ಮಂಗಳೂರು: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ಕಾರ್ಯಾಚರಣೆಯ ಒತ್ತಡದ ನಡುವೆಯೂ ಗುರುವಾರ ಮಂಗಳೂರು ಮೇಯರ್ ಹಾಗೂ ಮನಪಾದ ಹಿರಿಯ ಅಧಿಕಾರಿಗಳು ಇಲ್ಲಿನ ತುಂಬೆ ಅಣೆಕಟ್ಟಿಗೆ ಭೇಟಿ ನೀಡಿ ನೀರಿನ ಸಂಗ್ರಹದ ಬಗ್ಗೆ ಪರಿಶೀಲನೆ ನಡೆಸಿದರು.
ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಉಪ ಆಯುಕ್ತ ಡಾ. ಸಂತೋಷ್ ಕುಮಾರ್, ಮುಖ್ಯ ಅಭಿಯಂತರ ನರೇಶ್ ಶೆಣೈ ಸೇರಿದಂತೆ ಹಿರಿಯ ಅಧಿಕಾರಿಗಳು ತುಂಬೆ ಅಣೆಕಟ್ಟಿಗೆ ಇಂದು ಬೆಳಗ್ಗೆ ಭೇಟಿ ನೀಡಿದ್ದಾರೆ.
ಬುಧವಾರ ಎಎಂಆರ್ ಅಣೆಕಟ್ಟಿನಿಂದ ನೀರನ್ನು ತುಂಬೆ ಅಣೆಕಟ್ಟಿಗೆ ಹರಿಸಲಾಗಿದ್ದು, ನೀರು 6 ಮೀಟರ್ ಸಂಗ್ರಹವಿದೆ. ಈ ನೀರು ಮುಂದಿನ 50 ದಿನಗಳವರೆಗೆ ನಗರಕ್ಕೆ ಪೂರೈಸಬಹುದಾಗಿದೆ. ಸದ್ಯ ನೀರಿನ ರೇಶನಿಂಗ್ ಅಗತ್ಯವಿಲ್ಲ. ಈ ಬಾರಿ ರೇಶನಿಂಗ್ ಅಗತ್ಯವಾಗಲಿಲ್ಲ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಕಳೆದ ಬಾರಿ ಎಪ್ರಿಲ್ 13ರ ವೇಳೆಗೆ ಎರಡು ಬಾರಿ ಎಎಂಆರ್ ಡ್ಯಾಂನಿಂದ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ನಿನ್ನೆ ಪ್ರಥಮವಾಗಿ ಎಎಂಆರ್ ಡ್ಯಾಂನಿಂದ ತುಂಬೆಗೆ ನೀರು ಹರಿಸಲಾಗಿದೆ. ಕಳೆದ ಬಾರಿ ರೇಶನಿಂಗ್ ವ್ಯವಸ್ಥೆಯ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಎದುರಾಗದು. ಸದ್ಯ ಲಾಕ್ ಡೌನ್‌ನಿಂದಾಗಿ ಸಾಕಷ್ಟು ಕೈಗಾರಿಕೆಗಳು, ಹೊಟೇಲ್‌ಗಳು ಕಾರ್ಯಾಚರಿಸದಿದ್ದರೂ, ನೀರಿನ ಪಂಪಿಂಗ್ ಹಿಂದಿನಂತೆಯೇ ಆಗುತ್ತಿದೆ. ಬೇಡಿಕೆ ಕಡಿಮೆ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ
ಈ ಬಾರಿ ನಗರದ ಜನತೆಗೆ ನೀರಿನ ಕೊರತೆ ಬಾರದು. ಕಳೆದ ಬಾರಿ ಇದೇ ಅವಧಿಯಲ್ಲಿ ಎರಡು ದಿನಗಳಿಗೊಮ್ಮೆ ನೀರು ಕೊಡುವ ಮೂಲಕ ರೇಶನಿಂಗ್ ವ್ಯವಸ್ಥೆ ನಡೆಸಲಾಗಿತ್ತು. ಬಹುತೇಕ ಕೈಗಾರಿಕೆಗಳು ಬಂದ್ ಇದ್ದರೂ, ಎಲ್ಲರೂ ಮನೆಯಲ್ಲಿದ್ದಾರೆ. ಹಾಗಾಗಿ ನೀರಿನ ಉಪಯೋಗ ಹೆಚ್ಚಾಗಿದೆ. ಜೂನ್ ವೇಳೆಗೆ ಮಳೆ ಬಂದರೆ ಈ ಬಾರಿ ನೀರಿನ ಸಮಸ್ಯೆ ಎದುರಾಗದು ಎಂದು ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದ್ದಾರೆ