ಮಂಗಳೂರು: ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು ಕಚೇರಿಯಲ್ಲಿ ಚಾಲನಾ ಪರವಾನಿಗೆ ಸಂಬಂಧಿಸಿದ ಕಚೇರಿ ಕೆಲಸಗಳನ್ನು ಮಾ. 22ರಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೇ 29ರಿಂದ ಪ್ರಾಯೋಗಿಕವಾಗಿ ಚಾಲನಾ ಪರವಾನಿಗೆ ಸೇವೆಗಳು ಪ್ರಾರಂಭವಾಗಲಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಜೂ. 1ರಿಂದ ಸೇವೆಗಳು ಲಭ್ಯವಾಗಲಿವೆ.
ಕಲಿಕಾ ಲೈಸೆನ್ಸ್ ನೀಡುವಿಕೆ (ಎಲ್.ಎಲ್. ಪರೀಕ್ಷೆ), ಚಾಲನಾ ಅನುಜ್ಞಾ ಪತ್ರ ನೀಡುವಿಕೆ (ಡಿ.ಎಲ್. ಪರೀಕ್ಷೆ), ಚಾಲನಾ ಅನುಜ್ಞಾ ಪತ್ರ ನವೀಕರಣ, ವಿಳಾಸ ಬದಲಾವಣೆ, ನಿರ್ವಾಹಕ ಲೈಸೆನ್ಸ್ ನೀಡುವಿಕೆ/ ನವೀಕರಣ, ಇಂಟರ್ ನ್ಯಾಶನಲ್ ಡ್ರೈವಿಂಗ್ ಹಾಗೂ ಇತರ ಸೇವೆಗಳು ಲಭ್ಯವಿವೆ.
ಕೋವಿಡ್-19 ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿಯ ಲೈಸೆನ್ಸ್ ವಿಭಾಗದ ಸೇವೆಗಳನ್ನು ಶೇ.50ರಷ್ಟು ಕಡಿತ ಮಾಡಲಾಗಿದೆ. ಪ್ರತಿ ದಿನ 50 ಕಲಿಕಾ ಲೈಸೆನ್ಸ್ ನೀಡುವಿಕೆ (ಎಲ್.ಎಲ್.ಪರೀಕ್ಷೆ), 50 ಚಾಲನಾ ಅನುಜ್ಞಾ ಪತ್ರ ನೀಡುವಿಕೆ (ಡಿ.ಎಲ್. ಪರೀಕ್ಷೆ) 50, ಚಾಲನಾ ಅನುಜ್ಞಾ ಪತ್ರ ನವೀಕರಣ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು.
ಸಾರ್ವಜನಿಕರು ಅರ್ಜಿಯೊಂದಿಗೆ ಮಾಸ್ಕ್ ಧರಿಸಿ, ಥರ್ಮಲ್ ಸ್ಕ್ರೀನಿಂಗ್ ಆದ ಮೇಲೆ ಕಚೇರಿ ಒಳಗಡೆ ಪ್ರವೇಶ ನೀಡಲಾಗುವುದು. ಅರ್ಜಿದಾರರ ಜತೆ ಬೇರೆ ಯಾರಿಗೂ ಪ್ರವೇಶವಿರುವುದಿಲ್ಲ. ಜೂನ್-30ರ ವರೆಗೆ ಚಾಲನಾ ಅನುಜ್ಞಾ ಪತ್ರ ಅವಧಿ ಚಾಲ್ತಿ ಇರುವುದರಿಂದ ಸಾರ್ವಜನಿಕರು ಚಾಲನಾ ಅನುಜ್ಞಾ ಪತ್ರದ ಅವಧಿ ಮುಗಿದಿದೆ ಎಂದು ಭಯ ಪಡುವ ಅಗತ್ಯವಿಲ್ಲ. ಹೊಸ ಕಲಿಕಾ ಲೈಸೆನ್ಸ್ ಪರೀಕ್ಷೆಗಳ ಸ್ಲಾಟ್ ಜೂ. 15ರ ಅನಂತರ ನೀಡಲಾಗುವುದು. ಹಳೆ ಸ್ಲಾಟ್ ದಿನಾಂಕದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್. ಎಂ. ವರ್ಣೇಕರ್ ತಿಳಿಸಿದ್ದಾರೆ.