Advertisement

ಕುದ್ರೋಳಿ, ಮಂಗಳಾದೇವಿಯಲ್ಲಿ ನವರಾತ್ರಿ  ವೈಭವ ಆರಂಭ

10:25 AM Oct 11, 2018 | |

ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಶ್ರೀ ಮಂಗಳಾದೇವಿ ದೇವಸ್ಥಾನ ಸಹಿತ ನಗರದ ವಿವಿಧ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯ ನವರಾತ್ರಿ ಮಹೋತ್ಸವ ಬುಧವಾರದಿಂದ ಆರಂಭಗೊಂಡಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ವೈಭವದ ಮಂಗಳೂರು ದಸರಾದ ಅಂಗವಾಗಿ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಬುಧವಾರ ಬೆಳಗ್ಗೆ ಪ್ರತಿಷ್ಠಾಪಿಸಲಾಯಿತು.

Advertisement

ಬಣ್ಣ ಬಣ್ಣದ ಅಲಂಕಾರ
ಕ್ಷೇತ್ರದ ದರ್ಬಾರ್‌ ಮಂಟಪದಲ್ಲಿನ ಶಾರದಾ ಮಾತೆ ಪ್ರತಿಷ್ಠಾಪಿಸಲ್ಪಡುವ ವೇದಿಕೆಯನ್ನು ಸಂಪೂರ್ಣ ಅಕ್ರೆಲಿಕ್‌ ವರ್ಣಾಲಂಕಾರದ ಜತೆಗೆ ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಮಂಟಪವನ್ನು ವಿಶೇಷ ಅಲಂಕಾರದೊಂದಿಗೆ ಮೂಲ್ಕಿಯ ಸುವರ್ಣ ಆರ್ಟ್ಸ್ನ ಚಂದ್ರಶೇಖರ ಸುವರ್ಣ ಹಾಗೂ ತಂಡದವರು ಸಜ್ಜುಗೊಳಿಸಿದ್ದಾರೆ. 

ಶಿವಮೊಗ್ಗದ ಕುಬೇರ ಮತ್ತು ತಂಡದವರು ಶಾರದಾ ಮಾತೆಯ ಮೂರ್ತಿ ರಚಿಸಿದ್ದಾರೆ. ಅರಮನೆ ದರ್ಬಾರನ್ನು ಹೋಲುವ ರೀತಿಯಲ್ಲಿ ಪ್ರತಿ ವರ್ಷ ಹೊಸ ಹೊಸ ವಿನ್ಯಾಸಗಳೊಂದಿಗೆ ಮಂಟಪವನ್ನು ಅಲಂಕಾರಗೊಳಿಸಲಾಗುತ್ತಿದೆ. ಬುಧವಾರ ಶಾರದಾ ಪ್ರತಿಷ್ಠೆಯ ವೇಳೆ ನಗರದ ಹುಲಿ ವೇಷದ ತಂಡದಿಂದ ಹುಲಿ ಕುಣಿತ ಗಮನ ಸೆಳೆಯಿತು. ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, 10.45ಕ್ಕೆ ಕಲಶ ಪ್ರತಿಷ್ಠೆ, 11.50ಕ್ಕೆ ನವ ದುರ್ಗೆಯರ ಹಾಗೂ ಶಾರದಾ ಪ್ರತಿಷ್ಠೆ ನೆರವೇರಿತು. ಬಳಿಕ ಪುಷ್ಪಾಲಂಕಾರ ಮಹಾಪೂಜೆ ನಡೆದು, ರಾತ್ರಿ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ ನಡೆಯಿತು.

ಇಂದಿನ ಕಾರ್ಯಕ್ರಮ
ಬೆಳಗ್ಗೆ 10ಕ್ಕೆ ದುರ್ಗಾ ಹೋಮ, ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ರಾತ್ರಿ 7ರಿಂದ ಭಜನೆ, ರಾತ್ರಿ 9ರಿಂದ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ ಜರಗಲಿದೆ. ಸಂಜೆ 6ಕ್ಕೆ ಕುದ್ರೋಳಿ ಗಣೇಶ್‌ ಬಳಗದಿಂದ ಜಾದೂ ಪ್ರದರ್ಶನ ನಡೆಯಲಿದೆ. 

ಶ್ರೀ ಮಂಗಳಾದೇವಿಯಲ್ಲಿ ನವರಾತ್ರಿ ಸಂಭ್ರಮ
ಮಹತೋಭಾರ ಶ್ರೀ ಮಂಗಳಾ ದೇವಿ ದೇವಸ್ಥಾನದಲ್ಲಿ ಬುಧವಾರದಿಂದ ನವರಾತ್ರಿ ಸಂಭ್ರಮ ಆರಂಭವಾಗಿದೆ. ಬೆಳಗ್ಗೆ 9ಕ್ಕೆ ಗಣಪತಿ ಪ್ರಾರ್ಥನೆ ನಡೆದು ಉತ್ಸವ ಉದ್ಘಾಟನೆಗೊಂಡಿತು. ಸುರತ್ಕಲ್‌ನ ಎನ್‌ಐಟಿಕೆ ನಿವೃತ್ತ ಪ್ರಾಧ್ಯಾಪಕ ರಾಮಕೃಷ್ಣ ಯಾಜಿ ಉದ್ಘಾಟಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ, ಆನುವಂಶಿಕ ಟ್ರಸ್ಟಿ ಜಿ. ರಘುರಾಮ ಉಪಾಧ್ಯಾಯಸಹಿತ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ಮುಳಿಹಿತ್ಲು ಗೇಮ್ಸ್‌ ಟೀಮ್‌ ಇದರ ಹುಲಿ ವೇಷದ ಸುವರ್ಣ ಮಹೋತ್ಸವದ ಪ್ರಯುಕ್ತ ಧ್ವಜಸ್ತಂಭದ ಪೀಠಕ್ಕೆ ಬೆಳ್ಳಿ ಹಾಗೂ ಪಂಚ ಲೋಹದ ಹೊದಿಕೆಯನ್ನು ಸಮರ್ಪಿಸಲಾಯಿತು.ಶ್ರೀ ರಾಮ ಕೃಷ್ಣ ಮಠದ ಶ್ರೀ ಜಿತಕಾಮಾಂದಜಿ ಮೊದಲಾದವರು ಉಪಸ್ಥಿತರಿದ್ದರು. ಇಂದಿನ ಕಾರ್ಯಕ್ರಮ ಅ. 11ರಂದು ಧಾರ್ಮಿಕ ವಿಧಿವಿಧಾನಗಳು ನಡೆದು ಸಂಜೆ 4ರಿಂದ 5ರ ವರೆಗೆ ಭಜನೆ, ಜಾನ್ಕಿ  ಡಿ.ವಿ. ಅವರಿಂದ ನೃತ್ಯ ವೈವಿಧ್ಯ, ಅನಂತರ ಪ್ರೊ| ಶಂಕರ್‌ ಹಾಗೂ ಶಂಕರ್‌ ಜೂನಿಯರ್‌ ಇವರಿಂದ ಗಿಲಿ ಗಿಲಿ ಮ್ಯಾಜಿಕ್‌ ಪ್ರದರ್ಶನಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next