Advertisement

ಮಂಗಳೂರು : ಕಾಶ್ಮೀರದ ನಕಲಿ ವೈದ್ಯ,ಸಹಚರ ಸೆರೆ

11:13 AM Aug 26, 2019 | Team Udayavani |

ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ದೇಶಾದ್ಯಂತ ಸಂಚರಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಮತ್ತು ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಆರಂಭಿಸಿ ಹೆಮ್ಮಕ್ಕಳ ಶೋಷಣೆ ಮಾಡುತ್ತಿದ್ದ ಜಮ್ಮು ಕಾಶ್ಮೀರ ಮತ್ತು ಪಂಜಾಬಿನ ಇಬ್ಬರನ್ನು ಮಂಗಳೂರಿನ ಪೊಲೀಸರು ಬಂಧಿಸಿ ವಾಹನ, ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಜಮ್ಮು ಮತ್ತು ಕಾಶ್ಮೀರದ ವಕುರಾ ಜಿಲ್ಲೆಯ ಬಟಿವಿನ ತಾಲೂಕು ಗಂಜೀಪುರ ಗ್ರಾಮದ ಡಾ| ಬಸೀತ್‌ ಷಾ ಯಾನೆ ಸೌಖತ್‌ ಅಹಮ್ಮದ್‌ ಲೋನೆ ಮತ್ತು ಪಂಜಾಬಿನ ಜರತ್‌ಪುರ ಎಸ್‌.ಎ.ಎಸ್‌. ನಗರ ಮೊಹಾಲಿ ಬಾಬತ್‌ನಗರದ ಬಲ್ಜೀಂದರ್‌ ಸಿಂಗ್‌ (48) ಬಂಧಿತರು. ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಪ್ರಕರಣದ ವಿವರ: ಆ. 17ರಂದು ಮಂಗಳೂರಿನ ವಿವಿಧ ಕಡೆಗಳಲ್ಲಿ ವರ್ಲ್ಡ್ ಹೆಲ್ತ್‌ ಆರ್ಗನೈಸೇಶನ್‌ ಎಂಬ ನಾಮಫಲಕ ಅಳವಡಿಸಿದ ಪಂಜಾಬ್‌ (ಪಿಬಿ 65 ಎಎಸ್‌ 6786) ನೋಂದಣಿಯ ಚಾಕಲೆಟ್‌ ಬಣ್ಣದ ಕಾರು ಗವರ್ನ್ಮೆಂಟ್‌ ಆಫ್‌ ಇಂಡಿಯಾ ಎಂದು ಸ್ಟಿಕ್ಕರ್‌ ಅಂಟಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂಬ ಮಾಹಿತಿ ಕಂಟ್ರೋಲ್‌ ರೂಮ್‌ಗೆ ಬಂದಿತ್ತು. ಶಂಕಾಸ್ಪದ ಕಾರು ಕಂಡಲ್ಲಿ ತಡೆಯುವಂತೆ ಎಲ್ಲ ಠಾಣೆಗಳಿಗೆ ಆದೇಶ ಹೊರಡಿಸಲಾಗಿತ್ತು.

ಸಂಚಾರ ಪಶ್ಚಿಮ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಯೋಗರಾಜ್‌ ಸಂಜೆ 5 ಗಂಟೆಗೆ ಪಿವಿಎಸ್‌ ಜಂಕ್ಷನ್‌ ಕಡೆಯಿಂದ ಬಲ್ಲಾಳ್‌ಬಾಗ್‌ ಕಡೆಗೆ ಹೋಗುತ್ತಿದ್ದ ಕಾರನ್ನು ತಡೆದು ವಿಚಾರಿಸಿದಾಗ ಚಾಲಕನು ತನ್ನ ಹೆಸರು ಬಲ್ಜೀಂದರ್‌ ಸಿಂಗ್‌ (48) ಹಾಗೂ ಎಡ ಭಾಗದಲ್ಲಿ ಕುಳಿತಿದ್ದವನ ಹೆಸರು ಡಾ| ಬಸೀತ್‌ ಷಾ, ವಾಸ: ಮನೆ ನಂ 84 ಲೇನ್‌, ಅಂಧೆೇರಿ ಈಸ್ಟ್‌ ಮುಂಬಯಿ ಎಂದು ತಿಳಿಸಿದ್ದನು. ಅವರನ್ನು ಕಾರು ಸಮೇತ ಬರ್ಕೆ ಠಾಣೆಗೊಯ್ಯಲಾಯಿತು.

ಮಹಿಳೆಯರಿಗೆ ವಂಚನೆ
ಡಾ| ಬಸೀತ್‌ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ತೆರೆದು ಅದರಲ್ಲಿ ತನ್ನ ಹೆಸರು ನೋಂದಾಯಿಸಿ ಮದುವೆ ಆಗುವುದಾಗಿ ನಂಬಿಸಿ ಹಲವಾರು ಮಹಿಳೆಯರನ್ನು ಗೋವಾ, ಬೆಳಗಾವಿ, ಮುಂಬಯಿ, ಝಾರ್ಖಂಡ್‌, ಜೈಪುರ, ಕೋಲ್ಕತಾ, ಛತ್ತೀಸ್‌ಗಢ, ಅಮೃತಸರ, ಹೈದರಾಬಾದ್‌ಗಳಲ್ಲಿ ವಂಚಿಸಿರುವುದು ತಿಳಿದು ಬಂದಿದೆ. ಮ್ಯಾಟ್ರಿಮೋನಿಯಲ್‌ ಮೂಲಕ ಮಂಗಳೂರಿನಲ್ಲಿ ಹೆಸರು ನೋಂದಾಯಿಸಿದ್ದ ಮಹಿಳೆಯೊಂದಿಗೆ ಸಂಪರ್ಕಿಸಲು ಬಂದಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಡಾ| ಹರ್ಷ ವಿವರಿಸಿದರು.

Advertisement

ಆರೋಪಿಗಳ ವಿರುದ್ಧ ಬರ್ಕೆ ಠಾಣೆಯಲ್ಲಿ ಅ.ಕ್ರ. 56/2019 ಐಪಿಸಿ ಕಲಂ 170, 171, 419, 420 ಜತೆಗೆ 34 ಹಾಗೂ ಕಲಂ 7 ದಿ ಸ್ಟೇಟ್‌ ಎಂಬ್ಲೆಮ್‌ ಆಫ್‌ ಇಂಡಿಯಾ (ಪ್ರೊಹಿಬಿಷನ್‌ ಆಫ್‌ ಇಂಪ್ರೋಪರ್‌ಯೂಸ್‌) ಆ್ಯಕ್ಟ್ ಪ್ರಕಾರ ಕೇಸು
ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ವಿಶೇಷ ತನಿಖಾ ತಂಡ: ಹೆಚ್ಚಿನ ತನಿಖೆಗೆ ಡಿಸಿಪಿಗಳಾದ ಅರುಣಾಂಶುಗಿರಿ ಮತ್ತು ಲಕ್ಷ್ಮೀ ಗಣೇಶ್‌, ಎಸಿಪಿ ಭಾಸ್ಕರ ಒಕ್ಕಲಿಗ, ಬರ್ಕೆ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಉಮೇಶ್‌ ಉಪ್ಪಳಿಗೆ ಅವರನ್ನೊಳಗೊಂಡ ತಂಡ ರಚಿಸಲಾಗಿದೆ.
ಅರುಣಾಂಶುಗಿರಿ ಮತ್ತು ಲಕ್ಷ್ಮೀ ಗಣೇಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಪಿಯುಸಿ ಕಲಿತವ ವೈದ್ಯ!
ಕಾರನ್ನು ಪರಿಶೀಲಿಸಿದಾಗ ಡಾ| ಬಸೀತ್‌ ಷಾನ ವಶದಲ್ಲಿ ವರ್ಲ್ಡ್
ಹೆಲ್ತ್‌ ಆರ್ಗನೈಜೇಶನ್‌, ಡಾ| ಬಸಿತ್‌ ಶಾಹ, ಎಂಬಿಬಿಎಸ್‌/ ಎಂಎಸ್‌/ ಎಂಸಿಎಚ್‌- ಗೋಲ್ಡ್‌ ಮೆಡಲಿಸ್ಟ್‌, ಡೈರೆಕ್ಟರ್‌ ರಿಜಿ.

ನಂ. ಎಂಸಿಐ /2013/3184 ಎಂಬುದಾಗಿ ಆಂಗ್ಲ ಭಾಷೆಯಲ್ಲಿ ಮುದ್ರಿಸಲ್ಪಟ್ಟ ಐಡಿ ಕಾರ್ಡ್‌ ಮತ್ತು ಇನ್ನಿತರ ದಾಖಲೆ ಪತ್ರಗಳು ದೊರೆತಿದ್ದವು.

ಕೂಲಂಕಷವಾಗಿ ವಿಚಾರಿಸಿದಾಗ
ಆತನ ಕಲಿಕೆ ಕೇವಲ ಪಿಯುಸಿ ಎಂದು ತಿಳಿಯಿತು. ನಕಲಿ ದಾಖಲೆಗಳ
ಮೂಲಕ ತಾನು ವೈದ್ಯ ಹಾಗೂ ವರ್ಲ್ಡ್ ಹೆಲ್ತ್‌ ಆರ್ಗನೈಸೇಶನ್‌ನ ನಿರ್ದೇಶಕ ಎನ್ನುತ್ತ ವಂಚಿಸುತ್ತಿರುವುದೂ ದೃಢವಾಯಿತು. ಮತ್ತಷ್ಟು ಕೂಲಂಕಷವಾಗಿ ವಿಚಾರಿಸಿದಾಗ ಆತ ತನ್ನ ಹೆಸರು ಸೌಖತ್‌ ಅಹಮ್ಮದ್‌ ಲೋನೆ. ತಂದೆ: ಮಹಮ್ಮದ್‌ ರಂಜಾನ್‌ ಲೋನೆ, ವಾಸ: ಗಂಜೀಪುರ ಗ್ರಾಮ, ಬಟಿವಿನ ತಾಲೂಕು, ವಕುರಾ ಜಿಲ್ಲೆ, ಕಾಶ್ಮೀರ ಎಂಬುದಾಗಿ ತಿಳಿಸಿದ್ದಾನೆ.

ಕಾರು ಚಾಲಕ ಬಲ್ಜೀಂದರ್‌ ಸಿಂಗ್‌ನನ್ನು ವಿಚಾರಿಸಿದಾಗ ತಾನು 2 ವರ್ಷಗಳಿಂದ ಡಾ| ಬಸೀತ್‌ನ ಜತೆಯಲ್ಲಿ ಇದ್ದು ತನ್ನ ಕಾರನ್ನು ದೇಶಾದ್ಯಂತ ಸುತ್ತಾಡಲು ನೀಡಿರುವುದಾಗಿಯೂ ಇದಕ್ಕಾಗಿ ತಿಂಗಳಿಗೆ 20,000 ರೂ. ಸಂಬಳ ನೀಡುತ್ತಿದ್ದಾನೆ. ಕಾರಿನ ಖರ್ಚು ವೆಚ್ಚಗಳನ್ನು ಆತನೇ ನೋಡಿಕೊಳ್ಳುತ್ತಿದ್ದು, ಆದೇಶಗಳನ್ನು ನಾನು ಪಾಲಿಸುತ್ತಿದ್ದೇನೆ ಎಂದನು. ಬಸೀತ್‌ ಷಾ ವಿರುದ್ಧ ಈಗಾಗಲೇ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅ.ಕ್ರ.8/2017- ಐಪಿಸಿ ಕಲಂ 420, 406, 419 ಪ್ರಕಾರ ಪ್ರಕರಣ ದಾಖಲಾಗಿದ್ದು, ಅದಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡು ದೇಶಾದ್ಯಂತ ಸುತ್ತಾಡಿ ವಂಚಿಸುತ್ತಿರುವುದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next