ಮಂಗಳೂರು : ಪಿಲಿಕುಳದ ಮೊದಲ ಅಂತಾರಾಷ್ಟ್ರೀಯ ಫುಲ್ ಡೋಮ್ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನ ನ. 6ರಿಂದ 8ರ ತನಕ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 6ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಇಸ್ರೋ ಬೆಂಗಳೂರಿನ ಮಾಜಿ ಅಧ್ಯಕ್ಷ ಎ. ಎಸ್. ಕಿರಣ್‌ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು ಎಂದರು.
ತಾಂತ್ರಿಕ ಅಧಿವೇಶನಗಳಲ್ಲಿ ದೇಶ-ವಿದೇಶಗಳ ತಜ್ಞರು ಭಾಗವಹಿಸಲಿದ್ದಾರೆ. ಫುಲ್ ಡೋಮ್ ಚಿತ್ರೋತ್ಸವದಲ್ಲಿ 3ಡಿ ಮತ್ತು 2ಡಿ ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. 2ಡಿ ಚಿತ್ರೋತ್ಸವ ಈ ಹಿಂದೆ ಸೂರತ್‌ನಲ್ಲಿ ನಡೆದಿದ್ದರೂ, 3ಡಿ ಮತ್ತು 2ಡಿ ಒಟ್ಟಿಗೇ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು. ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆಯಾಗಿ ಎರಡು ಸಂಚಾರಿ ತಾರಾಲಯಗಳನ್ನು ಖಗೋಳಶಾಸ್ತ್ರ ಸಂಬಂಧ ಕಾರ್ಯಕ್ರಮ ಹಾಗೂ ಚಿತ್ರ ಪ್ರದರ್ಶನಗಳನ್ನು ವೀಕ್ಷಿಸಲು ಸಿದ್ಧಪಡಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದ ಸಂಸ್ಥೆಗಳಿಂದ ಶೈಕ್ಷಣಿಕ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂನ ಸಹಕಾರದಿಂದ ಬಾಹ್ಯಾಕಾಶ ವಿಜ್ಞಾನ ಮ್ಯೂಸಿಯೋ ಬಸ್ ಇರಲಿದೆ. ರಾಜ್ಯದ ಅಧ್ಯಾಪಕರಿಗೆ ಕಂಕಣ ಸೂರ್ಯಗ್ರಹಣ ಬಗ್ಗೆ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಏರ್ಪಡಿಸಿದೆ. 7ರಂದು ಜಿಲ್ಲೆಯ ಸರಕಾರಿ ಶಾಲೆಗಳ ಆಯ್ದ ಮಕ್ಕಳಿಗೆ ಚಿತ್ರೋತ್ಸವ ಏರ್ಪಡಿಸಿದ್ದು, ಸಾರ್ವಜನಿಕರಿಗೆ ನ. 9 ಮತ್ತು 10ರಂದು ಪ್ರದರ್ಶನ ಮುಂದುವರಿಯಲಿದೆ. ಬುಕ್ ಮೈ ಶೋನಲ್ಲಿ ಕಾಯ್ದಿರಿಸಲು ಅವಕಾಶವಿದೆ ಎಂದು ಸಿಂಧೂ ಬಿ. ರೂಪೇಶ್ ವಿವರಿಸಿದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಮತ್ತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಸಹಯೋಗದೊಂದಿಗೆ ಇನೋವಿಷನ್ ಟೆಕ್ನಾಲಜೀಸ್ ಮುಂಬಯಿ ಮತ್ತು ಇವಾನ್ಸ್ ಹಾಗೂ ಸದರ್‌ಲ್ಯಾಂಡ್ ಯುಎಸ್‌ಎ ಸಹಯೋಗದಲ್ಲಿ ಕಾರ್ಯಕ್ರಮ ಜರಗಲಿದೆ ಎಂದರು