Advertisement

 ಮಹಾನಗರ ಪಾಲಿಕೆ: “ಇ ಖಾತಾ’ಚುರುಕು; ಸಮಸ್ಯೆಗಳೂ ಅಧಿಕ !

10:23 PM Oct 15, 2020 | mahesh |

ಮಹಾನಗರ: ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲಕರ ಅಧಿಕೃತ ಹಾಗೂ ಅನಧಿಕೃತವಲ್ಲದ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ವಿವರವನ್ನು ದಾಖಲಿಸಿದ ಇ ಖಾತಾ ಯೋಜನೆಗೆ ವೇಗ ದೊರಕಿದೆ. ಆದರೆ, ಇ ಖಾತಾ ಪಡೆಯಲು ಪಾಲಿಕೆಯಲ್ಲಿ ಸಮಸ್ಯೆಗಳ ಸವಾಲು ಕೂಡ ಅಧಿಕವಿದೆ!

Advertisement

ಪಾಲಿಕೆಯ ಮಾಹಿತಿ ಪ್ರಕಾರ ಇಲ್ಲಿಯವರೆಗೆ 1,716 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದ್ದು, ರಾಜ್ಯದಲ್ಲಿಯೇ ಇದು ಗಮನೀಯ ಸಾಧನೆ ಎನ್ನಲಾಗುತ್ತಿದೆ. ಆದರೆ ಇ ಖಾತಾ ಪಡೆಯಲು ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳು, ತಾಂತ್ರಿಕವಾದ ಸವಾಲುಗಳು ಎದುರಾಗುತ್ತಿದೆ.

“ಪ್ರಾಪರ್ಟಿ ಐಡಿ’ಯದ್ದೇ ಗಡಿಬಿಡಿ
ಪಾಲಿಕೆ ವ್ಯಾಪ್ತಿಯ ಪ್ರತೀ ಭೂಮಿಯನ್ನು ಪಾಲಿಕೆಯು ಸರ್ವೇ ಮಾಡಿ ನಿಗದಿತ ಐಡಿಯನ್ನು ನೀಡಲಾಗುತ್ತದೆ. 2002ರಲ್ಲಿ ಕೇಂದ್ರ ಸರಕಾರದ ನಿರ್ಮಲ ನಗರ ಯೋಜನೆಯಲ್ಲಿ ಐಡಿ ನೀಡುವ ಪ್ರಕ್ರಿಯೆ ಆರಂಭವಾಯಿತಾದರೂ ಇದು ಶೇ. 50ರಷ್ಟು ಪ್ರದೇಶಕ್ಕೆ ಮಾತ್ರ ಆಗಿದೆ. ಉಳಿದ ಭೂಮಿಗೆ ಪ್ರಾಪರ್ಟಿ ಐಡಿ ಆಗಿಲ್ಲ. ಸದ್ಯ ಇ-ಖಾತಾ ಮಾಡುವ ವೇಳೆಯಲ್ಲಿ ಪ್ರಾಪರ್ಟಿ ಐಡಿ ಕೂಡ ನಮೂದು ಮಾಡಬೇಕಾದ ಹಿನ್ನೆಲೆಯಲ್ಲಿ ಬಹುತೇಕ ಮಂದಿಗೆ ಈ ಐಡಿ ಇಲ್ಲದೆ ಸಮಸ್ಯೆ ಆಗಿದೆ. ಸದ್ಯ ಐಡಿ ಇಲ್ಲದವರಿಗೆ ಹತ್ತಿರದ ಭೂಮಿಯ ಐಡಿಗೆ ಸರಿ ಹೊಂದುವ ಹೊಸ ಐಡಿ ಹಾಕಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮತ್ತೂಂದು ಸಮಸ್ಯೆಗೆ ಕಾರಣವಾಗಲೂಬಹುದು ಎಂಬ ಆತಂಕವೂ ಇದೆ. ಇ ಖಾತಾಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅದು ಅನುಮೋದನೆಯಾಗಿ ಇ ಖಾತಾ ದೊರೆಯಲು ಕೆಲವು ಸಮಯ ಕಾಯಬೇಕಾಗುತ್ತದೆ. ಹೀಗಾಗಿ ಪಾಲಿಕೆಗೆ ಅಲೆದಾಡುವಂತಾಗುವುದು ಎಂಬ ದೂರು ಕೂಡ ಇದೆ.

ಈ ಎಲ್ಲ ಸಮಸ್ಯೆಗಳ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್‌ ಅವರು ಇತ್ತೀಚೆಗೆ ಪಾಲಿಕೆಯಲ್ಲಿ ಸಭೆ ನಡೆಸಿ ಸಮಸ್ಯೆ ಪರಿಹಾರದ ಬಗ್ಗೆ ಭರವಸೆ ನೀಡಿರುವುದು ಗಮನೀಯ ಸಂಗತಿ.

“ಐಡಿ’ಗಾಗಿ ಆ್ಯಪ್‌!
ನಗರಾಭಿವೃದ್ಧಿ ಇಲಾಖೆಯು “ಆ್ಯಪ್‌’ ಜಾರಿಗೆ ಮುಂದಾಗಿದೆ. ಇದರ ಪ್ರಕಾರ ಕಂದಾಯ ಇಲಾಖೆಯ ಬಿಲ್‌ ಕಲೆಕ್ಟರ್‌ ಇ-ಖಾತಾಕ್ಕೆ ಅರ್ಜಿ ಹಾಕಿದವರ ಜಾಗಕ್ಕೆ ಹೋಗಿ ಅಲ್ಲಿ ಆ್ಯಪ್‌ ಆನ್‌ ಮಾಡಿದಾಗ ಸ್ವಯಂಚಾಲಿತವಾಗಿಯೇ ಹೊಸ ಪಾಪರ್ಟಿ ಐಡಿ ಸಿಗಲಿದೆ. ಸದ್ಯ ಈ ಪ್ರಕ್ರಿಯೆ ಚಿಂತನೆಯ ಹಂತದಲ್ಲಿದೆ.

Advertisement

ಏನಿದು ಇ ಖಾತಾ?
ಗ್ರಾಮಾಂತರ ಭಾಗದಲ್ಲಿ ಆರ್‌ಟಿಸಿ ಇದ್ದ ಹಾಗೆ, ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಖಾತಾ ನೀಡಲಾಗುತ್ತಿತ್ತು. ಬಳಿಕ ಕರ್ನಾಟಕ ಮುನಿಸಿಪಲ್‌ ಡಾಟಾ ಸೊಸೈಟಿ, ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇ-ಖಾತಾ ಅನುಷ್ಠಾನಿಸಲಾಗಿದೆ. ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ, ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು ಆಸ್ತಿಗಳ ಮಾಲಕತ್ವ ಹಕ್ಕು ವರ್ಗಾವಣೆ ಮಾಡಲು, ಆಸ್ತಿ ತೆರಿ ಗೆಯ ನಕಲನ್ನು ಡಿಜಿಟಲ್‌ ಸಹಿಯೊಂದಿಗೆ ತಂತ್ರಾಂಶದಿಂದ ಪಡೆಯಲು ಅವಕಾಶ ನೀಡ ಲಾಗಿದೆ. ಇದರಂತೆ ಮಂಗಳೂರಿನಲ್ಲಿ ಇಲ್ಲಿಯವರೆಗೆ 1,716 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ.

ಇ-ಖಾತಾ ನೋಂದಣಿಗೆ ವೇಗ
ಮಂಗಳೂರಿನಲ್ಲಿ ಇ-ಖಾತಾ ನೋಂದಣಿ ವೇಗ ದೊರಕಿದೆ. ಬೆಂಗಳೂರನ್ನು ಹೊರತುಪಡಿಸಿ ಮಂಗಳೂರಿನಲ್ಲಿಯೇ ಇ-ಖಾತಾ ನೋಂದಣಿ ಆಗುತ್ತಿದೆ. ಜಾಗದ ಕುರಿತ ಪೂರ್ಣ ದಾಖಲಾತಿಯನ್ನು ನೀಡುವ ಮುಖೇನ ಇ-ಖಾತಾ ಮಾಡಿಸಲು ಅವಕಾಶ ನೀಡಲಾಗಿದೆ. ಇ-ಖಾತಾ ಮಾಡಿಸುವಲ್ಲಿ ಜನರಿಗೆ ಸಮಸ್ಯೆ ಆಗದಂತೆ ಪಾಲಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
-ಸಂತೋಷ್‌ ಕುಮಾರ್‌, ಉಪ ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next