ಶಿವಮೊಗ್ಗ: ಮಂಗಳೂರು ಕುಕ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಎರಡು ಕಡೆ ತಪಾಸಣೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಗುರುವಾರ ಮೂವರು ಅಧಿಕಾರಿಗಳ ತಂಡವು ಶಿವಮೊಗ್ಗದ ಮಂಜುನಾಥ್ ಬಡಾವಣೆಯ ರಿಯಲ್ ಎಸ್ಟೇಟ್ ಬ್ರೋಕರ್ ಮನೆ ತಪಾಸಣೆ ನಡೆಸಿದೆ. ತಪಾಸಣೆ ವೇಳೆ ಯಾರೂ ಇಲ್ಲದ ಕಾರಣ ಸಿಮ್ ಕಾರ್ಡ್, ಮೊಬೈಲ್, ಆಧಾರ್ ಕಾರ್ಡ್ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಸಲುವಾಗಿ ಪರಿಶೀಲನೆ ನಡೆಸಿರುವುದಾಗಿ ಮಾಹಿತಿ ಸಿಕ್ಕಿದೆ. ನಂತರ ಇದೇ ತಂಡವು ತೀರ್ಥಹಳ್ಳಿಯ ಶಾರೀಕ್ ಚಿಕ್ಕಮ್ಮನ ಮನೆಗೆ ಭೇಟಿ ನೀಡಿ ಎರಡು ಗಂಟೆಗಳ ಕಾಲ ತಪಾಸಣೆ, ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ.
ಮಂಗಳೂರು ಕುಕ್ಕರ್ ಪ್ರಕರಣದಲ್ಲಿ ತೀರ್ಥಹಳ್ಳಿಯ ಶಾರೀಕ್ ಸಿಕ್ಕಿಹಾಕಿಕೊಂಡಿದ್ದ. ಅದಕ್ಕೂ ಮೊದಲು ಮಾಜ್, ಯಾಸಿನ್‌ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಈ ವೇಳೆ ತುಂಗಾ ತೀರದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್, ದೇಶದ ಬಾವುಟ ಸುಟ್ಟ ಪ್ರಕರಣ, ಅದಕ್ಕೆ ಬಳಸಿದ ವಸ್ತುಗಳು ಸಿಕ್ಕಿದ್ದವು.
ಈ ಪ್ರಕರಣದಲ್ಲಿ ಶಾರೀಕ್ ಮೊದಲ ಆರೋಪಿಯಾಗಿದ್ದ. ಶಾರೀಕ್ ತಾನೇ ತೋಡಿದ ಗುಂಡಿಗೆ ಬಿದ್ದ ನಂತರ ತನಿಖೆ ಆಯಾಮ ಬದಲಾಗುತ್ತಿದೆ.