Advertisement

Mangalore: ಮರವೂರು ಅಣೆಕಟ್ಟು; ಸದ್ಯಕ್ಕಿಲ್ಲ ಕುಡಿಯುವ ನೀರಿನ ಸಮಸ್ಯೆ

12:04 PM Apr 22, 2023 | Team Udayavani |

ಮಹಾನಗರ: ಈ ಬಾರಿಯ ಎಲ್ಲೆಡೆ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತಿದ್ದು, ಅಲ್ಲಲ್ಲಿ ಅಣೆಕಟ್ಟುಗಳು ಬರಿದಾಗುತ್ತಿವೆ. ಆದರೆ ಬಜಪೆ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮರವೂರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಣೆಕಟ್ಟಿನಲ್ಲಿ ಸದ್ಯದ ಮಟ್ಟಿಗೆ ನೀರಿನ ಸಂಗ್ರಹ ಸಾಕಷ್ಟಿದೆ.

Advertisement

ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಉಪ್ಪು ನೀರು ತಡೆ ಅಣೆಕಟ್ಟು. ನದಿಯಲ್ಲಿ ಒಳ ಹರಿವು ಇಲ್ಲದಿದ್ದರೂ ಅಣೆಕಟ್ಟಿನಿಂದ ಮೇಲ್ಭಾಗದಲ್ಲಿ ಸುಮಾರು 18 ಕಿ.ಮೀ. ವ್ಯಾಪ್ತಿಯ ವರೆಗೆ ನೀರಿನ ಸಂಗ್ರಹವಿದೆ. ಇದರಿಂದಾಗಿ ಮಳೆಯಾಗದಿದ್ದರೂ ಆತಂಕ ಪಡುವ ಪರಿಸ್ಥಿತಿ ಇಲ್ಲ. ಘಟ್ಟದ ತಪ್ಪಲಲ್ಲಿ ಮಳೆಯಾಗಿ ನೀರಿನ ಒಳ ಹರಿವು ಹೆಚ್ಚಾದರೆ ಈ ಬಾರಿ ಸಮಸ್ಯೆಯೇ ಇಲ್ಲದಂತೆ ಬೇಸಗೆಯನ್ನು ನಿಭಾಯಿಸಿದಂತಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

14 ಗ್ರಾಮಗಳಿಗೆ ನೀರು
ಅಣೆಕಟ್ಟಿನಿಂದ ಬಜಪೆ ಸುತ್ತಮುತ್ತಲಿನ 14 ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಬಜಪೆ, ಮರವೂರು, ಕೆಂಜಾರು, ಮೂಡುಶೆಡ್ಡೆ, ಪಡುಶೆಡ್ಡೆ, ಜೋಕಟ್ಟೆ, ಬಡಗ ಎಕ್ಕಾರು, ತೆಂಕ ಎಕ್ಕಾರು, ಪೆರ್ಮುದೆ, ಕುತ್ತೆತ್ತೂರು, ಬಾಳ, ಕಳವಾರು, ಸೂರಿಂಜೆ, ದೇಲಂತಬೆಟ್ಟು ಗ್ರಾಮಗಳಿಗೆ ಮರವೂರು ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತದೆ. ಅಣೆಕಟ್ಟಿನಿಂದ 5 ಎಂಎಲ್‌ಡಿ ನೀರನ್ನು ಸಂಸ್ಕರಿಸಿ, ಪ್ರತಿ ದಿನ ಪೂರೈಕೆ ಮಾಡಲಾಗುತ್ತಿದೆ.ಅಣೆಕಟ್ಟಿನಲ್ಲಿ ನೀರು ಇರುವುದರಿಂದ ಇಕ್ಕೆಲಗಳಲ್ಲಿರುವ ಕೃಷಿಕರ ಜಮೀನಿಗೂ ಯಥೇಚ್ಛ ನೀರು ಸಿಗುವಂತಾಗಿದ್ದು, ಬಾವಿ, ಕೆರೆಗಳಲ್ಲೂ ನೀರು ಧಾರಾಳವಾಗಿದೆ.

ಬಳಕೆಯಲ್ಲಿ ಮಿತಿ ಇರಲಿ
ಒಂದೆಡೆ ನೀರು ಸಾಕಷ್ಟಿದ್ದರೂ, ಇನ್ನೊಂದೆಡೆ ಬಿಸಿಲ ಬೇಗೆ ಹೆಚ್ಚಿರುವುದರಿಂದ ಆವಿಯಾಗುವ ಪ್ರಮಾಣವೂ ಹೆಚ್ಚಿದೆ. ಬೇಸಗೆ ಮಳೆಯ ನಿರೀಕ್ಷೆ ಇರುವುದರಿಂದಾಗಿ ನೀರಿಗೆ ಸಮಸ್ಯೆ ಇಲ್ಲ ಎಂದು ಹೇಳಬಹುದಾದರೂ ನೀರಿನ ನಿಯಮಿತ ಬಳಕೆ ಮಾಡದಿದ್ದರೆ, ಮಳೆಯೂ ಕೈ ಕೊಟ್ಟರೆ ಸಮಸ್ಯೆ ಖಚಿತ ಎನ್ನುವುದನ್ನೂ ಮರೆಯುವಂತಿಲ್ಲ. ಎರಡು ವರ್ಷದ ಹಿಂದೆ ಮರವೂರು ಅಣೆಕಟ್ಟಿನಲ್ಲೂ ನೀರಿನ ಪ್ರಮಾಣ ಬಹುತೇಕ ಕಡಿಮೆಯಾಗಿ ತಳ ಕಾಣುತಿತ್ತು ಎನ್ನುವುದನ್ನು ಇಲ್ಲಿ ನೆನಪಿಸಬಹುದು.

ಕಲುಷಿತ ನೀರು ಸೇರ್ಪಡೆ ಆತಂಕ
ಮರವೂರು ಕಿಂಡಿ ಅಣೆಕಟ್ಟಿನ ಕೆಳ ಭಾಗದ ನೀರು, ಕೈಗಾರಿಕೆಗಳ ಕಲುಷಿತ ನೀರು ಸೇರಿ ಮಲೀನಗೊಂಡಿದೆ. ಇದರಿಂದ ನೀರು ಸಂಪೂರ್ಣ ಕಪ್ಪಾಗಿದ್ದು, ಆಯಿಲ್‌ ಪದರ ನೀರಿನ ಮೇಲ್ಭಾಗದಲ್ಲಿ ಎದ್ದು ಕಾಣುತ್ತಿದೆ. ಈ ನೀರು ಉಬ್ಬರದ ಸಂದರ್ಭ ಮೇಲಕ್ಕೆ ಬರುವುದರಿಂದ ಅಣೆಕಟ್ಟಿನ ಒಳಗೆ ಕೆಲವು ಕಡೆಗಳಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ಡ್ಯಾಂನಲ್ಲಿರುವ ಕುಡಿಯುವ ನೀರು ಕೂಡ ಕಲುಷಿತವಾಗುವ ಆತಂಕ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯರು.

Advertisement

ಸದ್ಯ ಸಮಸ್ಯೆ ಇಲ್ಲ ಮರವೂರು ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಸದ್ಯದ ಮಟ್ಟಿಗೆ ಸಮಸ್ಯೆಯಾಗುವ ಯಾವುದೇ
ಸಾಧ್ಯತೆಗಳು ಇಲ್ಲ. ಒಳ ಹರಿವು ಮಾತ್ರ ಸ್ಥಗಿತಗೊಂಡಿದ್ದು, ಅಣೆಕಟ್ಟಿನಿಂದ ಹೊರಕ್ಕೂ ನೀರು ಹರಿದು ಹೋಗುತ್ತಿಲ್ಲ.
– ಜಿ. ನರೇಂದ್ರ ಬಾಬು, ಕಾರ್ಯ, ನಿರ್ವಾಹಕ ಎಂಜಿನಿಯರ್‌, ಗ್ರಾಮೀಣ
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

*ಭರತ್‌ ಶೆಟ್ಟಿಗಾರ್‌

 

Advertisement

Udayavani is now on Telegram. Click here to join our channel and stay updated with the latest news.

Next