ಬೆಂಗಳೂರು: ಮಂಗಳೂರು ಲಿಟ್ರೇಚರ್ ಟ್ರಸ್ಟ್ ವತಿಯಿಂದ ನ.3 ಮತ್ತು 4ರಂದು ಮಂಗಳೂರಿನ ಟಿಎಂಎ ಪೈ ಕನ್ವೆನÒನ್ ಸೆಂಟರ್‌ನಲ್ಲಿ “ಮಂಗಳೂರು ಲಿಟ್ ಫೆಸ್ಟ್ ‘ ಸಾಹಿತ್ಯೋತ್ಸವ ನಡೆಯಲಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ಲಿಟ್ ಫೆಸ್ಟ್ ಸಂಯೋಜಕ ವಿವೇಕ್ ಮಲ್ಯ, ಶನಿವಾರ ಬೆಳಗ್ಗೆ “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಪೈ ಹಾಗೂ ನಿಟ್ಟೆ ಎಜುಕೇಷನ್ ಟ್ರಸ್ಟ್‌ನ ಡಾ.ಎನ್.ವಿನಯ್ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಂಜೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಯೋಗಾಸನಗಳ ಪ್ರದರ್ಶನ ಹಾಗೂ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಸಿರಿ ತುಳು ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು. ಮಧ್ಯಾಹ್ನ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.
ಲೇಖಕ ಅನೂಜ್ ಧಾರ್ ರಚಿಸಿರುವ “ಯುವರ್ ಪ್ರೈಮ್‌ಮಿನಿಸ್ಟರ್ ಈಸ್ ಡೆಡ್’ ಹಾಗೂ ಆರ್.ಜಗನ್ನಾಥನ್ ರಚನೆಯ “ಜಾಬ್ಸ್ ಕ್ರೈಸಿಸ್ ಇನ್ ಇಂಡಿಯಾ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಂಜೆ ಪದ್ಮಶ್ರೀ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಚಕ್ರವರ್ತಿ ಸೂಲಿಬೆಲೆ ಹಾಗೂ ಉದ್ಯಮಿ ಎಂ.ವೆಂಕಟೇಶ್ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ವಿವಿಧ ಕವಿಗೋಷ್ಠಿ, ಸಂವಾದ: ಭಾನುವಾರ ಬೆಳಗ್ಗೆ ನಡೆಯುವ ಕವಿಗೋಷ್ಠಿಯಲ್ಲಿ ಬಿ.ಆರ್.ಲಕ್ಷ್ಮಣರಾವ್, ವಸಂತ ಕುಮಾರ್ ಪೆರ್ಲ, ಡಾ.ಧನಂಜಯ ಕುಂಬ್ಳೆ, ನಂದಿನಿ ಹೆದ್ದುರ್ಗ, ಪೂರ್ಣಿಮಾ ಸುರೇಶ್ ಭಾಗವಹಿಸಲಿದ್ದಾರೆ. ಸುಬ್ರಾಯ ಚೊಕ್ಕಾಡಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತೀಯ ಸಿನಿಮಾ ಕುರಿತು ನಡೆಯುವ ಚರ್ಚಾಗೋಷ್ಠಿಯಲ್ಲಿ ರಿಷಬ್ ಶೆಟ್ಟಿ ಮತ್ತು ರೋಹಿತ್ ಫಡೆ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಮಹಿಳೆ ಮತ್ತು ಧರ್ಮ- ತ್ರಿವಳಿ ತಲಾಕ್‌ನಿಂದ ಶಬರಿಮಲೆವರೆಗೂ ವಿಷಯದ ಕುರಿತು ಯೋಗಿನಿ ಶಾಂಭವಿ ಚೋಪ್ರಾ, ಪ್ರೀತಿ ನಾಗರಾಜ್ ಹಾಗೂ ಪದ್ಮಾರಾಣಿ ಅವರೊಂದಿಗೆ ನಟಿ ಮಾಳವಿಕಾ ಅವಿನಾಶ್ ಸಂವಾದ ನಡೆಸಲಿದ್ದಾರೆ. ಬಳಿಕ ನಡೆಯವ ಗೋಷ್ಠಿಯಲ್ಲಿ “ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ’ ವಿಷಯದ ಕುರಿತು ಲೇಖಕ ರೋಹಿತ್ ಚಕ್ರತೀರ್ಥ ಸಂವಾದ ನಡೆಸಲಿದ್ದಾರೆ.
ಸಹಾನಾ ವಿಜಯಕುಮಾರ್ ಹಾಗೂ ಡಾ.ಅಜಕ್ಕಳ ಗಿರೀಶ್ ಭಟ್ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಸ್ಥಳೀಯ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯದ ಕುರಿತ ಗೋಷ್ಠಿಯಲ್ಲಿ ಡಾ.ಪ್ರಭಾಕರ್ ಜೋಶಿ, ಡಾ.ನರೇಂದ್ರ ರೈ ದೇರ್ಲ ಹಾಗೂ ಗುರುದತ್ತ ಅವರು ಭಾಗವಹಿಸಲಿದ್ದಾರೆ. ಚಂದ್ರಶೇಖರ ದಾಮ್ಲೆ ಸಂವಾದ ನಡೆಸಲಿದ್ದಾರೆ ಎಂದು ವಿವೇಕ್ ಮಲ್ಯ ವಿವರಿಸಿದರು.