ಮಂಗಳೂರು: ದಕ್ಷಿಣ ಕನ್ನಡ ದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದು, ಈ ಬಾರಿ ಬಿಜೆಪಿಯ ನಳಿನ್ ಕುಮಾರ್ ಕಟೀಲು ಅಥವಾ ಕಾಂಗ್ರೆಸ್‌ನ ಮಿಥುನ್ ರೈ -ಇವರಲ್ಲಿ ಯಾರು ಗೆದ್ದರೂ ಕ್ಷೇತ್ರದ ಇತಿಹಾಸದಲ್ಲಿ ಅದೊಂದು ದಾಖಲೆಯೇ.
ನಳಿನ್ ಗೆದ್ದರೆ ಅದು ಅವರಿಗೆ ಹ್ಯಾಟ್ರಿಕ್ ಸಾಧನೆ. ಮಿಥುನ್ ಗೆದ್ದರೆ 29 ವರ್ಷಗಳ ಬಳಿಕ ಬಿಜೆಪಿಯನ್ನು ಸೋಲಿಸಿದ ಸಾಧನೆ. ಜತೆಗೆ ಈ ಕ್ಷೇತ್ರ ದಲ್ಲಿ ಗೆದ್ದವರ ಪೈಕಿ ಅವರೇ ಕಿರಿಯ ರಾಗುತ್ತಾರೆ. ಈ ಹಿಂದೆ ಗೆದ್ದ ಜನಾರ್ದನ ಪೂಜಾರಿ, ಧನಂಜಯ ಕುಮಾರ್ ಮತ್ತು ನಳಿನ್ ಇವರೆಲ್ಲರೂ ಮೊದಲ ಬಾರಿಗೆ ಸಂಸದರಾದಾಗ 40 ದಾಟಿತ್ತು. ಮಿಥುನ್ ಈಗಿನ್ನೂ 35ರ ಯುವಕ.
ನಳಿನ್‌ಗೆ ಕೆಲವು ಸ್ವ ಪಕ್ಷೀಯರಿಂದಲೇ ವಿರೋಧ ಇದ್ದರೂ ಸ್ಪರ್ಧೆಗೆ ಅವಕಾಶ ಲಭಿಸಿದೆ. ಕಾಂಗ್ರೆಸ್ ಕೂಡ ಸ್ವ ಪಕ್ಷದ ಕೆಲವರ ವಿರೋಧ ಇದ್ದರೂ ಸಂಪ್ರದಾಯವನ್ನು ಬದಿಗೊತ್ತಿ ಯುವಕ ರಿಗೆ ಆದ್ಯತೆ ನೀಡಿದೆ. ಹಾಗಾಗಿ ಇಬ್ಬರಿಗೂ ಇದು ಪ್ರತಿಷ್ಠೆಯ ಕಣ.
ಈ ಕ್ಷೇತ್ರದಲ್ಲಿ ಮೊದಲ ಚುನಾವಣೆ (1951ರಲ್ಲಿ) ಯಿಂದ ಹಿಡಿದು 1989ರ ತನಕ ನಡೆದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು, ಸತತವಾಗಿ ನಾಲ್ಕು ದಶಕಗಳ ಕಾಲ ಅದರದೇ ಪ್ರಾಬಲ್ಯವಿತ್ತು. ಕರಾವಳಿಯ ರಾಜ ಕೀಯ ಚಿತ್ರಣ ಬದಲಾದದ್ದು 1991 ರಲ್ಲಿ. ಆಗ ಬಿಜೆಪಿಯ ವಿ. ಧನಂಜಯ ಕುಮಾರ್ ಗೆಲ್ಲುವ ಮೂಲಕ ಕಾಂಗ್ರೆಸ್ ಭದ್ರಕೋಟೆ ಮುರಿಯಿತು. ಬಳಿಕ 2014ರ ವರೆಗೆ ನಡೆದ ಎಲ್ಲ 7 ಚುನಾವಣೆ ಗಳಲ್ಲಿ ಬಿಜೆಪಿ ಪಾರಮ್ಯ ಮೆರೆದಿದೆ. ಪ್ರಸ್ತುತ ಜಿಲ್ಲೆಯಲ್ಲಿ 8 ವಿಧಾನಸಭಾ ಸದಸ್ಯರ ಪೈಕಿ 7 ಮಂದಿ ಬಿಜೆಪಿಗರು. ಜಿ.ಪಂ. ಆಡಳಿತವೂ ಬಿಜೆಪಿ ಕೈಯಲ್ಲಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಪಕ್ಷದ ಪಾಲಿಗೆ ಅದು ಸಾಧನೆಯೇ ಸರಿ. ಆಗ ಕಾಂಗ್ರೆಸ್‌ನ ಘಟಾನುಘಟಿ ನಾಯಕರಿಂದ ಸಾಧ್ಯ ವಾಗದ್ದನ್ನು ಸಾಧಿಸಿದ ಹೆಗ್ಗಳಿಕೆ ಮಿಥುನ್ ಅವರದಾಗಲಿದೆ.
ನಳಿನ್ ಗೆದ್ದರೆ ಹ್ಯಾಟ್ರಿಕ್ ಸಾಧನೆಯ ಜತೆಗೆ ಬಿಜೆಪಿಯ ಗೆಲುವಿನ ಪರಂಪರೆ ಮುನ್ನಡೆಸಿದ ಕೀರ್ತಿಗೆ ಪಾತ್ರರಾಗುತ್ತಾರೆ. ಕಾಂಗ್ರೆಸ್ ಯಾರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ದರೂ ಸೋಲಿಸಿ ಬಿಜೆಪಿಯ ಭದ್ರ ಕೋಟೆಯನ್ನು ಮತ್ತಷ್ಟು ಬಲಪಡಿಸಿದ ಖ್ಯಾತಿ ಅವರಿಗೆ ಲಭಿಸುತ್ತದೆ.
ಹಿಲರಿ ಕ್ರಾಸ್ತಾ