Advertisement

Mangalore: ಬರ ಎದುರಿಸುವುದಕ್ಕೆ ಮಂಗಳೂರು, ಮೂಡುಬಿದಿರೆ ಸಜ್ಜು

01:34 PM Feb 10, 2024 | Team Udayavani |

ಮಹಾನಗರ: ಜಿಲ್ಲೆಯ ಎರಡು ತಾಲೂಕುಗಳು “ಸಾಧಾರಣ ಬರಪೀಡಿತ’ ತಾಲೂಕುಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಬಳಿಕ ಈ ಬೇಸಗೆಯಲ್ಲಿ ಸಮಸ್ಯೆಗಳಾಗದಂತೆ ಜಿಲ್ಲಾಡಳಿತ ಕ್ರಮಗಳಿಗೆ ಮುಂದಾಗಿದೆ. ಮಂಗಳೂರು ಹಾಗೂ ಮೂಡುಬಿದಿರೆ ಈ ಎರಡೂ ತಾಲೂಕುಗಳೂ ಮಳೆ ಕೊರತೆ ಆಧಾರದಲ್ಲಿ ಬರಪೀಡಿತವೆಂದು ಘೋಷಿಸಲ್ಪಟ್ಟಿದ್ದರೂ ಹಿಂಗಾರು ಮಳೆ ಉತ್ತಮವಾಗಿ (ವಾಡಿಕೆಗಿಂತ ಶೇ. 5 ಹೆಚ್ಚಳ)ಬಿದ್ದಿರುವುದು ಜನರಿಗೆ, ಆಡಳಿತಕ್ಕೆ ತುಸು ನಿರಾಳವೆನಿಸಿದೆ.

Advertisement

ಆದರೂ ಫೆಬ್ರವರಿ ಕೊನೆಗೆ ಅಥವಾ ಮಾರ್ಚ್‌ ವೇಳೆಗೆ ಮಳೆಯಾಗದಿದ್ದರೆ ಈ ಎರಡೂ ತಾಲೂಕುಗಳಲ್ಲಿ ಎಲ್ಲೆಲ್ಲಿ ಸಮಸ್ಯೆಯಾಗಬಹುದು ಎನ್ನುವುದನ್ನು ಆಯಾ ಗ್ರಾಮ ಪಂಚಾಯತ್‌, ಪಟ್ಟಣ ಪಂಚಾಯತ್‌ಗಳ ವ್ಯಾಪ್ತಿಯಲ್ಲೇ ಬರ ನಿವಾರಣ ಯೋಜನೆ ಸಿದ್ಧಪಡಿಸಲಾಗಿದೆ. ಎಲ್ಲ ಪೂರ್ವಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದ್ದು, ನೀರು ಹಾಗೂ ಜಾನುವಾರುಗಳ ಮೇವಿನ ಒದಗಣೆಗೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ.

ಕುಡಿಯುವ ನೀರಿನ ಕೊರತೆ ಬರಬಹುದಾದ ಕಡೆಗಳಲ್ಲಿ ಹತ್ತಿರದಲ್ಲಿರುವ ಹೆಚ್ಚು ನೀರಿನ ಇಳುವರಿ ಇರುವ ಗುಣಮಟ್ಟದ ನೀರಿರುವ ಕೊಳವೆ ಬಾವಿಗಳನ್ನು ಗುರುತಿಸಿ ನಿಯಮಾನುಸಾರ ಬಳಕೆಗಾಗಿ ಕರಾರು ಒಪ್ಪಂದ ಮಾಡಿಕೊಳ್ಳಲು ಸೂಚಿಸಲಾಗಿದೆ. ಗುಡ್ಡಗಾಡು ಪ್ರದೇಶ, ಅಂತರ್ಜಲ ಮೂಲವಿಲ್ಲದ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬಂದರೆ ಟ್ಯಾಂಕರ್‌ ಮೂಲಕ ಸರಬರಾಜು ಮಾಡಲು ಕ್ರಮ ವಹಿಸಬೇಕು. ಇದಕ್ಕಾಗಿಯೇ ಟ್ಯಾಂಕರ್‌ ಯುಟಿಲೈಸೇಶನ್‌ ಎನ್ನುವ ಆ್ಯಪ್‌ ಬಳಸಿ ದತ್ತಾಂಶ ಸಂಗ್ರಹಿಸಬೇಕು ಎಂಬ ಸೂಚನೆ ಬಂದಿದೆ. ಬಾಡಿಗೆ ಟ್ಯಾಂಕರ್‌ ಮೂಲಕ ತುರ್ತು ಕುಡಿಯುವ ನೀರನ್ನು ಒದಗಿಸುವ ಪ್ರಕ್ರಿಯೆಗೆ ಕೆಟಿಪಿಪಿ ಕಾಯ್ದೆಯಡಿ ಪಾರದರ್ಶಕ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ಬಂದಿದೆ.

ಮಂಗಳೂರು, ಮೂಡುಬಿದಿರೆ ಸ್ಥಿತಿ:
ಜನವರಿ ಬಳಿಕ ನೀರಿನ ಅಭಾವ ಬರ ಬಹುದು ಎನ್ನುವ ನಿರೀಕ್ಷೆ ಇತ್ತು, ಆದರೆ ಈ ವರೆಗೆ ಸಮಸ್ಯೆಗಳಾಗಿಲ್ಲ. ಸದ್ಯಕ್ಕೆ ಯಾವುದೇ
ಸಮಸ್ಯೆ ಕಂಡು ಬಂದಿಲ್ಲ, ಬಜಪೆ ಪಟ್ಟಣ ಪಂ. ಹಾಗೂ ಕೆಲವು ಗ್ರಾ.ಪಂ.ಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಖಾಸಗಿ ನೀರು ಪೂರೈಕೆ ಟ್ಯಾಂಕರ್‌ ಗಳನ್ನು ಗುರುತಿಸಿ ಟೆಂಡರ್‌ ಕರೆದು ಇರಿಸಿ ಕೊಂಡಿದ್ದಾರೆ. ಅಲ್ಲದೆ ನೀರಿರುವ ಸರಕಾರಿ ಬೋರ್‌ ವೆಲ್‌, ಖಾಸಗಿ ಬೋರ್‌ವೆಲ್‌ಗ‌ಳನ್ನೂ ಗುರು ತಿಸಿ ಕರಾರು ಮಾಡಿಕೊಳ್ಳಲಾಗಿದೆ. ಯಾವಾಗ ಆವಶ್ಯಕತೆ ಇದೆಯೋ ಆಗ ಅದನ್ನು ಬಳಸಿ
ಕೊಳ್ಳಲಾಗುವುದು ಎಂದು ಮಂಗಳೂರು ತಹ ಶೀಲ್ದಾರ್‌ ಪ್ರಶಾಂತ್‌ ವಿ. ಪಾಟೀಲ್‌ ತಿಳಿಸಿದ್ದಾರೆ. ಮೂಡುಬಿದಿರೆಯಲ್ಲೂ ಸದ್ಯ ಯಾವುದೇ ರೀತಿಯ ಸಮಸ್ಯೆ ಬಂದಿಲ್ಲ, ನೀರು ಪೂರೈಕೆ ಯಲ್ಲೂ ಯಾವುದೇ ವ್ಯತ್ಯಯವಾಗಿಲ್ಲ, ಮೂಡು ಬಿದಿರೆ ಕಿಂಡಿ ಅಣೆಕಟ್ಟಿನಲ್ಲೂ ಸಾಕಷ್ಟು ನೀರಿರುವ ಕಾರಣ ತೊಂದರೆಯಿಲ್ಲ. ಆದರೂ ಇಲ್ಲೂ ಟ್ಯಾಂಕರ್‌ಗಳ ಜತೆ ಒಪ್ಪಂದ, ಖಾಸಗಿ ಬೋರ್‌ ವೆಲ್‌ಗ‌ಳನ್ನು ಗುರುತಿಸುವ ಕೆಲಸವಾಗಿದೆ.

ಸದ್ಯ ಮೇವಿಗೆ ಸಮಸ್ಯೆ ಇಲ್ಲ
ಎರಡೂ ತಾಲೂಕುಗಳಲ್ಲಿ ಮೇವಿನ ಕೊರತೆ ಆಗದಂತೆಯೂ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿಯಾಗಿ ಮೇವಿನ ಪೂರೈಕೆಗೆ ಬೇಕಾದ ಮಾಹಿತಿಯನ್ನು ಪಶುಸಂಗೋಪನ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದು, ಅಗತ್ಯವಿದ್ದರೆ ಟೆಂಡರ್‌ ಕರೆಯಲಾಗುತ್ತದೆ. ಸದ್ಯ ಮಂಗಳೂರಿನಲ್ಲಿ 16,350 ಜಾನುವಾರು, 4,614 ಆಡು/ಕುರಿ ಇವೆ. 9,985 ಟನ್‌ನಷ್ಟು ಮೇವು ಲಭ್ಯವಿದ್ದು, ಮುಂದಿನ 14 ವಾರಗಳಿಗೆ ಸಾಕಾಗಬಹುದು. ಅದೇ ರೀತಿ ಮೂಡುಬಿದಿರೆಯಲ್ಲಿ 19,651 ಜಾನುವಾರು, 1,131 ಆಡು/ ಕುರಿ ಇದೆ, 9,328 ಟನ್‌ ಮೇವು ಲಭ್ಯವಿದ್ದು, ಮುಂದಿನ 12 ವಾರಗಳಿಗೆ ಸಾಕಾಗಬಹುದು ಎಂಬ ನಿರೀಕ್ಷೆ ಇದೆ ಎಂದು ಜಿಲ್ಲಾ ಪಶುಸಂಗೋಪನ ಇಲಾಖೆ ಉಪನಿರ್ದೇಶಕ ಡಾ| ಅರುಣ್‌ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

Advertisement

ಟಾಸ್ಕ್ ಫೋರ್ಸ್‌ ಸಭೆ
ಸದ್ಯಕ್ಕೆ ಎಲ್ಲೂ ಬರದ ಸಮಸ್ಯೆ ಬಂದಿಲ್ಲ, ಮಂಗಳೂರು, ಮೂಡುಬಿದಿರೆ ಇವೆರಡಷ್ಟೇ ಅಲ್ಲ, ಎಲ್ಲ ತಾಲೂಕುಗಳಲ್ಲೂ
ಟಾಸ್ಕ್ ಫೋರ್ಸ್‌ ಸಭೆಗಳನ್ನು ಮಾಡುತ್ತಿದ್ದಾರೆ. ಸಮಸ್ಯೆಗಳಿದ್ದರೆ ತಿಳಿಸುವಂತೆ ಸೂಚಿಸಿದೆ. ಟ್ಯಾಂಕರ್‌ಗಳ ಜತೆ ಒಪ್ಪಂದ, ಖಾಸಗಿ ಬೋರ್‌ವೆಲ್‌ ಗುರುತಿಸುವ ಕೆಲಸ ಮಾಡಲಾಗಿದೆ.
 ಮುಲ್ಲೈ ಮುಗಿಲನ್‌,
ಜಿಲ್ಲಾಧಿಕಾರಿ, ದ.ಕ.

*ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next