ಮನೆಯವರ ಹೊರತಾಗಿ ದೂರದ ಊರಿಗೆ ಹೊರಟು ನಿಂತದ್ದು ಅದೇ ಮೊದಲು. ಮಂಗಳೂರಿನ ಸುಳ್ಯ ಸಮೀಪ ನಮ್ಮ ಊರು. ಸುಳ್ಯದಿಂದ ರಾತ್ರಿ ಹೊರಡುವ ಸ್ಲೀಪರ್‌ಕೋಚ್ ಬಸ್ ಒಂದರಲ್ಲಿ ನಾನು ಮತ್ತು ನನ್ನ ಗೆಳತಿ ಸುಷ್ಮಾ ರಾಜಧಾನಿಯ ಕಡೆಗೆ ಪ್ರಯಾಣ ಆರಂಭಿಸುವ ವೇಳೆಗೆ ಅದಾಗಲೇ 10 ಗಂಟೆ ಕಳೆದಿತ್ತು. ಸುಖವಾಗಿ ನಿದ್ರಿಸಲು ಎಲ್ಲಾ ವ್ಯವಸ್ಥೆಗಳಿದ್ದರೂ ನಿದ್ರಾದೇವಿ ನಮ್ಮ ಸಮೀಪವೂ ಸುಳಿಯಲಿಲ್ಲ. ನಮ್ಮ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದೆ. ಕೂಡಲೇ ರಿಪ್ಲೈ ಬಂತು. ರಾಜ್ಯದ ಪ್ರಮುಖ ವಾರ್ತಾವಾಹಿನಿಯಲ್ಲಿ ಆಂತರಿಕ ತರಬೇತಿ ಪಡೆಯಲು ಹೊರಟುನಿಂತ ನಮಗೆ ಸರ್ ಶುಭ ಹಾರೈಸಿರುತ್ತಾರೆ ಎಂದುಕೊಂಡರೆ “ನೀವು ಇಂಟರ್ನ್ಶಿಪ್ ಮಾಡಲಿರುವ ಚಾನೆಲ್‌ನ ಸಂಪಾದಕರಿಗೆ ಹಾಗೂ ಅವರ ಬಳಗಕ್ಕೆ ದೇವರ ಆಶೀರ್ವಾದವಿರಲಿ’- ಎಂದು ಮೆಸೇಜ್ ಮಾಡಿದ್ದರು. ನಮಗೊಮ್ಮೆ ಗಲಿಬಿಲಿಯಾಯಿತು. “ಯಾಕೆ ಸರ್ ಹಾಗೆ ಹೇಳ್ತೀರಿ?’ ಎಂದಾಗ, “ಮತ್ತೆ ನಿಮ್ಮನ್ನ ಸಹಿಸಿಕೊಳ್ಳೋದು ಸುಲಭವಾ!’ ಎಂದಿದ್ದರು.
ಬಸ್‌ನಲ್ಲಿ ಎಲ್ಲರೂ ಮಲಗಿದ್ದಾರೆ ಎಂದು ಲೆಕ್ಕಿಸದೆ ನಮಗಿಬ್ಬರಿಗೆ ಜೋರಾಗಿ ನಗು ಬಂತು. ಗೆಳತಿಯೂ ಸೇರಿಸಿದಳು, “ನಾವು ಒಂದು ತಿಂಗಳು ಊರಲ್ಲಿ ಇರದ ಕಾರಣ ಊರು ಸ್ವಲ್ಪ ಶಾಂತವಾಗಿರ್ತದೆ ಬಿಡು!’ ಎಂದು.
ಮಹಾನಗರಿ ತಲುಪಿದಾಗ ಸೂರ್ಯ ಇನ್ನೂ ನಿದ್ರೆಯ ಅಮಲಿನಲ್ಲಿದ್ದ. ಯಾವುದೋ ಒಂದು ವಿಭಿನ್ನ ಭಾವನೆಗಳ ತೊಳಲಾಟದಲ್ಲಿದ್ದ ನಾವು ನಿದ್ರಿಸಿದ್ದು ಅಷ್ಟರಲ್ಲೇ ಇತ್ತು. ಸಾಲದ್ದಕ್ಕೆ ಕ್ಷಣ-ಕ್ಷಣಕ್ಕೂ ಬದಲಾಗುತ್ತಿದ್ದ ಹವಾಮಾನ ನಮಗೆ ಕೊಂಚ ಜಾಸ್ತಿಯೇ ಕಿರಿಕಿರಿಯನ್ನೂ ಉಂಟು ಮಾಡಿತ್ತು.
ನನ್ನ ಚಿಕ್ಕಪ್ಪ ನಮಗೆ ಉಳಿದುಕೊಳ್ಳಲು ಪಿ.ಜಿ. ವ್ಯವಸ್ಥೆಯನ್ನು ಮಾಡಿದ್ದರು. ಹತ್ತು ದಿನಗಳ ನಂತರ ನಮ್ಮಿಬ್ಬರು ಗೆಳತಿಯರು ಬರುವವರಿದ್ದರು, ಮತ್ತೂಂದು ಚಾನೆಲ್‌ನಲ್ಲಿ ಇಂಟರ್ನ್ಶಿಪ್‌ಗಾಗಿ. ಮೊದಲದಿನ ಮಧ್ಯಾಹ್ನದ ಹೊತ್ತಿಗೆ ಕರೆ ಮಾಡಿದ ಚಿಕ್ಕಪ್ಪ “ಬಸವೇಶ್ವರ ನಗರದಲ್ಲಿರುವ ನನ್ನ ಆಫೀಸ್‌ಗೆ ಬನ್ನಿ’ ಎಂದರು. ಮೊಬೈಲ್‌ನಲ್ಲಿ ಒಂದು ಆಟೋ ಬುಕ್ ಮಾಡಿದೆವು. ಆಟೋ ನಮ್ಮ ಕಣ್ಮುಂದೆಯೇ ಬಂದು ನಿಂತಿತ್ತು. ಅಂತೂ ಚಿಕ್ಕಪ್ಪ ಕೆಲಸ ಮಾಡುತ್ತಿದ್ದ ಬ್ಯಾಂಕ್‌ಗೆ ತಲುಪಿದೆವು. ಚಿಕ್ಕಪ್ಪ ನಾವು ತುಂಬಾ ಹಸಿದಿರಬಹುದೆೆಂದು ಮಸಾಲೆವಡೆ ತರಿಸಿಕೊಟ್ಟರು. ಅದನ್ನು ನೋಡುತ್ತಿದ್ದ ಹಾಗೆ ಗೆಳತಿ, “ಇದು ಚಟ್ಟಂಬಡೆ’ ಅಂದಳು. ನಮ್ಮ ಮಂಗ ಳೂ ರಿನ ಚಟ್ಟಂಬಡೆ ಬೆಂಗಳೂರಿನಲ್ಲಿ ಮಸಾಲೆವಡೆ!
ಮರುದಿನವೇ ನಾವು ನಮ್ಮ ಅನುಮತಿ ಪತ್ರ ಹಿಡಿದು ಚಾನೆಲ್ ಆಫೀಸ್‌ಗೆ ಹೋಗಿದ್ದೆವು. ಸಂಪಾದಕರನ್ನು ಭೇಟಿಯಾಗಲೆಂದು ಕಾಯುತ್ತ ಕುಳಿತಿದ್ದಾಗ ಅದೇ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಕನ್ನಡದ ಹೆಸರಾಂತ ಲೇಖಕರೊಬ್ಬರು ಸಿಕ್ಕಿ, “ನೀವು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಲ್ವಾ?’ ಎಂದು ಕೇಳಿದರು. ವರ್ಷದ ಹಿಂದೆ ನಾವು ಅವರ ಸಂದರ್ಶನ ಮಾಡಿದ್ದೆವು. ಅವರು ನಮ್ಮ ಗುರುತು ಹಿಡಿದು ಮಾತನಾಡಿಸಿದ್ದು ತುಂಬ ಖುಷಿಕೊಟ್ಟಿತ್ತು.
ಮರುದಿನದಿಂದಲೇ ಚಾನೆಲ್‌ನಲ್ಲಿ ನಮ್ಮ ಇಂಟರ್ನ್ಶಿಪ್ ಶುರುವಾಗಿತ್ತು. ಅಲ್ಲಿನ ಎಲ್ಲರೂ ನಮಗೆ ತುಂಬಾ ಸಹಕಾರ ಕೊಟ್ಟರು. ಪ್ರತಿಯೊಂದು ದಿನವೂ ಹೊಸ ಹೊಸತನ್ನು ಕಲಿಯುವಂತಾಯಿತು. ಈ ಮಧ್ಯೆ ನಮ್ಮ ಎಡವಟ್ಟುಗಳು ಸಹ ಎಗ್ಗಿಲ್ಲದೆಯೆ ಸಾಗಿದ್ದವು. ಅದರಲ್ಲಿ ನನ್ನ ಪಾಲೇ ಕೊಂಚ ಹೆಚ್ಚು!
ಒಂದು ತಿಂಗಳ ಇಂಟರ್‌ಶಿಪ್, ಮಹಾನಗರಿಯ ಜೀವನ ನಮ್ಮ ವ್ಯಕ್ತಿತ್ವವನ್ನು ಮಾಗಿಸಿದೆ ಎಂದರೆ ತಪ್ಪಾಗಲಾರದು. ನಾವು ಅಲ್ಲಿ ಕಳೆದುಕೊಂಡದಕ್ಕಿಂತ ಕಲಿತುಕೊಂಡದ್ದೇ ಹೆಚ್ಚು. ಬೆಂಗಳೂರು ಮಹಾನಗರಿ ನಮ್ಮನ್ನು ಎಲ್ಲಿ ಹೋದರೂ ಈಸಬಲ್ಲೆವು ಎಂಬ ನಂಬಿಕೆ ಮೂಡಿಸಿದ್ದಂತೂ ನಿಜ.
ಸೀಮಾ ಪೋನಡ್ಕ
ದ್ವಿತೀಯ ಎಂಸಿಜೆ
ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಪುತ್ತೂರು