Advertisement

ಮಂಗಳೂರು ಜೈಲ್; ಕೈದಿಗೆ ಗಾಂಜಾ ಪೂರೈಕೆ: ಸಿಕ್ಕಿಬಿದ್ದ ವಿದ್ಯಾರ್ಥಿನಿ

09:23 AM Oct 13, 2018 | Team Udayavani |

ಮಂಗಳೂರು: ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡಲು ಹೋಗಿ ಪೊಲೀಸರಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿರುವ ಆತಂಕಕಾರಿ ಘಟನೆ ಗುರುವಾರ ಸಂಜೆ ಮಂಗಳೂರಿನಲ್ಲಿ
ನಡೆದಿದೆ. ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ, ಸುಳ್ಯದ ನಿವಾಸಿ ಬಂಧಿತ ಆರೋಪಿ. ಆಕೆಯ ಬಳಿಯಿಂದ 20 ಗ್ರಾಂ ಗಾಂಜಾ ಮತ್ತು ಒಂದು ಮೊಬೈಲ್‌ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತರ, ಆರೋಪಿಯನ್ನು ಗುರುವಾರ ರಾತ್ರಿಯೇ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಇದೀಗ ಆಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ. ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ವಾಮಂಜೂರಿನ ಮುಸ್ತಫಾ (24)ನಿಗೆ ಈಕೆ ಗಾಂಜಾ ಪೂರೈಕೆ ಮಾಡುತ್ತಿದ್ದಳು ಎಂದು ಪೊಲೀಸರ ವಿಚಾರಣೆಯಿಂದ ಬೆಳಕಿಗೆ
ಬಂದಿದೆ. 

Advertisement

ಪ್ರೇಮಕ್ಕೆ ತಿರುಗಿತ್ತು ಭೇಟಿ: ಈ ವಿದ್ಯಾರ್ಥಿನಿ ಮಂಗಳೂರಿನ ವಾಮಂಜೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ಕೊಣಾಜೆಯ ಕಾಲೇಜಿಗೆ ಹೋಗುತ್ತಿದ್ದಳು. ಇದೇ ವೇಳೆ, ನಗರದ ಸಂಸ್ಥೆಯೊಂದಕ್ಕೆ ತರಬೇತಿಗೆ ಹೋಗುತ್ತಿದ್ದಾಗ ನೆರೆ ಮನೆಯ ಮುಸ್ತಫಾ ಎಂಬಾತನ ಪರಿಚಯವಾಗಿದ್ದು, ಅದು ಪ್ರೀತಿಗೆ ತಿರುಗಿತ್ತು. ಆದರೆ, 2016ರಲ್ಲಿ ವಾಮಂಜೂರಿನಲ್ಲಿ ನಡೆದ ಚರಣ್‌ ಕೊಲೆ ಪ್ರಕರಣದ ಐವರು ಆರೋಪಿಗಳಲ್ಲಿ ಮುಸ್ತಫಾ ಒಬ್ಬನಾಗಿದ್ದು, ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ. ವರ್ಷದ ಹಿಂದೆ ಆತ ಬಿಡುಗಡೆಯಾಗಿ ಹೊರಗೆ ಬಂದಿದ್ದು, ಬಳಿಕ ಎರಡು ತಿಂಗಳ
ಹಿಂದೆ ಖಾಲಿದ್‌ ಎಂಬಾತನ ಕೊಲೆ ಯತ್ನ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಆತ ಮತ್ತೆ ಜೈಲು ಸೇರಿದ್ದ. ಜೈಲಿನೊಳಗಿದ್ದರೂ ಮುಸ್ತಪಾ ಮತ್ತು ಆಕೆಯ ಮಧ್ಯೆ ಮೊಬೈಲ್‌ ಮೂಲಕ ಮಾತುಕತೆ ಮುಂದುವರಿದಿತ್ತು. ಸಂದರ್ಶಕರ ಕೊಠಡಿಯಲ್ಲಿ ಆತನನ್ನು ಭೇಟಿ ಮಾಡುತ್ತಿದ್ದಳು.  ಈ ವೇಳೆ, ತನ್ನ ಪರಿಚಿತರೊಬ್ಬರು ಗಾಂಜಾ ಪೂರೈಕೆ ಮಾಡುತ್ತಿದ್ದು, ಆತನಿಂದ ಅದನ್ನು ಪಡೆದು ತನಗೆ ತಂದೊಪ್ಪಿಸುವಂತೆ ಮುಸ್ತಾಫಾ ಆಕೆಗೆ ದುಂಬಾಲು ಬಿದ್ದಿದ್ದ. ಅದರಂತೆ ಗುರುವಾರ ಸಂಜೆ ಯುವಕನೊಬ್ಬ ಬೈಕ್‌ನಲ್ಲಿ ಬಂದು ಗಾಂಜಾ ಪ್ಯಾಕೆಟ್‌ನ್ನು ವಿದ್ಯಾರ್ಥಿನಿಗೆ ಜೈಲಿನ ಆವರಣದಲ್ಲಿ ನೀಡಿದ್ದ. ವಿದ್ಯಾರ್ಥಿನಿ ಅದನ್ನು ಜೈಲಿನ ಒಳಗಿರುವ ಸಂದರ್ಶಕರ ಕೊಠಡಿಗೆ ಕೊಂಡೊಯ್ಯುವ ಸಂದರ್ಭದಲ್ಲಿ ಮಾಹಿತಿ ಪಡೆದ ಸಿಸಿಬಿ ಮತ್ತು ಬರ್ಕೆ ಠಾಣೆಯ
ಪೊಲೀಸರು ಆಕೆಯನ್ನು ಬಂಧಿಸಿದರು.

ವಿ.ವಿ.ಐ.ಡಿ. ಕಾರ್ಡ್‌ ದುರುಪಯೋಗ: ವಿದ್ಯಾರ್ಥಿನಿ ತನಗೆ ವಿಶ್ವವಿದ್ಯಾನಿಲಯದಿಂದ ನೀಡಲಾಗಿರುವ ಐ.ಡಿ ಕಾರ್ಡ್‌ (ಗುರುತು ಚೀಟಿ) ತೋರಿಸಿ ಜೈಲಿನ ಒಳಗೆ ಪ್ರವೇಶಿಸುತ್ತಿದ್ದಳು ಎನ್ನಲಾಗಿದೆ. ಗಾಂಜಾ ಪೂರೈಕೆ ಮಾಡಿದ್ದ ಯುವಕನ ಬಳಿ ಯಾವುದೇ ಅಧಿಕೃತ ಐ.ಡಿ.ಕಾರ್ಡ್‌ ಇಲ್ಲದ ಕಾರಣ ಆತ ನೇರವಾಗಿ ಜೈಲಿನ ಒಳಗಿನ ಸಂದರ್ಶಕರ ಕೊಠಡಿಗೆ ತೆರಳಿ ಗಾಂಜಾವನ್ನು ಮುಸ್ತಾಫನಿಗೆ ನೀಡಲು ಸಾಧ್ಯವಿರಲಿಲ್ಲ. ಹಾಗಾಗಿ, ಮುಸ್ತಾಪನೇ ಈ ಯುವಕನಿಗೆ ಗಾಂಜಾವನ್ನು ವಿದ್ಯಾರ್ಥಿನಿಯ ಮೂಲಕ ಕಳುಹಿಸಿ ಕೊಡುವಂತೆ ಸೂಚಿಸಿದ್ದನು ಎಂದು ಮೂಲಗಳು ತಿಳಿಸಿವೆ.

ಚನ್ನಗಿರಿಯಲ್ಲಿ ನಾಲ್ವರು ಗಾಂಜಾ ಮಾರಾಟಗಾರರ ಸೆರೆ
ದಾವಣಗೆರೆ: ಸೀಮಾಂಧ್ರದಿಂದ ಗಾಂಜಾ ತಂದು ದಾವಣಗೆರೆ, ಶಿವಮೊಗ್ಗ, ಹೊಳಲ್ಕೆರೆ, ಚನ್ನಗಿರಿ ಇತರೆಡೆ ಮಾರಾಟ ಮಾಡುತ್ತಿದ್ದ ಆರೋಪದಡಿ ಒಬ್ಬ ವಿದ್ಯಾರ್ಥಿ ಸೇರಿ ನಾಲ್ವರನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು, ಆರೋಪಿಗಳಿಂದ 7.15 ಲಕ್ಷ ರೂ. ಮೌಲ್ಯದ 28 ಕೆಜಿ 600 ಗ್ರಾಂನಷ್ಟು ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಸೀಮಾಂಧ್ರದ ಕಡಪ ಜಿಲ್ಲೆ ಜಮ್ಮಲಮಡುಗು ತಾಲೂಕು ಮುದ್ದನೂರು ಗ್ರಾಮದ ಸುಧಾಕರ್‌ ಅಲಿಯಾಸ್‌ ಲೋಮಡ ಸುಧಾಕರ್‌(24), ಬಿಎಸ್ಸಿ ವಿದ್ಯಾರ್ಥಿ ರಾಜೇಶ್‌ ಅಲಿಯಾಸ್‌ ಮಂಗಲ್‌ ರಾಜೇಶ್‌ (20), ಮುನ್ನಯ್ಯ ಅಲಿಯಾಸ್‌ ಮಂಗಲ್‌
ಮುನ್ನಯ್ಯ(26), ಬಾಬಾ ಅಲಿಯಾಸ್‌ ಶೇಖ್‌ ಬಾಬಾ ಫಕೃದ್ದೀನ್‌(26) ಬಂಧಿತರು. ಪರಾರಿಯಾಗಿರುವ ಇನ್ನೊಬ್ಬ ಆರೋಪಿ ತರಪನಾಥ್‌ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next