲಿ ಗುಡ್ಡೆಕೊಪ್ಲ ಸುರತ್ಕಲ್ ರಸ್ತೆಯ ಕಾಂಕ್ರಿಟೀಕರಣಕ್ಕೆ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಶಿಲಾನ್ಯಾಸ ನೆರವೇರಿಸಿದರು.