ಬಂದರು: ಮಂಗಳೂರಿನ ಮೀನುಗಾರಿಕೆ ಬಂದರಿನ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಯೋಜಿಸಲಾಗಿದ್ದ ಮೂರನೇ ಹಂತದ ಮೀನುಗಾರಿಕೆ ಜೆಟ್ಟಿ ನಿರ್ಮಾಣದ ಬಾಕಿ ಕಾಮಗಾರಿ ಮರು ಆರಂಭಕ್ಕೆ ಮತ್ತೆ ತಾಂತ್ರಿಕ ಸಮಸ್ಯೆ ಎದುರಾಗಿದೆ!
ಮಂಗಳೂರು ಬಂದರಿನ ಒಂದನೇ, ಎರಡನೇ ಹಂತದ ಅಭಿವೃದ್ಧಿ ಆದರೂ ಬೋಟು ನಿಲುಗಡೆಗೆ ಪರದಾಡುವ ಪರಿಸ್ಥಿತಿ ಮನಗಂಡು ಹಾಗೂ ಇಲ್ಲಿನ ಸ್ಥಳಾವಕಾಶದ ಕೊರೆ ತೆಯು ಗಂಭೀರ ಸಮಸ್ಯೆಯಾದ ಹಿನ್ನೆಲೆಯಲ್ಲಿ ಮೀನುಗಾರಿಕೆ ದಕ್ಕೆಯ ತೃತೀಯ ಹಂತದ ವಿಸ್ತರಣೆ ಕೈಗೆತ್ತಿಕೊಂಡು ಕೆಲವು ವರ್ಷಗಳೇ ಸಂದಿವೆ. ಇದರ ಕೆಲವು ಕಾಮಗಾರಿ ನಡೆದರೂ ರಸ್ತೆ, ಕಾಂಕ್ರೀಟ್ ನೆಲಹಾಸು, ಕಾಂಪೌಂಡ್, ಕುಡಿಯುವ ನೀರು, ಹರಾಜು ಪ್ರಾಂಗಣ ಸಹಿತ ಕೆಲವು ಕಾಮಗಾರಿ ಬಾಕಿಯಾಗಿದೆ. ಇದಕ್ಕಾಗಿ 22 ಕೋ.ರೂ.ಗಳ ಹೆಚ್ಚುವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ಕಳೆದ ವರ್ಷ ದೊರೆತಿದೆ. ಆದರೆ ಜಾಗದ ಸಮಸ್ಯೆ ನ್ಯಾಯಾಲಯದಲ್ಲಿದೆ. ತಾಂತ್ರಿಕ ಸಮಸ್ಯೆ ನೆಪದಿಂದ ಬಾಕಿ ಇರುವ ಕೆಲಸ ಮಾತ್ರ ಇನ್ನೂ ಶುರುವಾಗಿಲ್ಲ!
ಹಲವು ಸಮಯದಿಂದ ಚರ್ಚೆಗೆ ಕಾರಣವಾಗಿದ್ದ 3ನೇ ಜೆಟ್ಟಿ ಇರುವ ಭೂಮಿ ಬಂದರು ಇಲಾಖೆಗೆ ಸೇರಿದ್ದಾ? ಅಥವಾ ಮೀನುಗಾರಿಕೆ ಇಲಾಖೆಯದ್ದಾ? ಎಂಬ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಗಡಿ ಗುರುತು ಇಲ್ಲದೆ ಹಲವು ಅವ್ಯವಸ್ಥೆಗೂ ಕಾರಣವಾಗಿತ್ತು. ಹೀಗಾಗಿ ಇದರ ಬಗ್ಗೆ ಗಡಿ ಗುರುತು ಮಾಡಿ ಆ ಬಳಿಕ 3ನೇ ಜೆಟ್ಟಿ ವಿಸ್ತರಣೆಯ ಉಳಿಕೆ ಕಾಮಗಾರಿ ನಡೆಸಲು ದ.ಕ. ಜಿಲ್ಲಾಡಳಿತ ನಿರ್ಧರಿಸಿತ್ತು.
ಏನಿದು ಕಾಮಗಾರಿ? 3ನೇ ಹಂತದ ವಿಸ್ತರಣೆ ಕಾಮಗಾರಿಗೆ 57.60 ಕೋ.ರೂ.ಗಳ ಪ್ರಸ್ತಾವನೆಗೆ 2010ರ ಸೆ. 20ರಂದು ಕೇಂದ್ರ ಸರಕಾರದಿಂದ ಮಂಜೂರಾತಿ ದೊರಕಿತ್ತು. ಇದರಲ್ಲಿ ಶೇ.75ರಷ್ಟು ಪಾಲನ್ನು (43.20 ಕೋ.ರೂ.) ಕೇಂದ್ರ ಸರಕಾರ ಹಾಗೂ ಶೇ.25 ಪಾಲನ್ನು (14.40 ಕೋ.ರೂ.) ರಾಜ್ಯ ಸರಕಾರ ನೀಡುವುದೆಂದು ತೀರ್ಮಾನಿಸಲಾಗಿತ್ತು. 2011-12ರಲ್ಲಿ ಈ ಕಾಮಗಾರಿಯ ಟೆಂಡರ್ ಅನ್ನು ಗುತ್ತಿಗೆದಾರರಿಗೆ ನೀಡಿ, 36 ತಿಂಗಳೊಳಗೆ (2015) ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿತ್ತು. ಕಾಮಗಾರಿ ಪ್ರಗತಿಯ ಸಂದರ್ಭ ಸ್ಥಳೀಯ ಮೀನುಗಾರರ ಬೇಡಿಕೆಯಂತೆ, ರಾಜ್ಯಮಟ್ಟದ ನಿರ್ಣಯದಂತೆ ದಕ್ಷಿಣ ಭಾಗದ ಜೆಟ್ಟಿಯನ್ನು+2.50 ಮೀ.ನಿಂದ + 3 ಮೀ.ಗೆ ಎತ್ತರಿಸುವಂತೆ ನಿರ್ಣಯಿಸಲಾಗಿತ್ತು. ಅದರಂತೆ ಅನುಮೋದಿತ ವಿನ್ಯಾಸಗಳಂತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಪರಿಷ್ಕೃತ ಅಂದಾಜುಪಟ್ಟಿಯನ್ನು 98.25 ಕೋ.ರೂ.ಗೆ ತಯಾರಿಸಲಾಗಿತ್ತು. ಬಳಿಕ ಹೊಸ ಪ್ರಸ್ತಾವನೆ ಸಹಿತ ಹತ್ತಾರು ಕಾರಣ ಗಳಿಂದ ಯೋಜನೆ ಪೂರ್ಣಗೊಳ್ಳಲೇ ಇಲ್ಲ. ಜತೆಗೆ ಆಕ್ಷೇಪಗಳಿದ್ದ ಕಾರಣ ಕೆಲವರು ಹೊಸದಿಲ್ಲಿಯ ರಾಷ್ಟ್ರೀಯ ಹಸುರು ನ್ಯಾಯಪೀಠದಲ್ಲಿ ದಾವೆ ಹೂಡಿದ್ದರು. ಯೋಜನೆ ಬಾಕಿಯಾಗಿತ್ತು.
3ನೇ ಹಂತದ ಆಗಲಿರುವ ಕಾಮಗಾರಿಗಳು
-2ನೇ ಹಂತದ ಜೆಟ್ಟಿಯ ಪಕ್ಕದಿಂದ ಹೊಗೆಬಜಾರ್ ಭಗತ್‌ಸಿಂಗ್ ರಸ್ತೆ
-ಕಾಂಕ್ರೀಟ್ ಕಾಮಗಾರಿ 3ನೇ ಹಂತದ ಜೆಟ್ಟಿ ವ್ಯಾಪ್ತಿಯಲ್ಲಿ ಆವರಣ ಗೋಡೆ
-ಜೆಟ್ಟಿಯಲ್ಲಿ ನೆಲಕ್ಕೆ ಕಾಂಕ್ರೀಟ್ ಹಾಗೂ ಕಾಂಕ್ರೀಟ್ ತೋಡು
-ಸುಸಜ್ಜಿತ ಹರಾಜು ಕೇಂದ್ರ
-ವಿದ್ಯುತ್ಛಕ್ತಿ, ಕುಡಿಯುವ ನೀರು, ಶೌಚಾಲಯ
-3ನೇ ಜೆಟ್ಟಿಯ ಪಕ್ಕದಲ್ಲಿಯೇ “-3′ ಡ್ರೆಜ್ಜಿಂಗ್
ಶೀಘ್ರ ಟೆಂಡರ್: ಮೂರನೇ ಹಂತದ ಮೀನುಗಾರಿಕೆ ಜೆಟ್ಟಿ ನಿರ್ಮಾಣದ ಬಾಕಿಯಾಗಿರುವ ಕಾಮಗಾರಿಗೆ ಸರಕಾರ ಅನುಮೋದನೆ ನೀಡಿದೆ. ಬಳಿಕ ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವೊಂದು ತಾಂತ್ರಿಕ ಸವಾಲು ಎದುರಾದ ಕಾರಣದಿಂದ ಸಮಸ್ಯೆ ಆಗಿತ್ತು. ಅದು ಇತ್ಯರ್ಥವಾದ ಕೂಡಲೇ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ. –
ಹರೀಶ್ ಕುಮಾರ್, ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಮಂಗಳೂರು