Advertisement

29 ವಾರ್ಡ್‌ಗಳಲ್ಲಿ ಮಹಿಳಾ ಮಣಿಗಳ ಸ್ಪರ್ಧೆ !

10:22 PM Nov 01, 2019 | Team Udayavani |

ಮಹಾನಗರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ. 50 ಮಹಿಳಾ ಮೀಸಲಾತಿಯು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಮೊದಲ ಚುನಾವಣೆಯನ್ನು ಎದುರಿಸುತ್ತಿದೆ. ಹೀಗಾಗಿ 60 ವಾರ್ಡ್‌ಗಳ ಪೈಕಿ 29 ವಾರ್ಡ್‌ಗಳಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 11 ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿರುವುದು ವಿಶೇಷ.ಸ್ಥಳೀಯ ಸಂಸ್ಥೆ ಮತ್ತು ಪೌರಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವಾಗ ಶೇ.50 ಮಹಿಳಾ ಮೀಸಲಾತಿ ಕಲ್ಪಿಸಬೇಕೆಂಬ ನಿಯಮ ಜಾರಿಗೊಂಡ ಬಳಿಕ 2013ರಲ್ಲಿ ಮನಪಾ ಚುನಾವಣೆ ಎದುರಿಸಿದೆ. ಆದರೆ, ಆಗ ಶೇ.33ರಷ್ಟು ಮಹಿಳೆಯರು ಮಾತ್ರ ಚುನಾವಣೆಗೆ ಸ್ಪರ್ಧಿಸಿದ್ದರು. ಕೆಲವೆಡೆ ಸಾಮಾನ್ಯ ಮೀಸಲಾತಿಯಡಿ ಮಹಿಳೆಯರು ಸ್ಪರ್ಧಿಸಿದ್ದರು. ಇದೀಗ ಪೂರ್ಣ ಪ್ರಮಾಣದಲ್ಲಿ ಶೇ. 50 ಮೀಸಲಾತಿ ಅನುಷ್ಠಾನ ಗೊಳ್ಳುವುದರೊಂದಿಗೆ ಪಾಲಿಕೆಗೆ ನ. 12ರಂದು ಮತದಾನ ನಡೆಯುತ್ತಿದೆ. ಹಾಗಾಗಿ 60ರ ಪೈಕಿ 29 ವಾರ್ಡ್‌ಗಳಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

Advertisement

ಮಹಿಳೆಯರು ಸ್ಪರ್ಧಿಸುವ ವಾರ್ಡ್‌ಗಳು
ಸುರತ್ಕಲ್‌, ಸುರತ್ಕಲ್‌ (ಪೂರ್ವ), ಕಾಟಿಪಳ್ಳ (ಕೃಷ್ಣಾಪುರ), ಕಾಟಿಪಳ್ಳ (ಉತ್ತರ), ಇಡ್ಯಾ (ಪೂರ್ವ), ಇಡ್ಯಾ (ಪಶ್ಚಿಮ), ಕುಳಾಯಿ, ಪಣಂಬೂರು, ಕುಂಜತ್ತಬೈಲ್‌ (ದಕ್ಷಿಣ), ಕಾವೂರು, ಪಚ್ಚನಾಡಿ, ತಿರುವೈಲು, ಪದವು (ಪಶ್ಚಿಮ), ದೇರೆಬೈಲು (ಪೂರ್ವ), ದೇರೆಬೈಲು (ಪಶ್ಚಿಮ), ಮಣ್ಣಗುಡ್ಡ, ಕಂಬÛ, ಕದ್ರಿ (ಉತ್ತರ), ಶಿವಬಾಗ್‌, ಫಳ್ನೀರ್‌, ಸೆಂಟ್ರಲ್‌ ಮಾರ್ಕೆಟ್‌, ಡೊಂಗರಕೇರಿ, ಬಂದರು, ಅಳಪೆ (ದಕ್ಷಿಣ), ಅಳಪೆ (ಉತ್ತರ), ಕಣ್ಣೂರು, ಜಪ್ಪಿನಮೊಗರು, ಹೊಗೆಬಜಾರ್‌, ಬೋಳಾರ ವಾರ್ಡ್‌ಗಳಲ್ಲಿ ಮಹಿಳೆಯರು ಸ್ಪರ್ಧಿಸಲು ಅವಕಾಶ ಪಡೆದುಕೊಂಡಿದ್ದಾರೆ. ಇದರಿಂದ ಈ 29 ಕ್ಷೇತ್ರಗಳಲ್ಲಿ ಮಹಿಳೆಯರ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆಯಲಿದೆ.

ಮಹಿಳಾ ಮತದಾರರೇ ನಿರ್ಣಾಯಕ!
ಪಾಲಿಕೆಯ ಒಟ್ಟು 60 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಏಕೆಂದರೆ, ಈ ಎಲ್ಲ ವಾರ್ಡ್‌ಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರ ಪಾತ್ರ ದೊಡ್ಡದಿದೆ.
60 ವಾರ್ಡ್‌ಗಳಲ್ಲೇ ಅತೀ ಹೆಚ್ಚು ಮತದಾರರನ್ನು ಹೊಂದಿರುವ ವಾರ್ಡ್‌ ಬೆಂಗ್ರೆ. ಇಲ್ಲಿ ಒಟ್ಟು 7,974 ಮಂದಿ ಮತದಾರರ ಪೈಕಿ 3,520 ಮಂದಿ ಪುರುಷ ಮತದಾರರಾದರೆ, 4,453 ಮಂದಿ ಮಹಿಳಾ ಮತದಾರರಿದ್ದಾರೆ.

ಸುರತ್ಕಲ್‌ (ಪಶ್ಚಿಮ)ದಲ್ಲಿ 3,940 ಮಂದಿ ಮತದಾರರ ಪೈಕಿ 1,854 ಪುರುಷರಾದರೆ, 2,086 ಮಂದಿ ಮಹಿಳಾ ಮತದಾರರು. ಇಡ್ಯಾ (ಪಶ್ಚಿಮ)ದಲ್ಲಿ 6763 ಮಂದಿ ಒಟ್ಟು ಮತದಾರರ ಪೈಕಿ 3,259 ಪುರುಷರಾದರೆ, 3,504 ಮಹಿಳೆಯರು. ಕುಳಾಯಿಯಲ್ಲಿ 6,311 ಒಟ್ಟು ಮತದಾರರು. ಈ ಪೈಕಿ 2992 ಪುರುಷರಾದರೆ, 3,319 ಮಹಿಳಾ ಮತದಾರರು. ಪಣಂಬೂರಿನಲ್ಲಿ 5,886 ಒಟ್ಟು ಮತದಾರರಾದರೆ, ಈ ಪೈಕಿ 2,944 ಮಹಿಳಾ ಮತದಾರರಿದ್ದು, 2941 ಪುರುಷರಿದ್ದಾರೆ. ಪಂಜಿಮೊಗರಿನಲ್ಲಿ 5,646 ಒಟ್ಟು ಮತದಾರರ ಪೈಕಿ 2812 ಪುರುಷರು ಹಾಗೂ 2,834 ಮಹಿಳಾ ಮತದಾರರು. ಕುಂಜತ್ತಬೈಲ್‌ (ಉತ್ತರ)ದಲ್ಲಿ ಒಟ್ಟು 6,682 ಮಂದಿ ಮತದಾರರ ಪೈಕಿ 3,302 ಪುರುಷರಾದರೆ, 3,380 ಮಹಿಳಾ ಮತದಾರರು. ಕೊಡಿಯಾಲಬೈಲ್‌ನಲ್ಲಿ 6,053 ಒಟ್ಟು ಮತದಾರರಾದರೆ, 2,921 ಪುರುಷರು ಹಾಗೂ 3,132 ಮಹಿಳೆಯರು. ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಒಟ್ಟು 5,091 ಮತದಾರರಿದ್ದು, ಈ ಪೈಕಿ 2514 ಪುರುಷರಾದರೆ, 2,577 ಮಹಿಳೆಯರು. ಬಂದರಿನಲ್ಲಿ 6,100 ಒಟ್ಟು ಮತದಾರರಿದ್ದು, 2,999 ಪುರುಷರಾದರೆ, 3,101 ಮಹಿಳೆಯರು. ಕಣ್ಣೂರಿನಲ್ಲಿ 6,022 ಒಟ್ಟು ಮತದಾರರಾದರೆ, 2,803 ಪುರುಷರು ಹಾಗೂ 3,219 ಮಹಿಳೆಯರು.

ಒಟ್ಟು 1,86,639 ಮಹಿಳಾ ಮತದಾರರು
ಈ ಬಾರಿಯ ಮನಪಾ ಚುನಾವಣೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 3,92,979 ಮಂದಿ ಮತದಾರರಿದ್ದಾರೆ. ಈ ಪೈಕಿ 2,06,313 ಪುರುಷರಾದರೆ, 1,86,639 ಮಂದಿ ಮಹಿಳಾ ಮತದಾರರಿದ್ದಾರೆ. 27 ಮಂದಿ ಇತರ ಮತದಾರರಿದ್ದಾರೆ.

Advertisement

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next