Advertisement

ಮಂಗಳೂರು: ಹಜ್‌ ಯಾತ್ರೆ ಇಂದು ಆರಂಭ

01:50 AM Jul 17, 2019 | Team Udayavani |

ಮಂಗಳೂರು: ಮಂಗಳೂರು ಹಜ್‌ ನಿರ್ವಹಣ ಸಮಿತಿಯ ಮೂಲಕ ಈ ವರ್ಷದ ಹಜ್‌ ಯಾತ್ರಿಕರನ್ನು ಕಳುಹಿಸಿ ಕೊಡುವ ಕಾರ್ಯ ಜು. 17ರಿಂದ ಆರಂಭವಾಗಲಿದ್ದು, 19ರ ವರೆಗೆ ನಡೆಯಲಿದೆ.

Advertisement

ಹಜ್‌ ಯಾತ್ರೆಯ ಉದ್ಘಾಟನೆ ಸಮಾರಂಭ ಬುಧವಾರ ಬೆಳಗ್ಗೆ 10.30ಕ್ಕೆ ಬಜಪೆ ಅನ್ಸಾರ್‌ ಪಬ್ಲಿಕ್‌ ಸ್ಕೂಲ್ನಲ್ಲಿ ನೆರವೇರಲಿದೆ.

ಮೂರು ದಿನಗಳಲ್ಲಿ ಐದು ವಿಮಾನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ 750 ಹಜ್‌ ಯಾತ್ರಾರ್ಥಿ ಗಳು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮದೀನಾ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

ಮಂಗಳೂರಿನಿಂದ ಮೊದಲ ವಿಮಾನ ಜು. 17ರಂದು ಸಂಜೆ 6.50ಕ್ಕೆ ನಿರ್ಗಮಿಸಲಿದೆ. ಜು.18ರಂದು ಬೆಳಗ್ಗೆ 11.50ಕ್ಕೆ ಮತ್ತು ಮಧ್ಯಾಹ್ನ 12.50ಕ್ಕೆ ಎರಡು ವಿಮಾನಗಳು ಹೊರಡಲಿವೆ. ಜು.19ರಂದು ತಡರಾತ್ರಿ 12.30ಕ್ಕೆ ಮತ್ತು ಬೆಳಗ್ಗೆ 5.50ಕ್ಕೆ ಹಜ್‌ ಯಾತ್ರಿಕರ ವಿಮಾನಗಳು ನಿರ್ಗಮಿಸಲಿವೆ. ಪ್ರತಿ ವಿಮಾನದಲ್ಲಿ ತಲಾ 150 ಮಂದಿ ಪ್ರಯಾಣಿಸಲಿದ್ದಾರೆ.

ಮಕ್ಕಾ ಮತ್ತು ಮದೀನಾ ಯಾತ್ರೆ ಮುಗಿಸಿ ಹಾಜಿಗಳು ಆ. 31ರಿಂದ ಸೆ. 2ರ ತನಕ 5 ತಂಡಗಳಲ್ಲಿ ಜೆದ್ದಾ ವಿಮಾನ ನಿಲ್ದಾಣದ ಮೂಲಕ ಹಂತಹಂತವಾಗಿ ಮಂಗಳೂರಿಗೆ ಹಿಂದಿರುಗಲಿದ್ದಾರೆ.

Advertisement

ಹಜ್‌ ಶಿಬಿರಕ್ಕೆ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರ ಭೇಟಿ

ರಾಜ್ಯ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷ ಜಿ.ಎ. ಬಾವಾ ಮಂಗಳವಾರ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಹಜ್‌ ಶಿಬಿರಕ್ಕೆ ಭೇಟಿ ನೀಡಿ ಯಾತ್ರಿಕರಿಗೆ ಶುಭ ಹಾರೈಸಿದರು. ಇದೇ ವೇಳೆ ಹಜ್‌ ಭವನ ನಿರ್ಮಾಣಕ್ಕೆ ಸರಕಾರದಿಂದ ಆಗಬೇಕಾದ ಎಲ್ಲ ಕೆಲಸ ಕಾರ್ಯಗಳಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಯಾತ್ರಿಕರ ಲಗೇಜ್‌ ಕೌಂಟರ್‌ ವಿಭಾಗದಲ್ಲಿ ಬುಧವಾರದ ಹಜ್‌ ಯಾತ್ರಿಕ ಮಂಗಳೂರು ಹರೇಕಳ ನ್ಯೂಪಡ್ಪು ನಿವಾಸಿ ಮಹಮ್ಮದ್‌ ಮುಸ್ಲಿಯಾರ್‌ ಅವರಿಗೆ ಗುರುತಿನ ಕೈಬಳೆ, ಬೋರ್ಡಿಂಗ್‌ ಪಾಸ್‌ ಮತ್ತು ಲಗ್ಗೇಜ್‌ ಟ್ಯಾಗನ್ನು ಜಿ.ಎ. ಬಾವಾ ಅವರು ವಿತರಿಸಿ ಪ್ರಕ್ರಿಯೆಗೆ ಚಾಲನೆ ನೀಡಿದರು. ರಶೀದ್‌ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ವಾರದೊಳಗೆ ಸದಸ್ಯರ ನೇಮಕ

ನಾನು ರಾಜ್ಯ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷ ಸ್ಥಾನ ವಹಿಸಿ ತಿಂಗಳು ಕಳೆದಿದೆ. ಇನ್ನು 8 ಮಂದಿ ಸದಸ್ಯರ ನೇಮಕವಾದರೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ. ವಾರದೊಳಗೆ ಅವರ ನೇಮಕವೂ ಆಗಲಿದೆ. ಸರಕಾರ ಬದಲಾದರೂ 3 ವರ್ಷಗಳ ಆಡಳಿತಾವಧಿ ಇರುತ್ತದೆ ಎಂದು ಜಿ.ಎ. ಬಾವಾ ತಿಳಿಸಿದರು.
‘ವಿಚಾರಣಾಧೀನ ಕೈದಿಗಳಿಗೆ ನೆರವು’

ಮಂಗಳೂರು: ಜಾಮೀನು ಲಭಿಸಿದರೂ ದಂಡ ಪಾವತಿಸಲು ಹಣವಿಲ್ಲದೆ ರಾಜ್ಯದ ವಿವಿಧ ಜೈಲುಗಳಲ್ಲಿ ಉಳಿದಿರುವ ವಿಚಾರಣಾಧೀನ ಕೈದಿಗಳ ಬಿಡು ಗಡೆಗೆ ಸಹಾಯ ಮಾಡಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷ ಜಿ.ಎ. ಬಾವಾ ತಿಳಿಸಿದ್ದಾರೆ. ಇದು ಒಂದು ಬಾರಿ ಜೈಲಿಗೆ ಹೋದವರಿಗೆ ಮಾತ್ರ ಅನ್ವಯಿಸಲಿದೆ ಎಂದವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next