Advertisement
ಮತದಾನ: ಮಧ್ಯಾಹ್ನ 12.00 – 03.00
Related Articles
ಮಧ್ಯಾಹ್ನದ ವೇಳೆಗೆ ನಾವು ಮೊದಲು ಹೋದದ್ದು ಬೆಂಗ್ರೆ ಹಿ.ಪ್ರಾ. ಶಾಲೆಯ ಮತಗಟ್ಟೆಗೆ. ಇಲ್ಲಿ ಅಪರಾಹ್ನ 3 ಗಂಟೆಯ ವೇಳೆಗೆ ಸುಮಾರು ಶೇ.60ರಷ್ಟು ಮತದಾನವಾಗಿತ್ತು. ಬೆಳಗ್ಗೆ ಸ್ವಲ್ಪ ಹೆಚ್ಚು ಮತದಾನವಾಗಿದ್ದು, ಮಧ್ಯಾಹ್ನ ನೀರಸವಾಗಿತ್ತು. ಇಲ್ಲಿನ ಹೆಚ್ಚಿನ ಮತದಾರರು ಬೋಟ್‌ನಲ್ಲಿ ತೆರಳಿರುವುದರಿಂದ ಅವರು ಬರುವುದು ಸಂಜೆಯಾಗುತ್ತದೆ. ಹೀಗಾಗಿ ಸಂಜೆ ವೇಳೆಗೆ ಮತದಾನ ಬಿರುಸು ಪಡೆಯಬಹುದು ಎಂದು ಸ್ಥಳೀಯರು ಹೇಳುತ್ತಾರೆ.ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಮತದಾನ ಮಾಡಿ ಬಂದ 80 ವರ್ಷದ ವೃದ್ಧೆ ಜಯಂತಿ ಅವರನ್ನು ಮಾತನಾಡಿಸಿದಾಗ, “ಬೆಳಗ್ಗೆ ಮತದಾನಕ್ಕೆ ಹೋಗಲು ಸಮಯ ಸಿಗಲಿಲ್ಲ. ಹಾಗಾಗಿ ಮಧ್ಯಾಹ್ನ ಮತದಾನ ಮಾಡಿ ಬಂದೆ. ಮನೆಯ ಹತ್ತಿರವೇ ಮತಗಟ್ಟೆ ಇರುವುದರಿಂದ ನಡೆದಾಡಲು ಸಮಸ್ಯೆಯಾಗುವುದಿಲ್ಲ’ ಎಂದರು.
Advertisement
ಬಳಿಕ ಕುದ್ರೋಳಿ ಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿನ ಮತಗಟ್ಟೆಗೆ ಹೋದಾಗ, ಅಲ್ಲಿಯೂ ಮಧ್ಯಾಹ್ನದ ವೇಳೆಗೆ ಮತದಾರರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಕಂಡು ಬಂತು. ಸರತಿ ಸಾಲು ಇಲ್ಲಿರಲಿಲ್ಲ. ಆದರೆ ಇಲ್ಲಿ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗಿರುವುದರಿಂದ 3 ಗಂಟೆ ವೇಳೆಗೆ ಮತದಾನ ಪ್ರಮಾಣ ಶೇ. 70 ದಾಟಿತ್ತು. ಮಧ್ಯಾಹ್ನದ ವೇಳೆ ಬಿಸಿಲಿರುವುದರಿಂದ ಮತದಾರರು ಬರಲು ಹಿಂದೇಟು ಹಾಕುತ್ತಾರೆ. ಸಂಜೆ ಇನ್ನೂ ಹೆಚ್ಚಾಗಬಹುದು ಎಂದು ಇಲ್ಲಿನ ಸಿಬಂದಿಗಳು ಹೇಳಿದರು.
ಲೇಡಿಹಿಲ್ ವಿಕ್ಟೋರಿಯಾ ಶಾಲೆ, ದೇರೆಬೈಲ್ ಹೋಲಿ ಫ್ಯಾಮಿಲಿ ಮತ್ತು ಕೊಟ್ಟಾರ ಸೈಂಟ್ ಪೀಟರ್ ಶಾಲೆಗೆ ಹೋದಾಗಲೂ ಮಧ್ಯಾಹ್ನದ ವೇಳೆಯಾದ್ದರಿಂದ ಮತದಾರರ ಸಂಖ್ಯೆ ಕಡಿಮೆ ಇತ್ತು. ಉರಿಬಿಸಿಲಿನ ನಡುವೆಯೂ ಆಗೊಮ್ಮೆ, ಈಗೊಮ್ಮೆ ಮತದಾರರು ಬಂದು ಹೋಗುತ್ತಿದ್ದರು. ಪ್ರತಿ ಚುನಾವಣೆಯ ವೇಳೆಯೂ ಮಧ್ಯಾಹ್ನ ಮತದಾನ ಕಡಿಮೆ ಇರುತ್ತದೆ. ಅಂತೆಯೇ ಈ ಬಾರಿಯೂ ಆಗಿದೆ. ಬೆಳಗ್ಗೆ ಬಿರುಸಿನ ಮತದಾನವಾಗಿದ್ದು, ಅಪರಾಹ್ನ 4 ಗಂಟೆಯ ಬಳಿಕ ಇನ್ನಷ್ಟು ಜನ ಆಗಮಿಸ ಬಹುದು ಎಂದು ಸಿಬಂದಿ ಹೇಳಿದರು.
ಬಂದರು ಶಾಲೆಯಲ್ಲಿರುವ ಮತಗಟ್ಟೆಯ ಲ್ಲಿಯೂ ಮತದಾನಕ್ಕೆ ಸರತಿ ಸಾಲು ಇರಲಿಲ್ಲ. ಇಲ್ಲಿ ಬೆಳಗ್ಗಿನ ಹೊತ್ತು ಬೋಳಾರ ನಿಂಫಾ ಸದನ ವೃದ್ಧಾಶ್ರಮದ 15 ಮಂದಿ ನಿವಾಸಿಗಳು ಮತದಾನ ಮಾಡಿದ್ದ ಹಿನ್ನೆಲೆಯಲ್ಲಿ ನಮ್ಮ ತಂಡವು ನಿಂಫಾ ಸದನಕ್ಕೆ ತೆರಳಿ ಹಿರಿಯ ಮತದಾರರೊಂದಿಗೆ ಮಾತನಾಡುವ ಪ್ರಯತ್ನ ಮಾಡಿತು.
ಹಿರಿಯ ನಾಗರಿಕರಾದ 85 ವರ್ಷದ ಎಲಿಜಾ ಪಾಯಸ್ ಅವರಲ್ಲಿ ಮಾತನಾಡಿಸಿದಾಗ, “ನಾನು ಮತದಾನ ಮಾಡುವುದನ್ನು ಯಾವುದೇ ಕಾರಣಕ್ಕೆ ತಪ್ಪಿಸುವುದಿಲ್ಲ. ಮತದಾನ ಮಾಡುವುದು ನಮ್ಮ ಕರ್ತವ್ಯ. ಒಳ್ಳೆಯ ವ್ಯಕ್ತಿ ಆರಿಸಿ ಬಂದಲ್ಲಿ ನಮ್ಮ ನಗರಕ್ಕೆ ಒಳ್ಳೆಯದಾಗುತ್ತದೆ’ ಎಂದರು.
ಇನ್ನೋರ್ವ ಹಿರಿಯ ನಾಗರಿಕ 77 ವರ್ಷದ ವಲೇರಿಯನ್ ಕುಲಾಸೋ ಅವರನ್ನು ಮಾತನಾಡಿಸಿದಾಗ, “ನಾನು ಮತದಾನ ಹಾಕಲು ಶುರು ಮಾಡಿದಂದಿನಿಂದ ಇಲ್ಲಿಯವರೆಗೆ ಒಮ್ಮೆಯೂ ಮತದಾನವನ್ನು ತಪ್ಪಿಸಿಲ್ಲ. ಈಗಿನ ಮತದಾರರು ಮತದಾನ ಮಾಡಿ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡಬೇಕು’ ಎಂದು ಯುವ ಮತದಾರರಿಗೆ ಮತದಾನದ ಮಹತ್ವ ಹೇಳಿದರು. ಮತದಾನ ಮಾಡುವುದಕ್ಕಾಗಿ ಸಂಸ್ಥೆಯಿಂದ ರಿಕ್ಷಾ ಮತ್ತು ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಬಂದರು ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಇಲ್ಲಿನ ಹಿರಿಯ ನಾಗರಿಕರು ಮತದಾನ ಮಾಡಿದರು.
ಅನಾರೋಗ್ಯವಾದರೂ ಮತದಾನ ಬದ್ಧತೆಕಳೆದ ಲೋಕಸಭಾ ಚುನಾವಣೆ ವೇಳೆ ಮತದಾನ ಮಾಡುವ ಉದ್ದೇಶದಿಂದ ರೋಗಿಗಳು ಮತಕೇಂದ್ರಕ್ಕೆ ತೆರಳಿ ಮತದಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ರೋಗಿಗಳು ತೆರಳಿರಬಹುದೇ ಎಂದು ತಿಳಿದುಕೊಳ್ಳಲು ಸುದಿನ ತಂಡವು ಅತ್ತಾವರ ಕೆಎಂಸಿ ಆಸ್ಪತ್ರೆಗೆ ತೆರಳಿತ್ತು. ಬಳಿಕ ಇಲ್ಲಿನ ಉದ್ಯೋಗಿಗಳಲ್ಲಿ ಕೇಳಿ ದಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗೋಪಾಲಕೃಷ್ಣ ಅವರು ಪದುವಾ ಶಾಲೆಯ ಮತ ಗಟ್ಟೆಯಲ್ಲಿ ಹಾಗೂ ಫೆಲಿಕ್ಸ್ ಅವರು ಕುಲಶೇಖರ ಮತಗಟ್ಟೆಯಲ್ಲಿ ಮತದಾನ ಮಾಡಿದ್ದ ಬಗ್ಗೆ ತಿಳಿಸಿದರು. ಅನಾರೋಗ್ಯವಿದ್ದರೂ ಮತದಾನ ಮಾಡುವ ಮೂಲಕ ಈ ಇಬ್ಬರು ಮತದಾನ ಮಾಡುವ ಮೂಲಕ ಬದ್ಧತೆ ಪ್ರದರ್ಶಿಸಿದ್ದರು. ಇಬ್ಬರನ್ನೂ ಮನೆಯವರೇ ಮತಗಟ್ಟೆಗೆ ಕರೆದೊಯ್ದಿದ್ದರು. 6.30ಕ್ಕೆ ಮತ ಹಾಕಲು ಬಂದಿದ್ದರು!
ಕುದ್ರೋಳಿ ಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ವೃದ್ಧೆಯೋರ್ವರು ಮತದಾನ ಮಾಡಲು ಬೆಳಗ್ಗೆ 6.30ಕ್ಕೇ ಬಂದಿದ್ದರು. ಆದರೆ ಮತದಾನ ಶುರುವಾಗುವುದು 7 ಗಂಟೆಗೆ ಎಂದು ಸಿಬಂದಿ ಹೇಳಿದ್ದರಿಂದ ತಮ್ಮ ನಿತ್ಯ ಕೆಲಸಕ್ಕೆ ವಾಪಸ್ಸಾದರು. ಬಳಿಕ ಅಪರಾಹ್ನ 3ರ ವೇಳೆಗೆ ಬಂದು ಮತ ಚಲಾಯಿಸಿ ಹೋದರು. - ಧನ್ಯಾ ಬಾಳೆಕಜೆ