Advertisement
ರವಿವಾರ ಮೇಯರ್ ಕವಿತಾ ಸನಿಲ್ ಅವರು ತಮ್ಮ ಕಾರಿನಲ್ಲಿ ಜೈಲ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಎದುರಿನಲ್ಲಿಯೇ ಬೈಕಿನಲ್ಲಿ ಬಂದ ಒಬ್ಬ ವ್ಯಕ್ತಿ ಹಳೆಯ ಜೈಲಿನ ಆವರಣಕ್ಕೆ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಯಾವುದೋ ವಸ್ತುವನ್ನು ಎಸೆದಿದ್ದಾನೆ. ಮೇಯರ್ ಅವರು ಕೂಡಲೇ ಆತನನ್ನು ಬೆನ್ನಟ್ಟಿ ಗುರುತು ಪತ್ತೆ ಹಚ್ಚಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಆತ ಓಡಿ ಪರಾರಿಯಾಗಿದ್ದಾನೆ.
ಜಿಲ್ಲಾ ಕಾರಾಗೃಹದ ಹಳೆಯ ಮತ್ತು ಹೊಸ ಜೈಲು ಕಟ್ಟಡಗಳೆರಡರಲ್ಲಿಯೂ ವಿಚಾರಣಾಧೀನ ಕೈದಿಗಳಿದ್ದಾರೆ. ಪೊಲೀಸರು ಆಗಿಂದಾಗ್ಗೆ ದಾಳಿ ನಡೆಸುತ್ತಿದ್ದು, ಆಗ ಕೈದಿಗಳ ಸೆಲ್‌ಗಳಿಂದ ಗಾಂಜಾ, ಮೊಬೈಲ್ ಫೋನ್, ಚಾರ್ಜರ್, ಚೂರಿ, ಚಾಕು ಇತ್ಯಾದಿಗಳು ಪತ್ತೆಯಾಗುವುದು ಸಾಮಾನ್ಯ. ಜೈಲಿನ ಒಳಗಿರುವ ಕೈದಿಗಳಿಗೆ ಮೊಬೈಲ್, ಗಾಂಜಾ ಮತ್ತಿತರ ವಸ್ತುಗಳು ಹೇಗೆ ಸಿಗುತ್ತವೆ ಎನ್ನುವುದಕ್ಕೆ ರವಿವಾರ ಮೇಯರ್ ಸಮಕ್ಷಮ ನಡೆದ ಘಟನೆ ಸಾಕ್ಷಿಯಾಗಿದೆ.
ಜೈಲಿನ ಆವರಣ ಗೋಡೆ ಸುಮಾರು 30 ಅಡಿ ಎತ್ತರವಿದ್ದು, ಮೇಲ್ಗಡೆ ಅದಕ್ಕೆ ವಿದ್ಯುತ್ ತಂತಿ ಬೇಲಿ ಇದೆ. ಕೈದಿಗಳ ಸಹಚರರು ಅಥವಾ ಹಿತೈಷಿಗಳು ಹೊರಗಿನ ರಸ್ತೆಯಲ್ಲಿ ನಿಂತು ಗಾಂಜಾ ಮತ್ತು ಮೊಬೈಲ್ ಎಸೆಯುತ್ತಿರುವ ಬಗ್ಗೆ ಈ ಹಿಂದೆ ಜೈಲಿನ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇದೀಗ ಮೇಯರ್ ಸಮಕ್ಷಮ ಎಸೆದ ಪೊಟ್ಟಣದಲ್ಲಿಯೂ ಗಾಂಜಾ/ ಮೊಬೈಲ್ ಫೋನ್ ಇರುವ ಸಾಧ್ಯತೆ ಇದೆ. ಏಕೆಂದರೆ ಕೇವಲ ಆಹಾರ ಆಗಿರುತ್ತಿದ್ದರೆ ಜೈಲಿನ ದ್ವಾರದ ಮೂಲಕವೇ ಅಧಿಕೃತವಾಗಿ ನೀಡ ಲು ಅವಕಾಶವಿದೆ.
ಮೇಯರ್ ಸ್ವತಃ ನೀಡಿರುವ ದೂರಿಗೆ ಸಂಬಂಧಿಸಿ ಪೊಲೀಸರು ಯಾವ ಕ್ರಮ ಜರಗಿಸುತ್ತಾರೆ ಎನ್ನುವುದನ್ನು ಕಾದು ನೋಡ ಬೇಕು.