Advertisement
ತಲಪಾಡಿ ದೊಡ್ಡಮನೆ ಕ್ಯಾ| ಬೃಜೇಶ್ ಚೌಟ ಅವರ ಸಾರಥ್ಯದಲ್ಲಿ ಗೌರವಾಧ್ಯಕ್ಷ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಅವರ ಗೋಲ್ಡ್‌ಫಿಂಚ್ ಸಿಟಿಯಲ್ಲಿ ರವಿವಾರ ಬೆಳಗ್ಗೆ 9.30 ಗಂಟೆಗೆ ಕಂಬಳೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
Related Articles
ಅವಿಭಜಿತ ದಕ್ಷಿಣ ಕನ್ನಡ ಸಹಿತ ವಿವಿಧೆಡೆಗಳಿಂದ ನೇಗಿಲು ಹಿರಿಯ ಮತ್ತು ಕಿರಿಯ, ಹಗ್ಗ ಹಿರಿಯ ಮತ್ತು ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ಸೇರಿ ವಿವಿಧ ವಿಭಾಗಗಳಲ್ಲಿ 100ಕ್ಕೂ ಅಧಿಕ ಕಂಬಳ ಕೋಣಗಳ ಜೋಡಿಗಳು ಭಾಗವಹಿಸಿದ್ದವು.
Advertisement
ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿ ಕೊಂಡಿರುವ ಬಂಗ್ರಕುಳೂರಿನ ಗೋಲ್ಡ್‌ಪಿಂಚ್ ಸಿಟಿಯ ಅತ್ಯಂತ ವಿಶಾಲ ಪ್ರದೇಶದಲ್ಲಿ ರಾಮ -ಲಕ್ಷ್ಮಣ ಹೆಸರಿನಲ್ಲಿ ಜೋಡುಕರೆಯನ್ನು ಸುವ್ಯವಸ್ಥಿತವಾಗಿ ಮತ್ತು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ| ಬೃಜೇಶ್ ಚೌಟ ಅವರು ಕೋಣಗಳ ಯಜಮಾನರುಗಳನ್ನು ವಿದ್ಯುಕ್ತವಾಗಿ ಸ್ವಾಗತಿಸಿದರು.
ಮೇಯರ್ ಭಾಸ್ಕರ್, ಕುಳೂರು ಬೀಡಿನ ವಜ್ರ ಕರ್ಣಂತಾಯ ಬಳ್ಳಾಲ್, ಬಾರ್ಕೂರು ಕಚ್ಚಾರು ಮಾಲ್ತಿದೇವಿ ದೇವಸ್ಥಾನದ ಉಪಾಧ್ಯಕ್ಷ ಶಿವಪ್ಪ ನಂತೂರು, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ , ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಗುಣಪಾಲ ಕಡಂಬ ಅತಿಥಿಯಾಗಿದ್ದರು. ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಸಂಜಯ ಪ್ರಭು, ಕಂಬಳ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಆಕರ್ಷಕ ಬಹುಮಾನ ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಪ್ರಥಮ ಎರಡು ಪವನು, ದ್ವಿತೀಯ ಒಂದು ಪವನು, ಹಗ್ಗ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಎರಡು ಪವನು, ದ್ವಿತೀಯ ಒಂದು ಪವನು, ಅಡ್ಡ ಹಲಗೆ ಹಗ್ಗ, ನೇಗಿಲು, ಕಿರಿಯ ವಿಭಾಗದಲ್ಲಿ ಪ್ರಥಮ ಒಂದು ಪವನು, ದ್ವಿತೀಯ ಅರ್ಧ ಪವನು ಚಿನ್ನ ಬಹುಮಾನ ನೀಡಲಾಗುತ್ತಿದೆ. ನಿಖರ ಫಲಿತಾಂಶ ಪಡೆಯಲು ಲೇಸರ್ ಬೀಂ ನೆಟ್ ವರ್ಕ್ ಸಿಸ್ಟಂ, ವೀಡಿಯೋ ದಾಖಲೀಕಣ, ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು. ಗತ್ತು…ಗಮ್ಮತು
ಸಿಂಗಾರಗೊಂಡ ಕೋಣಗಳ ಗತ್ತು, ಒಮ್ಮೊಮ್ಮೆ ತುಂಟಾಟಕ್ಕೆ ಪ್ರಯತ್ನ, ಗದರಿಸಿ ನಿಯಂತ್ರಿಸುವ ಕೋಣಗಳ ಪರಿಚಾರಕರು, ಕಹಳೆಯ ನಿನಾದ, ಕರೆಯಲ್ಲಿ ಧಾವಿಸಿ ಬರುವ ಕೋಣಗಳನ್ನು ಗಂತಿನಲ್ಲಿ ಹೆಸರೆತ್ತಿ ಹುರಿದುಂಬಿಸಿ ಕರೆಯುವ ಕೋಣಗಳ ಮೇಲ್ವಿಚಾರಕರು… ಹೀಗೆ ಅಲ್ಲಿ ನೋಡುಗರ ಪಾಲಿಗೆ ಅಲ್ಲಿ ಒಂದು ಗಮ್ಮತ್ತಿನ ವಾತಾವರಣ ಸೃಷ್ಟಿಯಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ನಗರ ನಿವಾಸಿಗಳು ಭೇಟಿ ನೀಡಿ ಕಂಬಳವನ್ನು ವೀಕ್ಷಿಸಿ ಆನಂದಿಸಿದರು. ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.