Advertisement

ಮಂಗಳೂರು –ಕಾರ್ಕಳ ಹೆದ್ದಾರಿ ಚತುಷ್ಪಥ: ಪರಿಹಾರ ನೀಡಿಕೆಯಲ್ಲಿ ತಾರತಮ್ಯಕ್ಕೆ ವಿರೋಧ

12:18 AM Aug 23, 2021 | Team Udayavani |

ಕಾರ್ಕಳ: ರಾಷ್ಟ್ರೀಯ ಹೆದ್ದಾರಿಯ 169ರ ಮಂಗಳೂರು – ಮೂಡುಬಿದಿರೆ- ಕಾರ್ಕಳ ನಡುವೆ ಚತುಷ್ಪಥ ಕಾಮಗಾರಿಯನ್ನು ಅಕ್ಟೋಬರ್‌ ವೇಳೆಗೆ ಆರಂಭಿಸಲು ರಾ.ಹೆ. ಪ್ರಾಧಿಕಾರ ಸಿದ್ಧತೆ ನಡೆಸುತ್ತಿದೆ. ಇದೇ ವೇಳೆ ಭೂಮಿ ಕಳೆದುಕೊಂಡ ಸಂತ್ರಸ್ತರಿಂದ ತಮಗೆ ವೈಜ್ಞಾನಿಕ ಪರಿಹಾರ ಲಭಿಸಿಲ್ಲ ಎಂದು ಪ್ರತಿರೋಧ ತೀವ್ರಗೊಳ್ಳುತ್ತಿದೆ.

Advertisement

ಕಾರ್ಕಳದ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್‌ನಿಂದ ಮಂಗಳೂರಿನ ಜಿಲ್ಲೆಯ ಕುಲಶೇಖರದ ವರೆಗೆ 45 ಕಿ.ಮೀ. ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯಲ್ಲಿ 1,500ಕ್ಕಿಂತಲೂ ಹೆಚ್ಚು ಕುಟುಂಬಗಳು ಅನಾದಿಕಾಲದಿಂದ ಬದುಕು ಕಟ್ಟಿಕೊಂಡಿವೆ. ಪುಲ್ಕೇರಿ ಬೈಪಾಸ್‌ನಿಂದ ಮುರತಂಗಡಿ ತನಕ ಸೆಂಟ್ಸ್‌ಗೆ ಕನಿಷ್ಠ  2ಲಕ್ಷದಿಂದ 3 ಲಕ್ಷ ರೂ ಇದೆ. ಕೃಷಿ ಭೂಮಿ ಸೆಂಟ್ಸ್‌ಗೆ ಕೇವಲ 60 ಸಾವಿರ ನಿಗದಿ ಪಡಿಸಿ ಪರಿಹಾರ ನೀಡಲಾಗುತ್ತಿದೆ. ವಾಣಿಜ್ಯ ರಚನೆಗಳಿಗೆ ನೀಡುವ ಮೌಲ್ಯವು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಯಾಗಿದೆ. ಪರಿವರ್ತಿತ ಭೂಮಿಗೆ ಕೃಷಿ ಭೂಮಿಗಿಂತ 10 ಪಟ್ಟು  ಅಧಿಕ ಸಿಗುತ್ತದೆ. ಪರಿವರ್ತಿತ ಭೂಮಿಯ ಕ್ರಯದಷ್ಟೇ ನ್ಯಾಯಯುತ ಪರಿಹಾರವನ್ನು ನಮಗೂ ನೀಡಿ ಎನ್ನುವುದು ಸಂತ್ರಸ್ತರ ಬೇಡಿಕೆ.

ತಾತ್ಕಾಲಿಕ ತಡೆಯಾಜ್ಞೆ :

ನೊಂದ ಕೆಲವು ಕೃಷಿಕರು ಪರಿಹಾರ ಮೊತ್ತದ ತಾರತಮ್ಯವನ್ನು ವಿರೋಧಿಸಿ ಕೋರ್ಟ್‌ ಮೆಟ್ಟಿಲೇರಿದ್ದು, ತಾತ್ಕಾಲಿಕ ತಡೆ ಯಾಜ್ಞೆಯೂ ಸಿಕ್ಕಿದೆ. ಪರಿಹಾರ ವಿತರಣೆ ಗೆಂದು ಕೇಂದ್ರ ಸರಕಾರ 1,300 ಕೋ.ರೂ. ಮೀಸಲಿರಿಸಿದೆ. ರಾ.ಹೆ. ಪ್ರಾಧಿಕಾರ ನಿಗದಿಪಡಿಸಿರುವ ಮೌಲ್ಯ 700ರಿಂದ 800 ಕೋ.ರೂ. ಮಾತ್ರ. ಕೇವಲ 5ರಿಂದ 10 ಸೆಂಟ್ಸ್‌ ಜಾಗ ಹೊಂದಿರುವ 500ಕ್ಕೂ ಹೆಚ್ಚಿನ ಸಂತ್ರಸ್ತರು ಈ ಅಲ್ಪ ಮೊತ್ತದ ಪರಿಹಾರದಿಂದ ಏನು ಮಾಡುವುದು ಎಂದು ಪ್ರಶ್ನಿಸುತ್ತಿದ್ದಾರೆ.

45 ಕಿ.ಮೀ. ರಸ್ತೆ ಅಭಿವೃದ್ಧಿ :

Advertisement

45 ಕಿ.ಮೀ. ರಸ್ತೆಯನ್ನು 1.150 ಕೋ.ರೂ. ವೆಚ್ಚದಲ್ಲಿ ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಭೋಪಾಲ್‌ನ ದಿಲೀಪ್‌ ಬಿಲ್ಡ್‌ ಕಾನ್‌ ಲಿ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. 2 ಬೃಹತ್‌ ಮೇಲ್ಸೇತುವೆಗಳು, 10 ಕೆಳಸೇತುವೆ ನಿರ್ಮಾಣವಾಗಲಿವೆ.

ಮಾರ್ಗಸೂಚಿ ಉಲ್ಲಂಘನೆ :

2016ರಲ್ಲಿ 3ಎ ಮೊದಲ ಅಧಿಸೂಚನೆ ಹೊರಡಿಸಲಾಗಿತ್ತು. ಅನಂತರದಲ್ಲಿ  ಪಂಕ್ತೀಕರಣದಲ್ಲಿ ಅನಿರೀಕ್ಷಿತ ಬದಲಾವಣೆಗಳಾದವು. ಈಗ ಯೋಜನೆ ವೇಗ ಪಡೆದುಕೊಂಡಿದೆ. ಈ ನಡುವೆ ಕೃಷಿಕರು ಭೂಮಿ ಅಭಿವೃದ್ಧಿ ಪಡಿಸಲು ಹೊರಟಾಗ ರಾ.ಹೆ.  ಪ್ರಾಧಿಕಾರ ಅನುಮತಿ ನಿರಾಕರಿಸಿತ್ತು. ಈ ವೇಳೆಗಾಗಲೇ  ಕೆಲವು ರೈತರು ಭೂ ಪರಿವರ್ತನೆ ಮಾಡಿಸಿಕೊಂಡಿದ್ದರು. ಅವರಿಗೆಲ್ಲ ಹೆಚ್ಚು ಹಣ ಮಂಜೂರಾಗಿ ಅನುಕೂಲವಾಗುತ್ತದೆ. ಕೃಷಿ ತೋಟವಿರುವ ಸಂತ್ರಸ್ತರು ಭೂ ಪರಿವರ್ತನೆ ಮಾಡಿಕೊಂಡಿಲ್ಲ. ಇದರಿಂದ ಅವರಿಗೆ ಅನ್ಯಾಯವಾಗಿದೆ. ಹೆದ್ದಾರಿ ಪ್ರಾಧಿಕಾರವು ಮಾರ್ಗಸೂಚಿ ಪ್ರಕಾರವೂ ಈಗ ನಡೆದುಕೊಳ್ಳುತ್ತಿಲ್ಲ.

ಹೆದ್ದಾರಿ ಬದಿಯ ಭೂಮಿದಾರರಲ್ಲಿ ತಪ್ಪು ಕಲ್ಪನೆಯಿದೆ. ನೋಟಿಸ್‌ ಪಡೆದು ಒಂದು ಬಾರಿ ಹಣ ತೆಗೆದುಕೊಂಡರೆ ಮತ್ತೆ ಪರಿಹಾರ ಸಿಗದು ಎಂದು ತಿಳಿದುಕೊಂಡಿದ್ದಾರೆ. ಮತ್ತೆಯೂ ಕೋರ್ಟ್‌, ಡಿಸಿ ಮುಂದೆ ಅರ್ಜಿ ಹಾಕಿ ಮರು ಪರಿಶೀಲಿಸಿದ ಬಳಿಕ ಪರಿಹಾರ ಪಡೆಯಲು ಅವಕಾಶವಿದೆ. – ಮದನಮೋಹನ್‌, ವಿಶೇಷ ಭೂಸ್ವಾಧೀನಾಧಿಕಾರಿ  ರಾಷ್ಟ್ರೀಯ ಹೆದ್ದಾರಿ ಮಂಗಳೂರು

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next