Advertisement

ಮಂಗಳೂರು-ಕಾಸರಗೋಡು ಬಸ್‌ ಸಂಚಾರ; ಅಂತಾರಾಜ್ಯ ಪ್ರಯಾಣಿಕರಿಂದ ಉತ್ತಮ ಸ್ಪಂದನೆ

12:57 AM Nov 19, 2020 | mahesh |

ಮಂಗಳೂರು: ಮಂಗಳೂರು- ಕಾಸರಗೋಡು ನಡುವೆ ಸೋಮವಾರ ಪುನರಾರಂಭಗೊಂಡಿರುವ ಉಭಯ ರಾಜ್ಯಗಳ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

Advertisement

ಮಂಗಳೂರಿನಿಂದ ಕಾಸರಗೋಡಿಗೆ ಬೆಳಗ್ಗೆ 6 ಗಂಟೆಗೆ ಆರಂಭಗೊಳ್ಳುವ ಬಸ್‌ (ಕರ್ನಾಟಕ ಕೆಎಸ್ಸಾರ್ಟಿಸಿ) ಸಂಚಾರ ರಾತ್ರಿ 7.30ರ ವರೆಗೆ ಇರುತ್ತದೆ. ಅಂತೆಯೇ ಕಾಸರಗೋಡಿನಿಂದ ಮಂಗಳೂರಿಗೆ ಬೆಳಗ್ಗೆ 6ಕ್ಕೆ ಆರಂಭಗೊಳ್ಳುವ ಬಸ್‌ (ಕೇರಳ ಕೆಎಸ್ಸಾರ್ಟಿಸಿ) ಸಂಚಾರ ರಾತ್ರಿ 7ರ ವರೆಗೆ ಇರುತ್ತದೆ. ಕರ್ನಾಟಕದ 30 ಮತ್ತು ಕೇರಳದ 20 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಮುಂದೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಂಖ್ಯೆ ಹೆಚ್ಚಿಸಲು ನಿಗಮ ನಿರ್ಧರಿಸಿದೆ.

ಕಳೆದ ತಿಂಗಳಿನಿಂದ ಉಭಯ ಜಿಲ್ಲೆಗಳ ಪ್ರಯಾಣಿಕರಿಗೆ ಪ್ರಯೋಜನವಾಗಲೆಂದು ಮಂಗಳೂರಿನಿಂದ ತಲಪಾಡಿ ಗಡಿಯವರೆಗೆ ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಆರಂಭಗೊಂಡಿತ್ತು. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ತಲಪಾಡಿ ಗಡಿ ಪ್ರದೇಶದವರೆಗೆ ಸುಮಾರು 10 ಬಸ್‌ ಸಂಚರಿಸುತ್ತಿದ್ದವು. ಅಲ್ಲಿಂದ ಕೇರಳದ ಬಸ್‌ಗಳ ಮುಖೇನ ಪ್ರಯಾಣಿಕರು ತೆರಳಬೇಕಿತ್ತು.

ಟಿಕೆಟ್‌ ದರ 8 ರೂ. ಹೆಚ್ಚಳದ ಬರೆ
ಮಂಗಳೂರು – ಕಾಸರಗೋಡು ನಡುವೆ ಸೋಮವಾರ ಬಸ್‌ ಸಂಚಾರ ಆರಂಭವಾಗಿದ್ದು, ಟಿಕೆಟ್‌ ದರವನ್ನು 8 ರೂ. ಹೆಚ್ಚಿಸಲಾಗಿದ್ದು, ದರ ಸದ್ಯ 68 ರೂ. ಆಗಿದೆ. ಕೇರಳ ರಾಜ್ಯದಲ್ಲಿ ಟಿಕೆಟ್‌ ದರ ಹೆಚ್ಚಳವೇ ಇದಕ್ಕೆ ಕಾರಣ. ಅಂತಾರಾಜ್ಯ ಒಪ್ಪಂದದಂತೆ ರಾಜ್ಯದ ಬಸ್‌ಗಳು ಕೇರಳದಲ್ಲಿ ಸಂಚರಿಸಿದರೆ ಆ ರಾಜ್ಯದ ಟಿಕೆಟ್‌ ದರ ಅನ್ವಯವಾಗುತ್ತದೆ. ಅದೇ ರೀತಿ ಅಲ್ಲಿನ ಬಸ್‌ಗಳು ಕರ್ನಾಟದಲ್ಲಿ ಸಂಚರಿಸುವಾಗ ಇಲ್ಲಿನ ದರ ಅನ್ವಯವಾಗುತ್ತದೆ.

ಸುಳ್ಯ, ಪುತ್ತೂರಿನಿಂದ ಬಸ್‌
ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದಿಂದ ಪುತ್ತೂರು -ವಿಟ್ಲ -ಕಾಸರಗೋಡು ಹಾಗೂ ಸುಳ್ಯ- ಪಂಜಿಕಲ್ಲು – ಕಾಸರಗೋಡು ಮಾರ್ಗ ದಲ್ಲಿ ಬಸ್‌ ಓಡಾಟ ನ. 19ರಿಂದ ಆರಂಭಗೊಳ್ಳಲಿದೆ.

Advertisement

ಬಿ.ಸಿ.ರೋಡು- ಮುಡಿಪು- ದೇರಳಕಟ್ಟೆ -ತಲಪಾಡಿ -ಕಾಸರ ಗೋಡು ಮಾರ್ಗದಲ್ಲಿ ಓಡಾಟ ಈಗಾಗಲೇ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಸರಗೋಡು -ವಿಟ್ಲ-ಪುತ್ತೂರು -ಬೆಂಗಳೂರು ರಾಜಹಂಸ ಸಾರಿಗೆ, ಮಡಿಕೇರಿ -ಮಲಪ್ಪುರಂ ವೇಗದೂತ ಸಾರಿಗೆ, ಪುತ್ತೂರು- ವಿಟ್ಲ-ಮಂಜೇಶ್ವರ, ಪುತ್ತೂರು- ವಿಟ್ಲ-ಬದಿಯಡ್ಕ-ಮಲ್ಲ, ಪುತ್ತೂರು-ವಿಟ್ಲ- ಕುರ್ಚಿಪಳ್ಳ ಬಸ್‌ ಓಡಾಟ ಪ್ರಾರಂಭಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.

ಇದೇ ವೇಳೆ ಕಾಸರಗೋಡಿನಿಂದ ಪುತ್ತೂರು ಮತ್ತು ಸುಳ್ಯಕ್ಕೆ ಕೇರಳ ಕೆಎಸ್ಸಾರ್ಟಿಸಿಯೂ ಸಂಚಾರ ಆರಂಭಿಸಲಿದೆ.

ಉಭಯ ಜಿಲ್ಲೆಗಳ ನಡುವೆ ಬಸ್‌ ಸಂಚಾರ ಸೋಮವಾರ ಆರಂಭವಾಗಿದ್ದು ಪ್ರಯಾಣಿಕರಿಂದ ಉತ್ತಮ ಬೆಂಬಲ ದೊರೆತಿದೆ. ಕೊರೊನಾ ಕಾರಣ ಎಂಟು ತಿಂಗಳಿನಿಂದ ಉಭಯ ಜಿಲ್ಲೆಗಳ ಜನತೆ ಅನುಭವಿಸಿದ್ದ ಸಮಸ್ಯೆ ಈಗ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡುತ್ತೇವೆ.
– ಎಸ್‌.ಎನ್‌. ಅರುಣ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next