ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಗೋಲಿಬಾರ್ ಹಾಗೂ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿವಾಸಿಗಳಾದ ಐ.ಕೆ. ಮೊಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಬಿ. ಉಮರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ವಿಚಾರಣೆಗೆ ಬಂದಿತ್ತು.
ವಾದ ಆಲಿಸಿದ ನ್ಯಾಯಪೀಠ, ಘಟನೆಗೆ ಸಂಬಂಧಿಸಿದಂತೆ ಈವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಇದಲ್ಲದೇ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಅವರಿಗೆ ನೋಟಿಸ್ ಜಾರಿಗೊಳಿಸಿ 2 ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಅಮಾನವೀಯವಾಗಿ ದೌರ್ಜನ್ಯ ಎಸಗಿದ್ದಾರೆ. ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ಲಾಠಿ ಚಾರ್ಜ್‌ನಲ್ಲಿ ಅನೇಕ ಅಮಾಯಕರಿಗೆ ಗಾಯಗಳಾಗಿವೆ. ಇಡೀ ಘಟನೆಯಲ್ಲಿ ಪೊಲೀಸರು ನಡೆದುಕೊಂಡ ರೀತಿ ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.
ಇದರ ಹಿಂದೆ ದೊಡ್ಡ ಪಿತೂರಿ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಘಟನೆಯ ಬಗ್ಗೆ ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳಿಂದ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕಿದೆ. ಸರ್ಕಾರ ಈಗ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ತನಿಖೆ ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.