ಮಂಗಳೂರು: ಅರಬ್ಬೀ ಸಮದ್ರ ಮತ್ತು ಲಕ್ಷ ದ್ವೀಪದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ದ.ಕ.ಜಿಲ್ಲೆ ಸೇರಿದಂತೆ ಮಂಗಳೂರು ನಗರದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಉತ್ತಮ ಮಳೆಯಾಗಿದ್ದು, ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ನಗರದಲ್ಲಿ ಕೆಲವು ತಗ್ಗು ಪ್ರದೇಶಗಳು ಜಲವೃತ್ತಗೊಂಡಿದೆ.
ನಗರದ ಜ್ಯೋತಿ ವೃತ್ತ, ಬಲ್ಮಠ, ಕೊಟ್ಟಾರ ಕ್ರಾಸ್, ಜಪ್ಪಿನ ಮೊಗರು, ಹೊಗೈ ಬಜಾರ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿದೆ. ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಆವರಣದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ, ಆವರಣ ತುಂಬ ಕೃತಕ ನೆರೆ ಆವರಿಸಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಯಿತು.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅ.18 ಮತ್ತು ಅ.19 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಈ ವೇಳೆ 64.5 ಮಿ.ಮೀನಿಂದ 115.5 ಮಿ.ಮೀ ವರೆಗೆ ಮಳೆ ಬೀಳುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.