Advertisement

ಮಂಗಳೂರು: ಕೊಂಕಣಿ ಭವನಕ್ಕೆ ಕಾಡುತ್ತಿದೆ ಅನುದಾನ ಕೊರತೆ!

04:27 PM Jul 10, 2024 | Team Udayavani |

ಮಹಾನಗರ: ಕೊಂಕಣಿ ಸಾಹಿತ್ಯ ಅಕಾಡೆಮಿಯ ಕಚೇರಿ ಸಹಿತ ಕಾರ್ಯಚಟುವಟಿಕೆಗಳಿಗಾಗಿ ಅಗತ್ಯ ವಿರುವ “ಕೊಂಕಣಿ ಭವನ’ದ ನಿರ್ಮಾಣದ ಕಾಮಗಾರಿ ಅನುದಾನ ಕೊರತೆಯಿಂದ ಕುಂಟುತ್ತಾ ಸಾಗಿದೆ. ಈಗಾಗಲೇ ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿಗೆ ಅಗತ್ಯ ವಿರುವ ಅನುದಾನ ಹೊಂದಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.

Advertisement

ಉರ್ವಸ್ಟೋರ್‌ ಬಳಿ ಸುಮಾರು 35 ಸೆಂಟ್ಸ್‌ ಜಾಗದಲ್ಲಿ “ಕೊಂಕಣಿ ಭವನ’ ನಿರ್ಮಾಣ ಮಾಡಲಾಗುತ್ತಿದೆ. 2022ರ ಫೆಬ್ರವರಿ ತಿಂಗಳಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಕೊಂಕಣಿ ಭವನ ಎರಡು ಅಂತಸ್ತಿನ ಕಟ್ಟಡವಾಗಿದ್ದು, ತಳ ಅಂತಸ್ತನ್ನು ಪಾರ್ಕಿಂಗ್‌ ಉದ್ದೇಶಕ್ಕೆ ಮೀಸಲಿರಿಸಲಾಗಿದೆ.

ಮೊದಲನೇ, ಎರಡನೇ ಮಹಡಿಯಲ್ಲಿ ಸಭಾಂಗಣಗಳ ಸಹಿತ ಕಚೇರಿ, ಮೀಟಿಂಗ್‌ ಹಾಲ್‌, ಅಧ್ಯಕ್ಷರು, ರಿಜಿಸ್ಟ್ರಾರ್‌ ಕೊಠಡಿ, ಗ್ರಂಥಾಲಯ ಸಹಿತ ವಿವಿಧ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.

ಏನೆಲ್ಲ ಕೆಲಸಗಳು ಬಾಕಿ?
ಮೊದಲನೇ ಹಂತದಲ್ಲಿ ಕಟ್ಟಡದ ಸಂಪೂರ್ಣ ರಚನೆ, ಗೋಡೆಗಳಿಗೆ ಸಾರಣೆ ಕೆಲಸ ಪೂರ್ಣಗೊಂಡಿದೆ. 2ನೇ ಹಂತದಲ್ಲಿ ಎಲೆಕ್ಟ್ರಿಕಲ್‌, ಪ್ಲಂಬಿಂಗ್‌ ಕೆಲಸಗಳು, ನೆಲದ ಟೈಲ್ಸ್‌, ಲಿಫ್ಟ್‌, ಮೆಟ್ಟಿಲುಗಳಿಗೆ ರೇಲಿಂಗ್ಸ್‌, ಕಿಟಕಿ – ಬಾಗಿಲುಗಳು, ಫರ್ನಿಚರ್‌ಗಳು, ಒಳಾಂಗಣ ವಿನ್ಯಾಸಗಳು, ಆವರಣ ಗೋಡೆ, ಪಾರ್ಕಿಂಗ್‌ ಸ್ಥಳದ ಒಂದು ಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗಳು ಬಾಕಿ ಇವೆ.

5 ಕೋ.ರೂ.ನಲ್ಲಿ 3 ಕೋ.ರೂ. ಬಿಡುಗಡೆ
ಭವನ ನಿರ್ಮಾಣಕ್ಕೆ ಕರ್ನಾಟಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಸಂಸ್ಕೃತಿ ಇಲಾಖೆ ಸಚಿವರ ಸೂಚನೆಯಂತೆ 5 ಕೋ.ರೂ. ಮಂಜೂರು ಮಾಡಲಾಗಿತ್ತು. ಆದರೆ ಇದರಲ್ಲಿ 3 ಕೋ.ರೂ. ಮಾತ್ರ ಬಿಡುಗಡೆ ಮಾಡಿರುವ ಪ್ರಾಧಿಕಾರ, ಉಳಿದ 2 ಕೋ.ರೂ.ವನ್ನು ಹಿಂಪಡೆದು ಕೊಂಡಿದೆ. ಇದರಿಂದ ಕಾಮಗಾರಿ ಮುಂದುವರಿಸಲು ಸಾಧ್ಯವಾಗಿಲ್ಲ.

Advertisement

ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರ ಜತೆ ಮಾತುಕತೆ ನಡೆಸಲಾಗಿದೆ. ಮಂಗಳೂರಿಗೆ ಬಂದು ನೋಡುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದಾರೆ. ಈ ಅನುದಾನ ಲಭ್ಯವಾದರೆ ಕಾಮಗಾರಿ ಮುಂದುವರಿಸಲು ನೆರವಾಗುತ್ತದೆ ಎಂದು ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್‌ “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.

2ನೇ ಹಂತದ ಕಾಮಗಾರಿಗಾಗಿ ಅಂದಾಜು 3 ಕೋ.ರೂ. ಆಗತ್ಯವಿದೆ. ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸುವ ಪ್ರಯತ್ನ ಅಕಾಡೆಮಿಯಿಂದ ನಡೆಯುತ್ತಿದೆ. ಈಗಾಲೇ ಅಕಾಡೆಮಿ ಅಧ್ಯಕ್ಷರು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಪ್ರಾಧಿಕಾರದಿಂದ ಬರ ಬೇಕಾಗಿರುವ ಅನುದಾನ ಲಭ್ಯ ವಾದರೆ, ಉಳಿದ 1 ಕೋ.ರೂ. ಸರಕಾರ ದಿಂದ ಅನುದಾನ ಪಡೆಯುವುದು ಕಷ್ಟವಾಗದು ಎನ್ನುತ್ತಾರೆ ಅಕಾಡೆಮಿ ಪ್ರಮುಖರು.

2 ಕೋ.ರೂ. ಅನುದಾನ ಪಡೆಯಲು ಪ್ರಯತ್ನ
ಕೊಂಕಣಿ ಸಾಹಿತ್ಯ ಅಕಾಡೆಮಿಯ “ಕೊಂಕಣಿ ಭವನ’ವನ್ನು ಮೊದಲ ಆದ್ಯತೆಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದೆ. ಗಡಿನಾಡ ಪ್ರಾಧಿಕಾರದಿಂದ ಸಿಗಬೇಕಾದ 2 ಕೋ.ರೂ. ಅನುದಾನವನ್ನು ಪಡೆಯುವ ನಿಟ್ಟಿನಲ್ಲಿಯೂ ಪ್ರಯತ್ನಗಳು ನಡೆದಿವೆ. ಬಾಕಿ ಉಳಿದಿರುವ ಕಾಮಗಾರಿಗಳ ಕುರಿತಂತೆ ಕಾರ್ಯಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಿ ಅಂತಿಮ ಪಡಿಸಲಾಗುವುದು.
ಜೋಕಿಂ ಸ್ಟ್ಯಾನಿ ಅಲ್ವಾರಿಸ್‌, ಅಧ್ಯಕ್ಷರು, ಕೊಂಕಣಿ ಸಾಹಿತ್ಯ ಅಕಾಡೆಮಿ.

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next