Advertisement

ಪರಿಸರ ಸ್ನ್ನೇಹಿಯಾಯಿತು ಮಂಗಳೂರು ದೀಪಾವಳಿ

12:26 PM Oct 25, 2017 | |

ಮಹಾನಗರ: ಪರಿಸರ ಸ್ನೇಹಿ ದೀಪಾವಳಿ ಆಚರಣೆಯತ್ತ ನಗರದ ಮಂದಿ ಒಲವು ತೋರಿದ್ದು ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ನಗರದಲ್ಲಿ ಶಬ್ದಮಾಲಿನ್ಯದ ಪ್ರಮಾಣ ಶೇ. 15ರಷ್ಟು ಕಡಿಮೆಯಾಗಿದೆ. ಆದರೆ ವಾಯುಮಾಲಿನ್ಯದಲ್ಲಿ ಸಾಮಾನ್ಯ ದಿನಕ್ಕೆ ಹೋಲಿಸಿದರೆ ತುಸು ಹೆಚ್ಚಳವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದ ನಾನಾ ಕಡೆಗಳಲ್ಲಿ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯದ ತಪಾಸಣೆ ನಡೆಸಿತ್ತು.

ಯಾವ ರೀತಿ ತಪಾಸಣೆ?
ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವೊಂದು ಖಾಸಗಿ ಸಂಸ್ಥೆಯ ಜತೆ ಸೇರಿಕೊಂಡು ಟೌನ್‌ಹಾಲ್‌(ವಾಣಿಜ್ಯ ಪ್ರದೇಶ), ಸುರತ್ಕಲ್‌, ಕುಂಜತ್ತಬೈಲ್‌ ಮತ್ತು ಕಾವೂರು, ಬೈಕಂಪಾಡಿಯ ವಸತಿ ಪ್ರದೇಶದಲ್ಲಿ ನ. 18, 19 ಮತ್ತು 20ರಂದು ಶಬ್ದ ಮಾಲಿನ್ಯದ ತಪಾಸಣೆ ನಡೆಸಿದೆ. ಟೌನ್‌ ಹಾಲ್‌, ಕುಂಜತ್ತಬೈಲ್‌, ಕಾವೂರಿನಲ್ಲೂ ತಪಾಸಣೆ ನಡೆಸಲಾಗಿದೆ. ದೀಪಾವಳಿ ಹಬ್ಬಕ್ಕೂ ಮೊದಲು ಮತ್ತು ಹಬ್ಬದ ದಿನಗಳಲ್ಲಿ ಹಗಲು ಮತ್ತು ರಾತ್ರಿಯ ವೇಳೆಯಲ್ಲಿ ಎರಡು ಹಂತಗಳಲ್ಲಿ ತಪಾಸಣೆ ನಡೆಸಲಾಗಿದೆ.

ವಾಯುಮಾಲಿನ್ಯದಲ್ಲಿ ಹೆಚ್ಚಳ
ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದೀಪಾವಳಿ ಸಮಯದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಆದರೆ ಮಿತಿ ಮೀರಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಮಾಮೂಲಿಯಾಗಿ 1000 ಲೀಟರ್‌ ಗಾಳಿಯಲ್ಲಿ 100 ಪಿಎಂ 10 ಸಾಂದ್ರತೆ ಇರಬೇಕು. ನ. 17ರಂದು ಕಾವೂರಿನಲ್ಲಿ 49 ಪಿಎಂ 10 ಸಾಂದ್ರತೆ ಇದ್ದು, 18ರಂದು 51, 19ರಂದು 56 ಮತ್ತು 20ರಂದು 77ಕ್ಕೆ ಹೆಚ್ಚಿದೆ. ಕುಂಜತ್ತಬೈಲಿನಲ್ಲಿ ನ. 17ರಂದು 42.7ಪಿಎನ್‌ 10, 18ರಂದು 73,  19ರಂದು 69, 20ರಂದು 77ಕ್ಕೆ ಏರಿಕೆಯಾಗಿದೆ. 

ಢಂ ಢಂ ಪಟಾಕಿಗೆ ಬೇಡಿಕೆ ಕಮ್ಮಿ
ಅಂಗಡಿ ಮಾಲಕರೇ ಹೇಳುವಂತೆ, ಈ ಬಾರಿ ಹೆಚ್ಚು ಸದ್ದು ಮಾಡುವ ಪಟಾಕಿಗೆ ಬೇಡಿಕೆ ಕಡಿಮೆ ಇತ್ತಂತೆ. ಈ ಬಾರಿ ಶಬ್ದರಹಿತ, ಅಥವಾ ಕಡಿಮೆ ಶಬ್ದದ ಪಟಾಕಿಗಳನ್ನು ಖರೀದಿಸಲು ಜನರು ಒಲವು ತೋರುತ್ತಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಳವಡಿಕೆಯಿಂದಲೂ ಪಟಾಕಿ ವ್ಯಾಪಾರ ಕುಸಿದೆ. ಪಟಾಕಿಗೆ ಶೇ. 28ರಷ್ಟು ಜಿಎಸ್‌ಟಿ ವಿಧಿಸಿದ್ದರಿಂದ ಪಟಾಕಿ ದರವೂ ಹೆಚ್ಚಿದ್ದು, ಶೇ.30ರಷ್ಟು ವಹಿವಾಟು ಕುಂಠಿತಗೊಂಡಿತ್ತು.

Advertisement

ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತ, ಪರಿಸರ ಮಾಲಿನ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳು ಸಹಿತ ಆಂದೋಲನವನ್ನು ಕೈಗೊಳ್ಳಲಾಗಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಬ ‘ಪಟಾಕಿ ಬೇಡ’ ಎಂಬ ಬ್ಯಾನರ್‌ನಡಿ ಅನೇಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶಾಲೆ ಗಳಲ್ಲಿ ದೀಪ ಬೆಳಗಲಿ ಎಂಬ ಸಾಕ್ಷ್ಯಚಿತ್ರ ಸಿಡಿಯನ್ನು ನೀಡಲಾಗಿತ್ತು. ಆಕಾಶವಾಣಿ, ದೂರ ದರ್ಶನಗಳಲ್ಲಿ ಪಟಾಕಿ ದುಷ್ಪರಿಣಾಮದ ಬಗ್ಗೆ ಸರಣಿ ಪ್ರಕಟವಾಗುತ್ತಿತ್ತು. ಜಿಲ್ಲಾಡಳಿತವೂ ಪಟಾಕಿ ಕುರಿತಾಗಿ ಅನೇಕ ನಿಯಮಗಳನ್ನು ವಿಧಿಸಿತ್ತು. ಪಟಾಕಿ ಖರೀದಿ ಕ್ಷೀಣಿಸಲು ಇವೂ ಕಾರಣ ಎನ್ನಬಹುದು.

ಸಮಾಜದಲ್ಲಿ ಅರಿವು ಮೂಡಿದೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶಬ್ದ ಮಾಲಿನ್ಯದ ಪ್ರಮಾಣದಲ್ಲಿ ಸುಮಾರು ಶೇ. 15ರಷ್ಟು ಕಡಿಮೆಯಾಗಿದೆ. ಪಟಾಕಿ ಸಿಡಿಸುವುದರಿಂದ ಏನೆಲ್ಲ ಅನಾಹುತಗಳು ಸಂಭವಿಸುತ್ತದೆ ಎನ್ನುವುದರ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಚಲನಚಿತ್ರವನ್ನು ಬಿತ್ತರಿಸಿದ್ದೇವೆ.
– ಜಯಪ್ರಕಾಶ್‌ ನಾಯಕ್‌,
ಹಿರಿಯ ವೈಜ್ಞಾನಿಕ ಅಧಿಕಾರಿ

ವ್ಯಾಪಾರ ಕುಂಠಿತ
ಕಳೆದ ವರ್ಷಕ್ಕೆ ಹೋಲಿಸಿದರೆ ಪಟಾಕಿ ವ್ಯಾಪಾರದಲ್ಲಿ ಕುಸಿತ ಕಂಡು ಬಂದಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ ದಿಲ್ಲಿ ಸರಕಾರಕ್ಕೆ ಆದೇಶ ನೀಡಿತ್ತು. ಇದರ ಪರಿಣಾಮ ಉಳಿದ ರಾಜ್ಯಗಳ ಮೇಲೂ ಬಿದ್ದಿದೆ. ಸಾಮಾಜಿಕ ಜಾಲ ತಾಣಗಳು ಸಹಿತ ಹಲವು ಮಾಧ್ಯಮಗಳಲ್ಲಿ ಜನಜಾಗೃತಿ ಹೆಚ್ಚಾಗಿದೆ ಮತ್ತು ಜಿಎಸ್‌ಟಿಯೂ ಕಾರಣ ಎಂದು ಹೇಳಬಹುದು.
ಮುರಳೀಧರ,
ಪಟಾಕಿ ವ್ಯಾಪಾರಸ್ಥ

ಪರಿಸರಸ್ನೇಹಿ ಆಚರಣೆ
ಈ ಬಾರಿ ಪಟಾಕಿ ರಹಿತ ದೀಪಾವಳಿಯನ್ನು ಆಚರಿಸಿದ್ದೇನೆ. ದೀಪಾವಳಿ ಬೆಳಕಿನ ಹಬ್ಬವಾದ್ದರಿಂದ ಮನೆಯನ್ನು ದೀಪದಿಂದ ಅಲಂಕರಿಸಿ, ಗೂಡುದೀಪದೊಂದಿಗೆ ದೀಪಾವಳಿ ಆಚರಿಸಿದ್ದೇನೆ.
– ಕೌಶಿಕ್‌ ಕುಮಾರ್‌, ಉದ್ಯೋಗಿ

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next