Advertisement

ಮಂಗಳೂರು: ಮತದಾನದ ಮಹತ್ವ ತಿಳಿಸಲು ಬರುತ್ತಾರೆ ಜಿಲ್ಲೆಯ ಐಕಾನ್‌ಗಳು!

05:41 PM Apr 03, 2023 | Team Udayavani |

ಮಂಗಳೂರು: ಬುದ್ಧಿವಂತರ ಜಿಲ್ಲೆ, ಶಿಕ್ಷಣ ಕಾಶಿ ಎಂದೇ ಕರೆಯಲ್ಪಡುವ ದ.ಕ. ಜಿಲ್ಲೆಯ ಮಂಗಳೂರು ನಗರ ದಕ್ಷಿಣ ಅತೀ ಕಡಿಮೆ ಮತದಾನದ ಮೂಲಕ ಗುರುತಿಸಿಕೊಂಡ ಕ್ಷೇತ್ರ. ಅಪಾರ್ಟ್‌ಮೆಂಟ್‌ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಸುಶಿಕ್ಷಿತ ಮತದಾರರಲ್ಲಿ ಹೆಚ್ಚಿನವರು ಮತಗಟ್ಟೆಗಳೆದುರು ಸರತಿ ನಿಂತು ತಮ್ಮ ಹಕ್ಕು ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶವೊಂದು ಇತ್ತೀಚೆಗೆ ಆರ್ಥಿಕ ಮತ್ತು ನೀತಿ ಕೇಂದ್ರ (ಐಎಸ್‌ಇಸಿ) ನಡೆಸಿರುವ ಅಧ್ಯಯನಗಳಿಂದ ಬಹಿರಂಗಗೊಂಡಿದೆ.

Advertisement

ಈ ಅಪಖ್ಯಾತಿಯಿಂದ ಜಿಲ್ಲೆಯನ್ನು ಹೊರತಂದು ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸಲು ಪ್ರೇರಣೆ ನೀಡುವ ಸಲುವಾಗಿ ಜಿಲ್ಲಾ ಸ್ವೀಪ್‌ ಸಮಿತಿಯು ಜಿಲ್ಲೆಯ ಸಾಧಕ “ಐಕಾನ್‌’ಗಳಿಂದ ಮತದಾನದ ಹಬ್ಬಕ್ಕೆ ರಂಗೇರಿಸಲು ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ ಕಲೆ, ಸಮಾಜ ಸೇವೆ, ಕ್ರೀಡೆ, ಭಿನ್ನ ಸಾಮರ್ಥ್ಯ ಮೊದಲಾದ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮೂಲಕ ಗುರುತಿಸಿಕೊಂಡಿರುವ ಐಕಾನ್‌ (ಜನಪ್ರಿಯರು)ಗಳಿಂದ ಮತದಾನದ ಮಹತ್ವದ ಜಾಗೃತಿ ಅಭಿಯಾನದ ರೂಪು ರೇಷೆಗಳನ್ನು ಸಿದ್ಧಪಡಿಸುತ್ತಿದೆ.

ಪಟ್ಲ, ಹಾಜಬ್ಬ, ರಾಜ್‌ ಬಿ. ಶೆಟ್ಟಿ
“ಮತದಾನಕ್ಕಿಂತ ಇನ್ನೊಂದಿಲ್ಲ- ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಆಶಯ ವಾಕ್ಯದೊಂದಿಗೆ ಯುವಕರು ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರಿಗೆ ಮತದಾನದ ಮಹತ್ವವನ್ನು ಸಾರಲು ಪದ್ಮಶ್ರೀ ಹರೇಕಳ ಹಾಜಬ್ಬ, ಚಲನಚಿತ್ರ ನಟ ಹಾಗೂ ನಿರ್ದೇಶಕ ರಾಜ್‌ ಬಿ. ಶೆಟ್ಟಿ, ನಟಿ ಹಾಗೂ ನಿರೂಪಕಿ ಅನುಶ್ರೀ ಎಸ್‌., ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ, ಆಳ್ವಾಸ್‌ ಕಾಲೇಜಿನ ಮಕ್ಕಳ ಕಲ್ಯಾಣ ಅಧಿಕಾರಿ ಸಬಿತಾ ಮೊನಿಸ್‌ ಹಾಗೂ ನಟಿ ಸಂಗೀತಾ ಶೃಂಗೇರಿ ಅವರನ್ನು ಮತದಾನ ಜಾಗೃತಿಯ ಐಕಾನ್‌ಗಳನ್ನಾಗಿ ಗುರುತಿಸಲಾಗಿದೆ.

ಒಂದು ಮೊಟ್ಟೆಯ ಕಥೆಯ ಚಿತ್ರದ ಮೂಲಕ ರಾಜ್‌ ಬಿ. ಶೆಟ್ಟಿ ಖ್ಯಾತಿ ಪಡೆದಿದ್ದರೆ, ಕಿತ್ತಳೆ ಹಣ್ಣು ಮಾರಿ ತಮ್ಮ ಊರಿನಲ್ಲಿ ಶಾಲೆ ನಿರ್ಮಿಸಿ ಮಾದರಿಯಾಗಿರುವ ಹರೇಕಳ ಹಾಜಬ್ಬ ಪ್ರತಿಷ್ಠಿತ ಪದ್ಮಶ್ರೀ ಮೂಲಕ ದೇಶದ ಗಮನ ಸೆಳೆದವರು. ಅವಿಭಜಿತ ದ.ಕ. ಜಿಲ್ಲೆಯ ಪ್ರಮುಖ ಕಲೆಯಾದ ಯಕ್ಷಗಾನದಲ್ಲಿ ಮೇರುಸ್ತರದ ಭಾಗವತರಾಗಿ ಗುರುತಿಸಿಕೊಂಡಿರುವವರು ಸತೀಶ್‌ ಪಟ್ಲ. ಬೆಳ್ತಂಗಡಿಯ ಗರ್ಡಾಡಿಯವರಾದ ಸಬಿತಾ ಮೊನಿಸ್‌ ತಮ್ಮ ಕಾಲುಗಳಲ್ಲಿಯೇ ಪರೀಕ್ಷೆ ಬರೆದು ಸ್ನಾತಕೋತ್ತರ ಪದವಿ ಪೂರೈಸಿದವರು.

Advertisement

36ರ ಹರೆಯದ ಸಬಿತಾ ಅವರು ತಮ್ಮ ಕಾಲುಗಳ ಮೂಲಕವೇ ಮತದಾನದ ಹಕ್ಕನ್ನು ಚಲಾಯಿಸುತ್ತಿರುವ ಜಿಲ್ಲೆಯ ಪ್ರಮುಖ ಐಕಾನ್‌. ಅನುಶ್ರೀ ನಟನೆಯ ಜತೆಯಲ್ಲೇ ದೃಶ್ಯ ಮಾಧ್ಯಮದಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರೆ, ಸಂಗೀತಾ ಅವರು ಸೌಂದರ್ಯ ಸ್ಪರ್ಧೆ, ನಟಿಯಾಗಿ ಮಾತ್ರವಲ್ಲದೆ, ಕ್ರೀಡಾ ಪಟುವಾಗಿಯೂ ಗುರುತಿಸಿಕೊಂಡವರು. ಇವರೆಲ್ಲರೂ ತಮ್ಮ ಪ್ರತಿಭೆ, ತಮ್ಮದೇ ಆದ ಮೇರು ವ್ಯಕ್ತಿತ್ವದ ಮೂಲಕ ಜಿಲ್ಲೆಯ ಐಕಾನ್‌ಗಳಾಗಿದ್ದು, ಇವರ ಮೂಲಕ
ಮತದಾನದ ಮಹತ್ವ ಸಾರುವುದು ಸ್ವೀಪ್‌ನ ತಂತ್ರವಾಗಿದೆ. ಮತದಾನದ ಮಹತ್ವವನ್ನು ಒಳಗೊಂಡ ಇವರ ಮಾತುಗಳು ವೀಡಿಯೋ, ಆಡಿಯೋ ಸಂದೇಶಗಳ ಮೂಲಕ ಸಾಮಾಜಿಕ ಜಾಲತಾಣಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪ್ರಸಾರಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ತಂಡ ಕಾರ್ಯಪ್ರವೃತ್ತವಾಗಿದೆ.

ಜಿಲ್ಲೆಯ ಪ್ರಮುಖ ಐಕಾನ್‌ಗಳ ಮೂಲಕ ಮತದಾನದ ಸಂದೇಶ ನೀಡಲು ರೂಪು ರೇಷೆಗಳು ಸಿದ್ಧಗೊಳ್ಳುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಮತದಾನದ ದೂರ ಉಳಿಯುವ ಯುವ ಹಾಗೂ ನಗರದ ಮತದಾರನ್ನು ಮತಗಟ್ಟೆಗಳಿಗೆ ಸೆಳೆಯುವ ಉದ್ದೇಶದಿಂದ ಸ್ವೀಪ್‌ ಹಮ್ಮಿ ಕೊಂಡಿರುವ ಹಲವು ಕಾರ್ಯಕ್ರಮ ಗಳಲ್ಲಿ ಇದು ಒಂದಾಗಿದೆ.
ಡಾ| ಕುಮಾರ, ದ.ಕ. ಜಿಲ್ಲಾ ಸ್ವೀಪ್‌ ಮುಖ್ಯಸ್ಥ
ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next