Advertisement

ಮಂಗಳೂರು ಜಂಕ್ಷನ್‌- ವಿಜಯಪುರ ರೈಲು ಕಾಯಂಗೆ ರೈಲ್ವೆ ಮಂಡಳಿ ಮೀನಮೇಷ

10:46 AM Oct 25, 2022 | Team Udayavani |

ಮಂಗಳೂರು: ಉತ್ತರ ಕರ್ನಾಟಕಕ್ಕೆ ಮಂಗಳೂರಿನಿಂದ ನೇರ ಸಂಪರ್ಕದ ಏಕೈಕ ರೈಲು ಮಂಗಳೂರು ಜಂಕ್ಷನ್‌-ವಿಜಯಪುರ ರೈಲು ಇನ್ನೂ ಕೂಡ ವಿಶೇಷ ರೈಲು ನೆಲೆಯಲ್ಲೇ ಸಂಚರಿಸುತ್ತಿದ್ದು ಇದನ್ನು ಕಾಯಂಗೊಳಿಸಲು ರೈಲ್ವೆ ಮಂಡಳಿ ಮೀನಾಮೇಷ ಎಣಿಸುತ್ತಿದೆ.

Advertisement

ಕೊರೊನಾ ಸೋಂಕು ಇಳಿಕೆಯಾದ ಬಳಿಕ 2021ರ ಡಿ. 1ರಿಂದ ಮರು ಆರಂಭಗೊಂಡಿದ್ದ ಈ ವಿಶೇಷ ರೈಲು ಅನ್ನು ರೈಲ್ವೆ ಮಂಡಳಿ 3 ತಿಂಗಳ ಕಾಲಮಿತಿ ಇರಿಸಿಕೊಂಡು ವಿಶೇಷ ನೆಲೆಯಲ್ಲಿ ಕಳೆದ 11 ತಿಂಗಳಿನಿಂದ ಓಡಿಸುತ್ತಿದೆ. ಈ ರೈಲು ಸಂಚಾರವನ್ನು ಕಾಯಂಗೊಳಿಸಬೇಕು ಎಂಬುದಾಗಿ ಕರಾವಳಿ ಹಾಗೂ ಉತ್ತರ ಕರ್ನಾಟಕದ ಭಾಗದಿಂದ ನಿರಂತರ ಆಗ್ರಹ ವ್ಯಕ್ತವಾಗುತ್ತಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ನೈಋತ್ಯ ರೈಲ್ವೆ ಮಹಾಪ್ರಬಂಧಕರಿಗೆ ಪತ್ರ ಬರೆದು ರೈಲನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಶೇಷ ಸ್ವರೂಪದಿಂದ ಹಿನ್ನಡೆ: ವಿಜಯಪುರ ರೈಲನ್ನು ವಿಶೇಷ ನೆಲೆಯಲ್ಲಿ ಓಡಿಸುತ್ತಿರುವುದರಿಂದ ಸಾಮಾನ್ಯ ರೈಲಿಗಿಂತ ಶೇ. 30 ಹೆಚ್ಚುವರಿ ಪ್ರಯಾಣ ದರ ವಿಧಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ದುಬಾರಿಯಾಗುತ್ತಿದೆ. ಜತೆಗೆ ಈ ರೈಲು ಮುಂದುವರಿಯುವ ಬಗ್ಗೆ ಅನಿಶ್ಚಿತತೆ, ಆತಂಕ ಸದಾ ಇರುತ್ತದೆ. ಈ ರೈಲು ಸಂಚಾರದ ವೇಳಾಪಟ್ಟಿ ಕೂಡ ಪ್ರಯಾಣಿಕರ ಸ್ನೇಹಿ ಆಗಿಲ್ಲವೆಂಬ ಆಕ್ಷೇಪಗಳು ವ್ಯಕ್ತವಾಗಿದೆ. ಪ್ರಸ್ತುತ ಈ ರೈಲು ಮಧ್ಯಾಹ್ನ 12.40ಕ್ಕೆ ಮಂಗಳೂರಿಗೆ ಆಗಮಿಸಿ 2.50ಕ್ಕೆ ನಿರ್ಗಮಿಸುತ್ತದೆ.

ಇದರ ಬದಲು ರೈಲು ಬೆಳಗ್ಗೆ 10ರೊಳಗೆ ಮಂಗಳೂರಿಗೆ ತಲುಪುವಂತೆ ಹಾಗೂ ಸಂಜೆ 5ರ ಬಳಿಕ ನಿರ್ಗಮಿಸುವಂತೆ ಇದರ ವೇಳಾಪಟ್ಟಿಯನ್ನು ಹೊಂದಾಣಿಕೆ ಮಾಡಬೇಕು ಎಂಬುದಾಗಿ ಮನವಿ ಸಲ್ಲಿಸಲಾಗಿದೆ.

ಉತ್ತರ ಕರ್ನಾಟಕಕ್ಕೆ ಏಕೈಕ ರೈಲು: ರೈಲ್ವೆ ಸಹಾಯಕ ಸಚಿವ ಸುರೇಶ್‌ ಅಂಗಡಿಯವರ ಪ್ರಯತ್ನದಿಂದ ಮಂಗಳೂರು- ವಿಜಯಪುರ ರೈಲು 2019ರ ನವೆಂಬರ್‌ನಲ್ಲಿ ಆರಂಭಗೊಂಡಿತ್ತು. ಆದರೆ ಕೊರೊನಾದಿಂದಾಗಿ 2020ರ ಮಾ. 23ರಿಂದ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮರುಆರಂಭಕ್ಕೆ ಬಹಳಷ್ಟು ಒತ್ತಾಯದ ಬಳಿಕ 2021ರ ಡಿ. 1ರಿಂದ ವಿಶೇಷ ರೈಲು ನೆಲೆಯಲ್ಲಿ ಸಂಚಾರವನ್ನು ಮರು ಆರಂಭಿಸಿತ್ತು.

Advertisement

ರೈಲ್‌ನ ಉಪಯುಕ್ತತೆ: ಈ ರೈಲು ಮಂಗಳೂರು ಭಾಗದಿಂದ ಉತ್ತರ ಕರ್ನಾಟಕಕ್ಕೆ ನೇರ ಸಂಪರ್ಕದ ಏಕೈಕ ರೈಲು ಆಗಿದೆ. ಬಾಗಲಕೋಟೆ-ಗದಗ-ಹಾವೇ ರಿ-ಬ್ಯಾಡಗಿ-ಹರಿಹರ- ದಾವಣಗೆರೆ, ಹಾಸನ, ಸಕಲೇಶಪುರ ಮುಂತಾದ ಪ್ರಮುಖ ನಗರಗಳ ಮೂಲಕ ಇದು ಹಾದು ಹೋಗುತ್ತಿದೆ. ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಶಿಕ್ಷಣ, ವಾಣಿಜ್ಯ ವ್ಯವಹಾರ, ಉದ್ಯೋಗ, ಯಾತ್ರೆ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ವಿವಿಧ ಆವಶ್ಯಕತೆಗಳ ನಿಮಿತ್ತ ಗಣನೀಯ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಮುಖ್ಯವಾಗಿ ಕರಾವಳಿ ಭಾಗದಲ್ಲಿ ನಿರ್ಮಾಣ ಕಾಮಗಾರಿಗಳಲ್ಲಿ ಈ ಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ವಿಶೇಷ ರೈಲುಗಳನ್ನು ಕಾಯಂಗೊಳಿಸಲು ರೈಲ್ವೆ ಮಂಡಳಿಯಲ್ಲಿ ಮಾರ್ಗಸೂಚಿಗಳಿದ್ದು ಪ್ರಯಾಣಿಕರ ದಟ್ಟನೆ ಕೂಡ ಇದರಲ್ಲಿ ಸೇರಿದೆ. ಪ್ರಸ್ತುತ ಈ ವಿಶೇಷ ರೈಲು ಅನ್ನು ಖಾಯಂಗೊಳಿಸುವ ಪ್ರಸ್ತಾವನೆ ರೈಲ್ವೆ ಮಂಡಳಿಗೆ ಹೋಗಿದೆ. ರೈಲ್ವೆ ಮಂಡಳಿ ನಿರ್ಧಾರ ಕೈಗೊಳ್ಳಬೇಕಾಗಿದೆ.
●ಅನೀಸ್‌ ಹೆಗಡೆ, ಮುಖ್ಯ ಸಾರ್ವಜನಿಕ
ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ

Advertisement

Udayavani is now on Telegram. Click here to join our channel and stay updated with the latest news.

Next