Advertisement

ಮಂಗಳೂರು: 28 ದಿನಗಳಲ್ಲಿ  5 ಕೊಲೆ

09:13 AM Jan 23, 2018 | |

ಮಂಗಳೂರು: ಮಂಗಳೂರು ನಗರದಲ್ಲಿ ಡಿ. 25ರಿಂದ ಜ. 22ರ ವರೆಗಿನ 28 ದಿನಗಳಲ್ಲಿ 5 ಕೊಲೆಗಳು ನಡೆದಿವೆ. ಕೊಲೆಯಾದವರಲ್ಲಿ ಮೂರು ಮಂದಿ ಅಮಾಯಕರು. ರಾಜಾರೋಷವಾಗಿ ನಡೆಯುತ್ತಿರುವ ಹತ್ಯೆ, ಹಲ್ಲೆ ಪ್ರಕರಣಗಳು ಮಂಗಳೂರು ನಗರದ ಕಾನೂನು ಸುವ್ಯವಸ್ಥೆಯ ಪಾಲಿಗೆ ಸವಾಲಾಗಿ ಪರಿಣಮಿಸಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ. 

Advertisement

ಡಿ. 25ರಂದು ರೌಡಿ ಮೆರ್ಲಿಕ್‌ ಡಿ’ಸೋಜಾ ಕ್ರಿಸ್ಮಸ್‌ ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಬಂದ ಸಂದರ್ಭದಲ್ಲಿ ಗೋರಿಗುಡ್ಡೆ  ಯಲ್ಲಿ  ರೌಡಿಗಳ ತಂಡ ಆತನ ಹತ್ಯೆ ಮಾಡಿತ್ತು. ಇದಾದ ಬಳಿಕ ಜ. 3ರಂದು ಕಾಟಿಪಳ್ಳದಲ್ಲಿ ದೀಪಕ್‌ ರಾವ್‌ ಅಪರಾಹ್ನ ಮನೆಗೆ ಬರುತ್ತಿರುವಾಗ 5 ಮಂದಿಯ ತಂಡ ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಇದಕ್ಕೆ ಪ್ರತೀಕಾರ ಎಂದು ಹೇಳಿಕೊಂಡು ದುಷ್ಕರ್ಮಿಗಳ ತಂಡ ಜ. 3ರಂದು ರಾತ್ರಿ ಬಶೀರ್‌ ಫಾಸ್ಟ್‌ ಫುಡ್‌ ಅಂಗಡಿ ಮುಚ್ಚುವ ಸಮಯ ಮಾರಣಾಂತಿಕ ಹಲ್ಲೆ ಮಾಡಿದ್ದು ಬಳಿಕ ಅವರು ಎ.ಜೆ. ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು. ಜ.13ರಂದು ಟಾರ್ಗೆಟ್‌ ಇಲ್ಯಾಸ್‌ ಜಪ್ಪು ಕುಡುಪಾಡಿಯಲ್ಲಿ ತನ್ನ ಮನೆಯಲ್ಲಿ ನಿದ್ರಿಸುತ್ತಿರುವ ಸಂದರ್ಭ ಎದುರಾಳಿ ತಂಡ ಫ್ಲ್ಯಾಟಿಗೆ ನುಗ್ಗಿ ಆತನ ಕೊಲೆ ಮಾಡಿತ್ತು. ಜ. 22ರಂದು ಶಿವರಾಜ್‌ನನ್ನು ದುಷ್ಕರ್ಮಿಗಳ ತಂಡ ಕೈಕೊಡಲಿಯಿಂದ ಕೊಲೆ ಮಾಡಿದೆ.

ಇವುಗಳಲ್ಲಿ 3 ಪ್ರಕರಣದಲ್ಲಿ ಆರೋಪಿಗಳ ಬಂಧನ ವಾಗಿದ್ದು, ಇಲ್ಯಾಸ್‌ ಕೊಲೆಯಲ್ಲಿ ಯಾರ ಬಂಧನವೂ ಆಗಿಲ್ಲ . ಶಿವರಾಜ್‌ ಪ್ರಕರಣದಲ್ಲಿ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಯಾಗಿರುವ 5 ಮಂದಿಯಲ್ಲಿ ಮೂರು ಮಂದಿ ಅಮಾಯಕರು.

ರೌಡಿಗಳಿಗೆ ಈಗ ಮನೆಯೂ ಸುರಕ್ಷಿತವಲ್ಲ 
ಈ ಹಿಂದೆ ರಸ್ತೆ, ಬಾರ್‌ಗಳಲ್ಲಿ ನಡೆಯುತ್ತಿದ್ದ ಗ್ಯಾಂಗ್‌ವಾರ್‌ ಈಗ ಮನೆಯಂಗಳಕ್ಕೆ ಬಂದಿದೆ. ಮನೆಯೊಳಗೆ ನುಗ್ಗಿ ಎದುರಾಳಿಗಳನ್ನು ಹತ್ಯೆ ಮಾಡಲಾಗುತ್ತಿದೆ. ಈವರೆಗೆ ರೌಡಿಗಳಿಗೆ ಮನೆ ಸುರಕ್ಷಿತವಾಗಿತ್ತು .ಇತ್ತೀಚೆಗೆ ನಡೆದಿರುವ ಹತ್ಯೆಗಳು ಇನ್ನು ಮುಂದೆ ರೌಡಿಗಳಿಗೆ ಮನೆಯೂ ಸುರಕ್ಷಿತವಲ್ಲ ಎಂಬ ಬಗ್ಗೆ ಮುನ್ಸೂಚನೆ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next