Advertisement

ಮಂಗಳೂರಿನ ಅಭಿವೃದ್ಧಿ ಪುತ್ತೂರಿನಲ್ಲಿ ಸಾಧ್ಯ

11:37 PM Feb 25, 2021 | Team Udayavani |

ಒಂದು ಜಿಲ್ಲೆಯಾಗಿ ರೂಪುಗೊಳ್ಳುವುದರಿಂದ ಹೊಸ ಜಿಲ್ಲೆಯ ಕೇಂದ್ರ ಸ್ಥಾನದೊಂದಿಗೆ ಜಿಲ್ಲೆಯ ಇತರ ತಾಲೂಕುಗಳ ನಗರಗಳೂ ಅಭಿವೃದ್ದಿ ಹೊಂದಲು ಅವಕಾಶ ಸಿಗುತ್ತದೆ. ದೊಡ್ಡ ಜಿಲ್ಲೆಯೊಳಗೆ ಸೇರಿಕೊಂಡಿದ್ದರೆ ಇಂತಹ ಅವಕಾಶಗಳು ಕಡಿಮೆ ಎಂದೇ ಹೇಳಬಹುದು. ಗ್ರಾಮಾಂತರ ಪ್ರದೇಶಗಳೇ ಇರುವ ಪುತ್ತೂರು ಜಿಲ್ಲೆಯಾದರೆ ಇದರಡಿಯ ಹಲವು ನಗರಗಳು ಸಮಾನವಾಗಿ ಬೆಳೆಯಲು ಸಾಧ್ಯವಿದೆ.

Advertisement

ಪುತ್ತೂರು: ಶಿಕ್ಷಣ, ಆರೋಗ್ಯ ಹಾಗೂ ಇತರ ವಾಣಿಜ್ಯ ಆಧಾರಿತ ಚಟುವಟಿಕೆಗೆ ಮಂಗಳೂರು ನಗರ ದ.ಕ. ಜಿಲ್ಲೆಗೆ ಕೇಂದ್ರ ಸ್ಥಾನದಲ್ಲಿರುವಂತೆ, ಪುತ್ತೂರು ಜಿಲ್ಲೆಯಾದಲ್ಲಿ ನಾಲ್ಕು ಗ್ರಾಮಾಂತರ ತಾಲೂಕುಗಳಿಗೆ ಪುತ್ತೂರು ನಗರವು ಕೇಂದ್ರ ಸ್ಥಾನವಾಗಿ ಬೆಳೆಯಬಹುದು.

ಮಂಗಳೂರಿನ ಪ್ರಗತಿಯ ಚಿತ್ರಣ ಕ್ರಮೇಣ ಪುತ್ತೂರಿನಲ್ಲಿಯು ಅನುಷ್ಠಾನಿಸಲು ಜಿಲ್ಲೆ ವೇದಿಕೆ ಒದಗಿಸಬಹುದು. ಜಿಲ್ಲಾ ಕೇಂದ್ರವೊಂದು ಮೂಲ ಸೌಕರ್ಯ ಹೊಂದಿರಬೇಕಿರುವುದು ಅದರ ಅನಿವಾರ್ಯತೆಗೆ ಕಾರಣವೂ ಹೌದು. ಇದು ಸಂಚಾರ, ಸಂಪರ್ಕ, ಶಿಕ್ಷಣ, ಆರೋಗ್ಯ ಸಹಿತ ವಿವಿಧ ವಲಯಗಳ ಬೆಳವಣಿಗೆ, ಚೇತರಿಕೆಗೆ ನೆರವಾಗುವ ಒಂದು ಮಹತ್ವದ ಹೆಜ್ಜೆಯೂ ಆಗುತ್ತದೆ. ಉದಾಹರಣೆಗೆ ಮಂಗಳೂರಿನ ಸ್ಮಾರ್ಟ್‌ ಸಿಟಿ ಕಲ್ಪನೆ ಪುತ್ತೂರಿಗೂ ಕಾಲಿಡ ಬಹುದು. ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಇರುವ ಕಾರಣ ಕೃಷಿ ಆಧಾರಿತ ಘಟಕಗಳ ಸ್ಥಾಪನೆಗೆ ಹೊರಗಿನಿಂದ ಬಂಡವಾಳ ಹೂಡಿಕೆಗೆ ಅವಕಾಶ ಸೃಷ್ಟಿಯಾಗಬಹುದು. ರಸ್ತೆ, ರೈಲ್ವೇ ಸಂಚಾರ ಮಾರ್ಗ ಉಭಯ ಜಿಲ್ಲೆಗಳ ನಡುವಿನ ಸೇತುವಾಗಿ ಬಳಸಬಹುದು. ಇದೇ ರೀತಿ ಮಂಗಳೂರು ನಗರದ ಸುಧಾರಣೆಗೆ ಕಾರಣವಾದ ಹಲವು ಅಂಶಗಳು ಪುತ್ತೂರು ನಗರದ ಬೆಳವಣಿಗೆಗೂ ಪೂರಕವಾಗಬಹುದು.

ಸುಧಾರಣೆಯ ಪರಿಣಾಮ ಮಂಗಳೂರನ್ನು ಆರ್ಥಿಕ ಶಕ್ತಿಯಾಗಿ ರೂಪಿಸಿ ಜಿಲ್ಲೆಯ ಬೆಳವಣಿಗೆಗೆ ಕೊಡುಗೆ ನೀಡಿದೆಯೋ ಅದೇ ರೀತಿ ಪುತ್ತೂರು ನಗರವು ಗ್ರಾಮಾಂತರ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡ ಬಹುದು. ದ.ಕ. ಜಿಲ್ಲೆಯಲ್ಲಿ ಮಂಗಳೂರಿಗೆ ಪರ್ಯಾಯವಾಗಿ ಪುತ್ತೂರು ನಗರದ ಮುಖೇನ ಇನ್ನೊಂದು ನಗರ ಸೃಷ್ಟಿ ಯಾಗಲು ಸಾಧ್ಯವಿದೆ. ಇದರ ಜತೆಗೆ ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ತಾಲೂಕುಗಳಿಗೆ ಪುತ್ತೂರು ನಗರವು ಉತ್ತೇಜನೆ ನೆಲೆಯಾಗಿಯೂ ರೂಪುಗೊಳ್ಳಬಹುದು ಮಾತ್ರ ವಲ್ಲದೆ ಇಲ್ಲಿನ ಮೂಲ ಸೌಕರ್ಯವೂ ವೃದ್ಧಿಗೊಳ್ಳಲು ಕಾರಣ ವಾಗುತ್ತದೆ. ಇದು ಜಿಲ್ಲಾ ಕೇಂದ್ರ ರಚನೆಯಿಂದ ಬೀರುವ ಪ್ರಮುಖ ಪರಿಣಾಮಕಾರಿ ಅಂಶ ಎಂದೇ ಭಾವಿಸಲಾಗಿದೆ.

ವಿಸ್ತರಿತ ನಗರಕ್ಕೆ ದಿಕ್ಸೂಚಿ
ಯಾವುದೇ ನಗರಕ್ಕೆ ಮೂಲ ಸೌಕರ್ಯ ಒದಗಿಸಬೇಕಾದರೆ ಅದಕ್ಕೆ ದೂರದೃಷ್ಟಿತ್ವ ಯೋಜನೆ, ಸಾಕಷ್ಟು ಅನುದಾನಗಳ ಅಗತ್ಯವಿದೆ. ಹೊಸ ಜಿಲ್ಲೆ ಅಂತಹ ಅವಕಾಶವೊಂದನ್ನು ತೆರೆದಿಡುವ ಸಾಮರ್ಥ್ಯ ಹೊಂದಿದೆ. ರಿಂಗ್‌ ರೋಡ್‌, ಪಾರ್ಕಿಂಗ್‌, ಸುಸಜ್ಜಿತ ತೆರೆದ, ಒಳಚರಂಡಿ ವ್ಯವಸ್ಥೆ, ವಲಯಗಳ ಸ್ಥಾಪನೆ ಮೊದಲಾದ ಮೂಲಸೌಕರ್ಯಗಳ ಅಗತ್ಯತೆಗಳಿಗೆ ಸ್ಪಂದನೆ ಸಿಗಬಹುದು. ಸೀಮಿತ ವ್ಯಾಪ್ತಿಯೊಳಗಿನ ಚಟುವಟಿಕೆಗಳು ವಿವಿಧ ಭಾಗಗಳಿಗೆ ಹರಡಿ ಜಿಲ್ಲಾ ಕೇಂದ್ರದ ವಿಸ್ತರಿತ ನಗರವಾಗುವ ಅವಕಾಶ ಇದೆ. ಭವಿಷ್ಯದ 15-20 ವರ್ಷಗಳ ದೃಷ್ಟಿಕೋನ ಇರಿಸಿ ಪುತ್ತೂರು ನಗರವನ್ನು ಬೆಳೆಸಬಹುದು.

Advertisement

ಮಂಗಳೂರು ಮಹಾನಗರಪಾಲಿಕೆ ಬೃಹತ್‌ ಮಹಾನಗರ ಪಾಲಿಕೆ ಆಗುವ ಹಂತಕ್ಕೆ ತಲುಪಿದಂತೆ, ಪುತ್ತೂರು ಗ್ರಾಮಾಂತರ ತಾಲೂಕಿನ ನಗರಗಳಿಗೆ ಅಂತಹದೊಂದು ಅವಕಾಶ ಲಭಿಸಲಿದೆ. ಪುತೂರು ನಗರಸಭೆ ನಗರಪಾಲಿಕೆ ಆಗುವ ಅವಕಾಶ ಸಿಗಬಹುದು. ಅದರೊಂದಿಗೆ ಸುಳ್ಯ, ಬೆಳ್ತಂಗಡಿ, ಕಡಬ ನಗರ ಪಂಚಾಯತ್‌ನಿಂದ ಪುರಸಭೆ, ಬಂಟ್ವಾಳ ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೆ ಏರಿಸಬೇಕು ಎಂಬ ಕೂಗಿಗೆ ಬಲ ಸಿಗಲಿದೆ.

ಸಂಚಾರ ವ್ಯವಸ್ಥೆಯ ಸುಧಾರಣೆಗೆ ಎರಡನೆ ಬಸ್‌ ನಿಲ್ದಾಣ ಸ್ಥಾಪಿಸಬೇಕು ಎಂಬ ಬಗ್ಗೆ ಪ್ರಸ್ತಾವನೆಯಿದೆ. ಜತೆಗೆ ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಬೇಡಿಕೆ ಇದ್ದು ಅದಕ್ಕಾಗಿ 40 ಎಕರೆ ಜಾಗ ಕಾದಿರಿಸಲಾಗಿದೆ. ಸಾಗರೋತ್ಪನ್ನ ತಯಾರಿ ಘಟಕ, ಕೈಗಾರಿಕೆ ಕಾರಿಡಾರ್‌ ಸ್ಥಾಪನೆ ಮೊದಲಾದಿ ಯೋಜನೆಗಳನ್ನು ಪುತ್ತೂರು ನಗರದೊಳಗೆ ಅನುಷ್ಠಾನಿಸಲು ಜಿಲ್ಲಾ ಕೇಂದ್ರ ಶಕ್ತಿ ತುಂಬಲಿದೆ.

ಹಲವು ತಾಲೂಕಿನ ಸಂಪರ್ಕ
ಈಗಾಗಲೇ ಉಪವಿಭಾಗ ವ್ಯಾಪ್ತಿಯ ಮಹಿಳಾ ಠಾಣೆ, ಎಎಸ್ಪಿ ಕಚೇರಿ, ಎಸಿ ಕಚೇರಿ, ಕಾರ್ಕಳ, ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ವ್ಯಾಪ್ತಿಯನ್ನು ಒಳಗೊಂಡ ವಿಭಾ ಗೀಯ ಅಂಚೆ ಕಚೇರಿ, ಮಡಿಕೇರಿ, ಸುಳ್ಯ, ಪುತ್ತೂರು, ಬಿ.ಸಿ.ರೋಡು, ಧರ್ಮಸ್ಥಳ ಘಟಕದ ವ್ಯಾಪ್ತಿಯೊಂದಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಗಳು ಪುತ್ತೂರು ನಗರದೊಳಗಿವೆ. ಹೀಗಾಗಿ ಕನಿಷ್ಠ ಐದರಿಂದ ಆರು ತಾಲೂಕಿಗೆ ಪುತ್ತೂರು ನಗರ ವಿವಿಧ ಕಾರಣಗಳಿಂದ ಕೇಂದ್ರ ಸ್ಥಾನದಲ್ಲಿದೆ. ಜಿಲ್ಲೆಯಾದಲ್ಲಿ ಅಂತಹ ಇನ್ನಷ್ಟು ಕಚೇರಿಗಳ ಸ್ಥಾಪನೆಗೆ ಕಾರಣವಾಗಬಹುದು. ಭವಿಷ್ಯದ ಗ್ರಾಮಾಂತರ ತಾಲೂಕಿನ ಸಂಪರ್ಕವು ಮತ್ತಷ್ಟು ಹತ್ತಿರವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next