Advertisement
2010ರ ಮೇ 22ರ ಮುಂಜಾನೆ ಸಂಭವಿಸಿದ ಈ ಮಹಾದುರಂತದಲ್ಲಿ ಪೈಲಟ್, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿ ಒಟ್ಟು 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 8 ಮಂದಿ ಬದುಕುಳಿದಿದ್ದರು.
Related Articles
Advertisement
ತಣ್ಣೀರುಬಾವಿಯ ಪ್ರದೀಪ್ (ಅಂದಿನ ಪ್ರಾಯ 28), ಹಂಪನ ಕಟ್ಟೆಯ ಮಹಮ್ಮದ್ ಉಸ್ಮಾನ್ (49), ವಾಮಂಜೂರಿನ ಜ್ಯೂಯೆಲ್ ಡಿ’ಸೋಜಾ (24), ಕೇರಳ ಕಣ್ಣೂರು ಕಂಬಿಲ್‌ನ ಮಾಹಿನ್ ಕುಟ್ಟಿ (49), ಕಾಸರಗೋಡು ಉದುಮ ಕುಲಿಕುನ್ನು ನಿವಾಸಿ ಕೃಷ್ಣನ್ (37), ಉಳ್ಳಾಲದ ಉಮ್ಮರ್ ಫಾರೂಕ್ (26), ಪುತ್ತೂರು ಸಾಮೆತ್ತಡ್ಕದ ಅಬ್ದುಲ್ಲಾ (37), ಮಂಗಳೂರು ಕೆಎಂಸಿ ವಿದ್ಯಾರ್ಥಿನಿ ಬಾಂಗ್ಲಾದ ಸಬ್ರಿನಾ (23) ಪವಾಡಸದೃಶರಾಗಿ ಬದುಕುಳಿದ ಅದೃಷ್ಟವಂತರು. ಇವರಲ್ಲಿ ಸಬ್ರಿನಾ ಮಾತ್ರ ಗಂಭೀರ ಗಾಯಗೊಂಡಿದ್ದರು.
ಸ್ಮಾರಕ ಪಾರ್ಕ್ :
ದುರಂತ ಸಂಭವಿಸಿದ ಸ್ಥಳದಲ್ಲೇ ಮೃತರ ಹೆಸರುಗಳನ್ನು ಶಿಲೆಗಳಲ್ಲಿ ಬರೆದು ತಾತ್ಕಾಲಿಕ ಸ್ಮಾರಕ ನಿರ್ಮಿಸಲಾಗಿತ್ತು. ಆದರೆ ಆ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ವಿವಾದ ಉಂಟಾಗಿತ್ತು ಹಾಗೂ ತಾತ್ಕಾಲಿಕ ಸ್ಮಾರಕವು ಕಿಡಿಗೇಡಿಗಳಿಂದಾಗಿ ಪುಡಿಯಾಗಿತ್ತು. ಅಂತಿಮವಾಗಿ 3 ವರ್ಷಗಳ ಹಿಂದೆ ಕೂಳೂರು ಸಮೀಪದ ತಣ್ಣೀರುಬಾವಿಗೆ ತೆರಳುವ ರಸ್ತೆ ಪಕ್ಕದ 90 ಸೆಂಟ್ಸ್ ಜಾಗದಲ್ಲಿ 22/5 ಹೆಸರಿನಲ್ಲಿ “ಸ್ಮಾರಕ ಪಾರ್ಕ್’ ನಿರ್ಮಿಸಲಾಗಿದೆ. ಅಲ್ಲಿ ಪ್ರತೀ ವರ್ಷ ಮೇ 22ರಂದು ಇಲ್ಲಿ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.
ಎರಡು ತಿಂಗಳ ಹಿಂದೆ ರದ್ದಾದ ದೂರು, ವಿಚಾರಣೆ! :
ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಏರ್ ಇಂಡಿಯಾ ಹಾಗೂ ಅಧಿಕಾರಿಗಳ ವಿರುದ್ಧ ದಾಖಲಿಸಲಾಗಿದ್ದ ಖಾಸಗಿ ದೂರು ಮತ್ತು ವಿಚಾರಣೆಯನ್ನು ಹೈಕೋರ್ಟ್ ಎರಡು ತಿಂಗಳುಗಳ ಹಿಂದೆಯಷ್ಟೇ ರದ್ದುಪಡಿಸಿತ್ತು. ವಿಮಾನ ದುರಂತ ಕುರಿತಂತೆ 2012ರ ಮಾ. 6ರಂದು ಮಂಗಳೂರು ಮೂಲದ “812 ಫೌಂಡೇಶನ್’ ಖಾಸಗಿ ದೂರು ದಾಖಲಿಸಿತ್ತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಮಾನದಂಡಗಳ ಅನುಸಾರ ಮಂಗಳೂರು ವಿಮಾನ ನಿಲ್ದಾಣ ಕಾರ್ಯನಿರ್ವಹಣೆಗೆ ಯೋಗ್ಯವಾಗಿರಲಿಲ್ಲ. ಆದರೂ ವೈಮಾನಿಕ ಚಟುವಟಿಕೆ ನಡೆಯುತ್ತಿತ್ತು. ಏರ್ ಇಂಡಿಯಾ ಪ್ರಾಧಿಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿರ್ದೇಶಕರ ಸಂಪೂರ್ಣ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.