Advertisement

ಮಂಗಳೂರು: ಇಂದಿನಿಂದ ದೇಶೀಯ ಯಾನ: ಮುಂಬಯಿ, ಚೆನ್ನೈಯಿಂದ ಬರುವವರಿಗೆ 7 ದಿನ ಕ್ವಾರಂಟೈನ್‌

07:29 AM May 25, 2020 | mahesh |

ಮಂಗಳೂರು: ದೇಶೀಯ ವಿಮಾನ ಸೇವೆ ಆರಂಭಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇ 25ರಿಂದ 6 ವಿಮಾನಗಳು ಹಾರಾಟ ಆರಂಭಿಸಲಿವೆ. ಆರೂ ವಿಮಾನಗಳ ವೇಳಾಪಟ್ಟಿಯನ್ನು ಮೇ 25ರಿಂದ ಜೂನ್‌ 30ರ ವರೆಗೆ ಅನ್ವಯವಾಗುವಂತೆ ನಿಗದಿಗೊಳಿಸಲಾಗಿದೆ. ಆರು ವಿಮಾನಗಳ ಪೈಕಿ ಬೆಂಗಳೂರಿಗೆ 3, ಮುಂಬಯಿಗೆ 2 ಮತ್ತು ಚೆನ್ನೈಗೆ 1 ವಿಮಾನ ಹಾರಾಟ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತೀದಿನ ಬೆಳಗ್ಗೆ 8.35ರಿಂದ ರಾತ್ರಿ 9.35ರ ವರೆಗೆ ವಿಮಾನ ನಿಲ್ದಾಣ ಕಾರ್ಯಾಚರಿಸಲಿದೆ.

Advertisement

ಎರಡು ತಿಂಗಳ ಬಳಿಕ ಆರಂಭ
ಮಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನಯಾನ ಮಾ.22ರಿಂದ ಮತ್ತು ದೇಶೀಯ ವಿಮಾನ ಸಂಚಾರ ಮಾ.25ರಿಂದ ಸ್ಥಗಿತಗೊಂಡಿತ್ತು.

ಜಿಲ್ಲಾಧಿಕಾರಿ ಸಭೆ
ವಿಮಾನ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದ ಹಿನ್ನೆಲೆಯಲ್ಲಿ ಮಂಗಳೂರು ಏರ್‌ಪೋರ್ಟ್‌ನಲ್ಲಿ ಸರ್ವಸಿದ್ಧತೆ ನಡೆಸಲಾಗಿದೆ. ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಸಿಬಂದಿ ಮತ್ತು ಪ್ರಯಾಣಿಕರು ಕೈಗೊಳ್ಳಬೇಕಾದ ಮುನ್ನೆಚ್ಚೆರಿಕೆ ಬಗ್ಗೆ ವಿಮಾನಯಾನ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು ರವಿವಾರ ಮಧ್ಯಾಹ್ನ ಏರ್‌ಪೋರ್ಟ್‌ಗೆ ತೆರಳಿ ಸೋಮವಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಿದರು.

ಇಂದು ಮುಂಬಯಿ ವಿಮಾನ ಅನುಮಾನ
ಸ್ಪೈಸ್‌ಜೆಟ್‌ನ 3 ಮತ್ತು ಇಂಡಿಗೋದ 3 ವಿಮಾನಗಳು ಸೋಮವಾರದಿಂದ ಸಂಚಾರ ಆರಂಭಿಸಲಿವೆ ಎಂದು ಸಂಬಂಧಿತ ಏರ್‌ಲೈನ್ಸ್‌ಗಳು ತಿಳಿಸಿವೆ. ಆದರೆ ಮಹಾರಾಷ್ಟ್ರದಲ್ಲಿ ಕೋವಿಡ್ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮುಂಬಯಿಗೆ ವಿಮಾನ ಸಂಚರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮುಂಬಯಿ
ಏರ್‌ಪೋರ್ಟ್‌ನಲ್ಲಿ ಈ ವಿಮಾನಗಳ ಆಗಮನ, ನಿರ್ಗಮನಕ್ಕೆ ರವಿವಾರ ರಾತ್ರಿಯ ವರೆಗೂ ಅನುಮತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಈ ಮಧ್ಯೆ ಬೆಂಗಳೂರಿಗೆ ಕಡಿಮೆ ಬುಕ್ಕಿಂಗ್‌ ಇರುವ ಹಿನ್ನೆಲೆಯಲ್ಲಿ ಒಂದೆರಡು ವಿಮಾನಗಳ ಆಗಮನ-ನಿರ್ಗಮನದಲ್ಲೂ ವ್ಯತ್ಯಯವಾಗಲಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿದೆ.

ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಗೆ ಅನ್ವಯವಾಗುವ ಮಾದರಿಯ ಕ್ವಾರಂಟೈನ್‌ ನಿಯಮ ಮುಂಬಯಿ ಮತ್ತು ಚೆನ್ನೈಯಿಂದ ಮಂಗಳೂರಿಗೆ ಆಗಮಿಸುವ ವಿಮಾನ ಪ್ರಯಾಣಿಕರಿಗೂ ಇರಲಿದೆ. ಸೋಮವಾರದಿಂದ ಈ ಎರಡು ನಗರಗಳಿಂದ ಬರುವವರು ಜಿಲ್ಲಾಡಳಿತದ ಕ್ವಾರಂಟೈನ್‌ನಲ್ಲಿ 7 ದಿನ ಇರಬೇಕು. ಜಿಲ್ಲಾಡಳಿತ ಈ ಸಂಬಂಧ ಸೂಕ್ತ ವ್ಯವಸ್ಥೆ ಮಾಡಲಿದೆ.
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next