Advertisement

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ: 32 ಕೋ. ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆಗೆ ಚಾಲನೆ

10:28 PM Aug 17, 2020 | mahesh |

ಪಣಂಬೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿರುವೈಲು, ಬೈತುರ್ಲಿ ಹಾಗೂ ಬೈಕಂಪಾಡಿ ಅಂಗರಗುಂಡಿ ಪ್ರದೇಶದಲ್ಲಿ ನೂತನ ಒಳಚರಂಡಿ ಕಾಮಗಾರಿಗೆ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ತಿರುವೈಲು ವಾರ್ಡ್‌ನಲ್ಲಿ ಸೋಮವಾರ ಚಾಲನೆ ನೀಡಿದರು.

Advertisement

ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರ ಸಂಪೂರ್ಣ ಅನುದಾನ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ನಳಿನ್‌ ಕುಮಾರ್‌ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಹಕಾರ ನೀಡಿದ್ದಾರೆ. ಚುನಾವಣೆ ಸಂದರ್ಭ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ. ಜನತೆ ಕಾಮಗಾರಿ ಸಂದರ್ಭ ಸಹಕರಿಸಿದರೆ ಶೀಘ್ರ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಆವಶ್ಯಕತೆಯಾದ ಒಳಚರಂಡಿ ಯೋಜನೆ ಬಹುತೇಕ ಪ್ರದೇಶಗಳಲ್ಲಿ ಇನ್ನೂ ಬಾಕಿಯಿದೆ. ಒಳಚರಂಡಿ ವ್ಯವಸ್ಥೆಗೆ ಸಾರ್ವಜನಿಕ ರಿಂದ ಮನವಿಯೂ ಬಂದಿತ್ತು. ಈ ಹಿಂದೆ ಮಂಗಳೂರು ಉತ್ತರದ ಕೆಲವು ಕಡೆ ಕಾಮಗಾರಿ ಪೂರ್ಣವಾಗಿದ್ದರೂ ತಾಂತ್ರಿಕ ಕಾರಣದಿಂದ ಸಂಪರ್ಕ ಸಾಧ್ಯವಾಗಿಲ್ಲ. ಇನ್ನು ಕೆಲವು ಕಡೆ ಸೋರಿಕೆಯಿಂದ ಸಮಸ್ಯೆಯಾಗಿದೆ. ನೂತನ ಯೋಜನೆಯು ಯಾವುದೇ ಕಾರಣಕ್ಕೂ ವೈಫಲ್ಯಕ್ಕೆ ತುತ್ತಾಗದಂತೆ ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡಬೇಕಿದೆ ಎಂದು ಅ ಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯರು ಕೂಡ ಕಾಮಗಾರಿಯ ಗುಣಮಟ್ಟದ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.

ಮೇಯರ್‌ ದಿವಾಕರ ಪಾಂಡೇಶ್ವರ, ಉಪಮೇಯರ್‌ ವೇದಾವತಿ, ಕಾರ್ಪೊರೇಟರ್‌ ಹೇಮಲತಾ ರಘು ಸಾಲ್ಯಾನ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶರತ್‌ ಕುಮಾರ್‌, ಕಿರಣ್‌ ಕುಮಾರ್‌ ಕೋಡಿಕಲ್‌, ಕೆಐಎಡಿಯುಎಫ್‌ಸಿಯ ಅಧಿ ಕಾರಿ ಮಂಜಯ್ಯ, ಜಯಪ್ರಕಾಶ್‌ ಮೊದಲಾದವರು ಉಪಸ್ಥಿತರಿದ್ದರು.

ಅನುದಾನ ವಿವರ
ಕ್ರಿಮಿಟ್‌ ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದು, ವಾರ್ಡ್‌ 20ರ ತಿರುವೈಲು ಪ್ರದೇಶದ ಕಸ್ಟಮ್ಸ್‌ ಕಾಲನಿ, ಅಮೃತನಗರಕ್ಕೆ ಒಟ್ಟು 10 ಕೋಟಿ ರೂ. ವೆಚ್ಚದಲ್ಲಿ, ದೇವರ ಪದವು, ಜ್ಯೋತಿ ನಗರ 1.50 ಕೋ.ರೂ., ಮಂಗಳ ನಗರದಲ್ಲಿ 1 ಕೋ.ರೂ., ಬೈತುರ್ಲಿಯಲ್ಲಿ 5 ಕೋ.ರೂ., ಬೈಕಂಪಾಡಿ ಅಂಗರ ಗುಂಡಿ, ಕುಡುಂಬೂರು ಪ್ರದೇಶಗಳಲ್ಲಿ ಅಂದಾಜು 14.50 ಕೋ.ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ ಮಾಡಲಾಗಿದೆ. ಇಲ್ಲಿ ಒಟ್ಟು 2 ವೆಟ್‌ವೆಲ್‌, ಎಸ್‌ಟಿಪಿ ಸಹಿತ ಸಂಪರ್ಕ ಕಾಮಗಾರಿ ನಡೆಯಲಿದೆ. ಕೆಯುಐಡಿಎಫ್‌ಸಿ ಸಂಸ್ಥೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಕೋಲ್ಕತಾ ಮೂಲದ ಕಂಪೆನಿ ಗುತ್ತಿಗೆ ಪಡೆದುಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next